ಮಂಡ್ಯ- ಮಳವಳ್ಳಿ ಮುಖ್ಯ ರಸ್ತೆಯ ತಾಲೂಕಿನ ಹಳುವಾಡಿ- ಚೀರನಹಳ್ಳಿ ಗ್ರಾಮಗಳ ಮಧ್ಯೆ ಸಿಗುವ ಕಟ್ಟೆ ಹಲವು ವರ್ಷಗಳಿಂದ ನೀರು ತುಂಬದೇ ಹೂಳು ತುಂಬಿ ಪಾಳು ಬಿದ್ದಿದೆ. ಇನ್ನು ಕೆಲವು ವರ್ಷಗಳಲ್ಲೇ ಕಟ್ಟೆ ಮುಚ್ಚಿ ಹೋಗುವ ಹಂತಕ್ಕೂ ಬಂದಿದೆ. ಆದರೆ, ಗ್ರಾಪಂ ಆಡಳಿತ ಮಂಡಳಿ ಕಟ್ಟೆ ಅಭಿವೃದ್ಧಿಗೆ ಮುಂದಾಗಿಲ್ಲ.
ಕನ್ನಡಪ್ರಭ ವಾರ್ತೆ ಮಂಡ್ಯ
ಕಳೆದ 10 ವರ್ಷಗಳಿಂದ ಹೂಳು ತುಂಬಿರುವ ಕಟ್ಟೆಯನ್ನು ಅಭಿವೃದ್ಧಿ ಪಡಿಸದೇ ತಾಲೂಕಿನ ಹಳುವಾಡಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಂಡ್ಯ- ಮಳವಳ್ಳಿ ಮುಖ್ಯ ರಸ್ತೆಯ ತಾಲೂಕಿನ ಹಳುವಾಡಿ- ಚೀರನಹಳ್ಳಿ ಗ್ರಾಮಗಳ ಮಧ್ಯೆ ಸಿಗುವ ಕಟ್ಟೆ ಹಲವು ವರ್ಷಗಳಿಂದ ನೀರು ತುಂಬದೇ ಹೂಳು ತುಂಬಿ ಪಾಳು ಬಿದ್ದಿದೆ. ಇನ್ನು ಕೆಲವು ವರ್ಷಗಳಲ್ಲೇ ಕಟ್ಟೆ ಮುಚ್ಚಿ ಹೋಗುವ ಹಂತಕ್ಕೂ ಬಂದಿದೆ. ಆದರೆ, ಗ್ರಾಪಂ ಆಡಳಿತ ಮಂಡಳಿ ಕಟ್ಟೆ ಅಭಿವೃದ್ಧಿಗೆ ಮುಂದಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಡೀಸಿ, ಜಿಪಂ ಸಿಇಒ ಅವರು ಜಿಲ್ಲೆಯ ತಹಸೀಲ್ದಾರ್‌ಗಳು ಹಾಗೂ ತಾಪಂ ಇಒಗಳ ಸಭೆ ನಡೆಸಿ ಗ್ರಾಮಗಳ ಕೆರೆ, ಕಟ್ಟೆ ಒತ್ತುವರಿ ತೆರವುಗೊಳಿಸಿ, ಹೂಳು ತೆಗೆಸಿ ಅಭಿವೃದ್ಧಿ ಪಡಿಸುವಂತೆ ಸೂಚಿಸಿದ್ದರೂ ಸ್ಥಳೀಯ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ದೂರಿದ್ದಾರೆ.ಈ ಹಿಂದೆ ಆಯ್ಕೆಯಾಗಿದ್ದ ಜನಪ್ರತಿನಿಧಿಗಳಿಗೆ ಗ್ರಾಮದ ಕಟ್ಟೆಯಲ್ಲಿನ ಹೂಳು ತೆಗೆಸಿ ಅಭಿವೃದ್ಧಿ ಪಡಿಸುವಂತೆ ಗ್ರಾಮಸ್ಥರು, ಯುವಕರು ಗ್ರಾಮಸಭೆಯಲ್ಲಿ ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ, ಸದಸ್ಯರ ಬೇಜವಾಬ್ದಾರಿಯಿಂದಾಗಿ ಕಟ್ಟೆಯಲ್ಲಿನ ಹೂಳು ತೆಗೆದು ನೀರು ತುಂಬಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಟ್ಟೆಯಲ್ಲಿ ನೀರು ತುಂಬಿಸಿದರೆ ಬೇಸಿಗೆ ವೇಳೆ ಜಾನುವಾರುಗಳು, ಪಕ್ಷಿಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಅಲ್ಲದೆ ಅಂತರ್ಜಲ ಹೆಚ್ಚಳವಾಗಿ ಸುತ್ತಮುತ್ತಲ ಬೋರ್ ವೆಲ್ ಗಳಲ್ಲಿ ನೀರಿನ ಸಮಸ್ಯೆಗೂ ಪರಿಹಾರ ದೊರಕುತ್ತದೆ. ಆದರೆ, ಜನಪ್ರತಿನಿಧಿಗಳಾಗಲಿ, ಗ್ರಾಪಂ ಅಧಿಕಾರಿಗಳಾಗಲಿ ಕಟ್ಟೆ ಅಭಿವೃದ್ಧಿ ಪಡಿಸಲು ಮನಸ್ಸು ಮಾಡಿಲ್ಲ ಎಂದು ದೂರಿದ್ದಾರೆ.ಕೂಡಲೇ ಡೀಸಿ, ಜಿಪಂ ಸಿಇಒ ಅವರು ತಹಸೀಲ್ದಾರ್ ಹಾಗೂ ತಾಪಂ ಇಒ ಮೂಲಕ ಗ್ರಾಪಂ ಅಧಿಕಾರಿಗಳಿಗೆ ಕಟ್ಟೆಗಳಲ್ಲಿನ ಹೂಳು ತೆಗೆದು ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಿ ನೀರು ತುಂಬಿಸಲು ಸೂಚನೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.