ಬ್ಯಾಡಗಿ: ರಸ್ತೆ ದುರಸ್ತಿ ಮಾಡಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಆಣೂರು-ಅರಳಿಕಟ್ಟಿ ರಸ್ತೆಯನ್ನು ಮಣ್ಣು ಹಾಕಿ ಸಂಪೂರ್ಣ ಬಂದ್ ಮಾಡಿ ಅಣೂರು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.ಮಂಗಳವಾರ ಬೆಳಗ್ಗೆ ಟ್ರ‍್ಯಾಕ್ಟರ್ ಮೂಲಕ ಮಣ್ಣು ತರಿಸಿದ ಗ್ರಾಮಸ್ಥರು, ರಸ್ತೆಯ ಮೇಲೆ ಮಣ್ಣಿನ ಗುಡ್ಡೆಗಳನ್ನು ಹಾಕಿ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದರು. ಬಳಿಕ ರಸ್ತೆ ಮಧ್ಯದಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿದರು.ಈ ವೇಳೆ ಮಾತನಾಡಿದ ಗ್ರಾಮಸ್ಥ ಮಲ್ಲಪ್ಪ ಬಣಕಾರ, ಅಣೂರು-ಅರಳಿಕಟ್ಟಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಸಂಚಾರ ನಡೆಸುವುದು ತುಂಬಾ ಕಷ್ಟಕರವಾಗಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಇದರಿಂದ ಸಂಚಾರ ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ. ಆದ್ದರಿಂದ ನಾವು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮಸ್ಥ ಬಸವರಾಜ ಹಲಗೇರಿ ಮಾತನಾಡಿ, ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಆಯರ್ವೇದಿಕ ಆಸ್ಪತ್ರೆವರೆಗೂ ಕಾಂಕ್ರಿಟ್ ರಸ್ತೆ ಆಗಬೇಕು ನಂತರ ಡಾಂಬರೀಕರಣ ಮಾಡಿ ಉತ್ತಮ ರಸ್ತೆ ನಿರ್ಮಾಣ ಮಾಡಬೇಕು, ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮೀಣ ಭಾಗದ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ರಸ್ತೆ ದುರಸ್ತಿ ಆಗುವವರೆಗೆ ಇಲ್ಲಿ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕಾಗಿ ಉತ್ತಮ ರಸ್ತೆ ನಿರ್ಮಾಣ ಅತ್ಯವಶ್ಯಕವಾಗಿದೆ. ಆದರೆ ಅಣೂರು ಅರಳಿಕಟ್ಟಿ ರಸ್ತೆ ಇದಕ್ಕೆ ಅಪವಾದವಾಗಿದ್ದು, ದುರಸ್ತಿ ಆಗದ ಹಿನ್ನೆಲೆ ವಾಹನ ಸಂಚಾರ ಭಯಾನಕವಾಗಿದೆ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ರಸ್ತೆ ದುರಸ್ತಿ ಮಾಡಿ ಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಪಿಡಿಒ ಸೇರಿದಂತೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಈ ವೇಳೆ ಹರೀಶ ಬಣಕಾರ, ರಮೇಶ ಹಲಗೇರಿ, ಬಸವರಾಜ ಹಲಗೇರಿ, ಕರಬಸಪ್ಪ ಹಲಗೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ದುರಸ್ತಿಯಾಗದ ರಸ್ತೆ ಬಂದ್ ಮಾಡಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ
ರಸ್ತೆ ದುರಸ್ತಿ ಮಾಡಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಆಣೂರು-ಅರಳಿಕಟ್ಟಿ ರಸ್ತೆಯನ್ನು ಮಣ್ಣು ಹಾಕಿ ಸಂಪೂರ್ಣ ಬಂದ್ ಮಾಡಿ ಅಣೂರು ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.