ತಾಲೂಕಿನ ದಬ್ಬೇಘಟ್ಟ ಹೋಬಳಿ ನಾಗಲಾಪುರ ಬಳಿ ಇರುವ ಕುರುಬರ ಹೊಸಳ್ಳಿ (ಕೆ.ಹೊಸಳ್ಳಿ) ಗ್ರಾಮದಲ್ಲಿರುವ ನಾಲ್ಕು ಎಕರೆ ಸರ್ಕಾರಿ ಜಮೀನನ್ನು ಸರ್ಕಾರವೇ ವಶಕ್ಕೆ ತೆಗೆದುಕೊಂಡು ಅಲ್ಲಿ ಹಾಸ್ಟೆಲ್ ಅಥವಾವಿದ್ಯುತ್ ಪ್ರಸರಣ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ದಬ್ಬೇಘಟ್ಟ ಹೋಬಳಿ ನಾಗಲಾಪುರ ಬಳಿ ಇರುವ ಕುರುಬರ ಹೊಸಳ್ಳಿ (ಕೆ.ಹೊಸಳ್ಳಿ) ಗ್ರಾಮದಲ್ಲಿರುವ ನಾಲ್ಕು ಎಕರೆ ಸರ್ಕಾರಿ ಜಮೀನನ್ನು ಸರ್ಕಾರವೇ ವಶಕ್ಕೆ ತೆಗೆದುಕೊಂಡು ಅಲ್ಲಿ ಹಾಸ್ಟೆಲ್ ಅಥವಾವಿದ್ಯುತ್ ಪ್ರಸರಣ ಕೇಂದ್ರ ತೆರೆಯಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.ಇಲ್ಲಿಯ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ ಗ್ರಾಮಸ್ಥರು ಸರ್ಕಾರಿ ಜಮೀನನ್ನು ಗ್ರಾಮದಲ್ಲಿರುವ ಬಡವರು ಉಳುಮೆ ಮಾಡಿಕೊಂಡು ತಮ್ಮ ಜೀವನ ನಿರ್ವಹಿಸುತ್ತಿದ್ದರು. ಆದರೆ ಗ್ರಾಮದ ಕೆಲವು ಮಂದಿ ತಮಗೆ ಸಾಕಷ್ಟು ಜಮೀನಿದ್ದರೂ ಸಹ ಈ ಸರ್ಕಾರಿ ಜಮೀನಿಗೂ ಕಣ್ಣು ಹಾಕಿ ಉಳುಮೆ ಮಾಡಿದ್ದಾರೆ. ಈ ಕುರಿತಂತೆ ಆ ಜಮೀನು ತಮ್ಮದೇ ಎಂದು ಗ್ರಾಮಸ್ಥರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಕೂಡಲೇ ಈ ಸರ್ಕಾರಿ ಜಮೀನನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನು ಕೆಲವು ಗ್ರಾಮಸ್ಥರು ಪ್ರಶ್ನಿಸಿದ ವೇಳೆ ಮಾತಿಗೆ ಮಾತಿಗೆ ಬೆಳೆದು ಗಲಾಟೆ ನಡೆದಿದೆ. ಆದರೆ ಅಶೋಕ, ಚಂದ್ರಯ್ಯ, ಲೋಕೇಶ್ ಎಂಬುವವರು ತಮ್ಮ ಮೇಲೆ ನಾಗರಾಜ, ಆನಂದ್, ನಾಗೇಶ್, ಮನೋಜ್, ಮತ್ತು ಮನು ಎಂಬುವವರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಐವರ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ಸೋಮವಾರ ಸಾಯಂಕಾಲ ನಡೆದ ಮಾತಿನ ಚಕಮಕಿ ವೇಳೆ ದಲಿತ ಸಮುದಾಯಕ್ಕೆ ಸೇರಿದ ಲಲತಾ ಎಂಬ ಮಹಿಳೆಯ ಮೇಲೆ ದಬ್ಬಾಳಿಕೆ ನಡೆಸಿ, ಜಾತಿ ನಿಂದನೆ ಮಾಡಿದ ಘಟನೆ ನಡೆದಿದೆ. ತಾವುಗಳು ಈ ಸಂಬಂದ ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ಪಟೇಲ್ ರಮೇಶ್ ಗ್ರಾಮದಲ್ಲಿದ್ದ ಗೋಕಟ್ಟೆಯನ್ನು ಕೆಲವು ಮಂದಿ ಹಾಳುಗೆಡವಿ ದುರುಪಯೋಗಪಡಿಸಿಕೊಂಡಿದ್ದಾರೆ. ಈಗ ಪುನಃ ಸರ್ಕಾರಿ ಜಮೀನಿಗೆ ಕಣ್ಣು ಹಾಕಿ ಅದನ್ನೂ ತಮ್ಮ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಸರ್ಕಾರಿ ಜಮೀನು ಕೆಲವೇ ಮಂದಿಯ ಸ್ವತ್ತಾಗುವ ಬದಲು ಸಾರ್ವಜನಿಕರ ಉಪಯೋಗಕ್ಕೆ ಬರಲಿ ಎಂಬ ದೃಷ್ಠಿಯಿಂದ ಸರ್ಕಾರ ಕೂಡಲೇ ವಶಪಡಿಸಿಕೊಳ್ಳಲಿ. ಜಮೀನಿನ ವಿವಾದದಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ. ಅದನ್ನು ಪೊಲೀಸರು ವಿಚಾರಣೆ ನಡೆಸಿ ಪ್ರಕರಣವನ್ನು ಕೈಬಿಡಬೇಕು. ಗ್ರಾಮದಲ್ಲಿ ದಬ್ಬಾಳಿಕೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ದಲಿತ ಸಮುದಾಯದ ಮಹಿಳೆಗೆ ಆಗಿರುವ ಅವಮಾನದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.ಕೋಟ್...
ನಮ್ಮ ಗ್ರಾಮದಲ್ಲಿರುವ ಸುಮಾರು 4 ಎಕರೆಗಿಂತಲೂ ಅಧಿಕ ವಿಸ್ತಾರದ ಜಮೀನನ್ನು ಕೆಲವರು ತಮ್ಮದೆಂದು ವಾದಿಸುತ್ತಾ ದಬ್ಬಾಳಿಕೆ ನಡೆಸಿದ್ದಾರೆ. ಇದನ್ನು ನಿಲ್ಲಿಸಿ ಈ ಕೂಡಲೇ ಜಿಲ್ಲಾಡಳಿತ ತನ್ನ ವಶಕ್ಕೆ ಪಡೆಯಬೇಕು. - ಗ್ರಾಮಸ್ಥರು.ಈ ಸಂದರ್ಭದಲ್ಲಿ ಗ್ರಾಮದ ಗುಡಿಗೌಡರಾದ ಕೆಂಪನಂಜಯ್ಯ, ಮುಖಂಡರಾದ ಹರವಣ್ಣ, ಗೋವಿಂದಪ್ಪ, ಚಂದ್ರಯ್ಯ, ನಾಗೇಶ್ ಸೇರಿದಂತೆ ಹಲವರು ಇದ್ದರು.