ತಾಲೂಕಿನ ದಬ್ಬೇಘಟ್ಟ ಹೋಬಳಿ ಗೂರಲಮಠ ಗ್ರಾಮದ ಸರ್ವೇ ನಂಬರ್ 130ರಲ್ಲಿನ ಇನಾಂ ಜಮೀನಿನ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿರುವ ಹದ್ದಿನ ಗಿಡದ ಹಳ್ಳವನ್ನು ಮುಕ್ತಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕನ್ನಡಪ್ರಭವಾರ್ತೆ ತುರುವೇಕೆರೆ
ತಾಲೂಕಿನ ದಬ್ಬೇಘಟ್ಟ ಹೋಬಳಿ ಗೂರಲಮಠ ಗ್ರಾಮದ ಸರ್ವೇ ನಂಬರ್ 130ರಲ್ಲಿನ ಇನಾಂ ಜಮೀನಿನ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿರುವ ಹದ್ದಿನ ಗಿಡದ ಹಳ್ಳವನ್ನು ಮುಕ್ತಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಈ ಹದ್ದಿನಗಿಡದ ಹಳ್ಳದ ಮೂಲಕ ಬೇರೆಡೆಗೆ ಸಾಗಲು ನೂರಾರು ರೈತಾರು ಓಡಾಡಲು ಅನುಕೂಲವಾಗಿದೆ. ಆದರೆ ಈ ಜಾಗವನ್ನು ಪಕ್ಕದ ಜಮೀನುದಾರರು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ. ಜನರು ಓಡಾಡದಂತೆ ಅಲ್ಲಿಗೆ ವಿವಿಧ ಕಲ್ಮಷಗಳನ್ನು ತುಂಬಿ ತೊಂದರೆ ನೀಡುತ್ತಿದ್ದಾರೆ. ಈ ಜಾಗದ ಪಕ್ಕದಲ್ಲಿ ಗ್ರಾಮ ದೇವತೆ ಉಡುಸಲಮ್ಮ ದೇವಿ ದೇವಾಲಯವಿದೆ. ಭಕ್ತರು ತಮ್ಮ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಲು ಸನಿಹದಲ್ಲೇ ಇರುವ ಕೆರೆಗೆ ಹೋಗಲು ಈ ಹಳ್ಳ ಅಗತ್ಯವಾಗಿದೆ. ಈಗ ಈ ಹಳ್ಳವನ್ನೂ ಮುಚ್ಚಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ತಹಸೀಲ್ದಾರ್ ರಿಗೆ ದೂರು ಸಲ್ಲಿಸಿದ್ದಾರೆ. ಗೂರಲಮಠದ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಕಂದಾಯ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹದ್ದಿನಗಿಡದ ಹಳ್ಳದ ಪಕ್ಕದ ಜಮೀನಿನ ಮಾಲೀಕರು ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಲು ಬಿಡದೇ ತಡೆ ಹಿಡಿದರು. ತಮ್ಮ ಜಮೀನಿನ ಅಳತೆ ಮಾಡುವಂತೆ ಇತರೆಯವರ ಜಮೀನನ್ನೂ ಸಹ ಅಳತೆ ಮಾಡಿ. ನಾವೂ ಸಹ ತಹಸೀಲ್ದಾರ್ ಗೆ ದೂರು ಸಲ್ಲಿಸಿದ್ದೇವೆ. ಅದನ್ಯಾಕೆ ಪರಿಗಣಿಸಿಲ್ಲ ಎಂದು ತಕರಾರು ತೆಗೆದರು. ದಾಖಲೆಯಲ್ಲಿ ತಮ್ಮ ಜಮೀನಿನ ಪಕ್ಕದಲ್ಲಿ ಹಳ್ಳ ಎಂದು ಇದೆ. ಆದರೆ ಗ್ರಾಮದ ಕೆಲವರು ಇಲ್ಲಿ ರಸ್ತೆ ನಿರ್ಮಾಣ ಮಾಡಿಸಿ ನಮಗೆ ತೊಂದರೆ ಕೊಡಬೇಕೆಂದು ಉದ್ದೇಶಿಸಿದ್ದಾರೆ. ಇದರಿಂದ ನಮ್ಮ ಜಮೀನಿಗೆ ತೊಂದರೆಯಾಗುತ್ತದೆ. ಹಾಗಾಗಿ ತಾವು ಇಲ್ಲಿ ರಸ್ತೆ ತೆರವು ಮಾಡಲು ಬಿಡುವುದಿಲ್ಲ ಎಂದು ಹಠ ಹಿಡಿದರು. ಇದರಿಂದ ಅಸಹಾಯಕರಾದ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳಿಗೆ ಈ ಕುರಿತು ವರದಿ ಸಲ್ಲಿಸಿ ಮುಂದೆ ರಸ್ತೆ ತೆರವುಗೊಳಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗ್ರಾಮದೇವತೆ ಉಡುಸಲಮ್ಮ ದೇವಾಲಯದ ಆವರಣಕ್ಕೆ ಹೊಂದಿಕೊಂಡಿರುವ ಹದ್ದಿನಗಿಡದ ಹಳ್ಳದ ಪಕ್ಕ ಇರುವ ಜಮೀನು ಈ ದೇವಾಲಯದ ಆಸ್ತಿಯಾಗಿದೆ. ಆದರೆ ಈ ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿರುವ ಜನ ಸಾರ್ವಜನಿಕರಿಗೆ ಹಾಗೂ ದೇವಾಲಯದ ಧಾರ್ಮಿಕ ಕಾರ್ಯಕ್ಕೂ ತೊಂದರೆಯುಂಟು ಮಾಡಿದ್ದಾರೆ. ತಹಸೀಲ್ದಾರ್ ಹಾಗೂ ಭೂಮಾಪನಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸಾರ್ವಜನಿಕರಿಗೆ ರಸ್ತೆ ಬಿಡಿಸಿಕೊಡಬೇಕು. ಅಲ್ಲದೇ ದೇವಾಲಯದ ಆಸ್ತಿಯನ್ನು ತಮ್ಮ ಕುಟುಂಬದ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಆ ದಾಖಲೆಯನ್ನು ರದ್ದುಗೊಳಿಸಿ ಆ ಎಲ್ಲಾ ಜಮೀನನ್ನು ದೇವಾಲಯದ ಹೆಸರಿಗೇ ಮಾಡಬೇಕು. ತಪ್ಪಿದಲ್ಲಿ ತಾಲೂಕು ಕಚೇರಿ ಮುಂದೆ ಗ್ರಾಮಸ್ಥರೊಡನೆ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ದಬ್ಬೇಘಟ್ಟ ಪಿಎಸಿಎಸ್ ಅಧ್ಯಕ್ಷ ಹರೀಶ್ ಮತ್ತು ಗೂರಲಮಠದ ಕೃಷ್ಣಮೂರ್ತಿ ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.