ಬರ ನೀಗಿಸಲು ಹಸಿರೀಕರಣಕ್ಕೆ ಮುಂದಾದ ಬಡದಾಳ ಗ್ರಾಮಸ್ಥರು

| Published : Jul 04 2024, 01:03 AM IST

ಸಾರಾಂಶ

ವರ್ಷದಿಂದ ವರ್ಷಕ್ಕೆ ಆಗುತ್ತಿರುವ ಅರಣ್ಯ ನಾಶ, ಅದರಿಂದಾಗಿ ಆಗುತ್ತಿರುವ ಮಳೆ ಕೊರತೆಯ ದುಷ್ಪರಿಣಾಮನ್ನು ಎಲ್ಲಾ ಜೀವಸಂಕುಲ ಅನುಭವಿಸುವಂತಾಗಿದೆ. ಮಳೆಗಾಲದಲ್ಲೂ ಕುಡಿವ ನೀರಿನ ಸಮಸ್ಯೆ ಉಲ್ಬಣಿಸುವ ಭೀಕರ ದಿನಗಳು ಬಂದಿವೆ.

ರಾಹುಲ್ ಜೀ ದೊಡ್ಡನಿ

ಕನ್ನಡಪ್ರಭ ವಾರ್ತೆ ಬಡದಾಳ/ಚವಡಾಪುರ

ವರ್ಷದಿಂದ ವರ್ಷಕ್ಕೆ ಆಗುತ್ತಿರುವ ಅರಣ್ಯ ನಾಶ, ಅದರಿಂದಾಗಿ ಆಗುತ್ತಿರುವ ಮಳೆ ಕೊರತೆಯ ದುಷ್ಪರಿಣಾಮನ್ನು ಎಲ್ಲಾ ಜೀವಸಂಕುಲ ಅನುಭವಿಸುವಂತಾಗಿದೆ. ಮಳೆಗಾಲದಲ್ಲೂ ಕುಡಿವ ನೀರಿನ ಸಮಸ್ಯೆ ಉಲ್ಬಣಿಸುವ ಭೀಕರ ದಿನಗಳು ಬಂದಿವೆ. ನಮ್ಮ ದುರಾಸೆಗೆ ಗಿಡಮರಗಳನ್ನು ಕಡಿದು ಹಸಿರು ನಾಶ ಮಾಡುತ್ತಿರುವುದಕ್ಕೆ ಪ್ರಕೃತಿ ನಮಗೆ ಭೀಕರ ಬರಗಾಲ, ಕೆಟ್ಟ ಬೇಸಿಗೆ, ಜಲಕ್ಷಾಮ ನೀಡುತ್ತಿದೆ. ಪ್ರಕೃತಿಯನ್ನು ನಾವು ಉಳಿಸಿದರೆ ಅದು ನಮಗೆ ಒಳ್ಳೆಯ ಮಳೆಗಾಲ, ಹೆಚ್ಚು ಸುಡದ ಬೆಸಿಗೆ ನೀಡಿ ಪ್ರಕೃತಿಯನ್ನು ಸಮತೋಲನದಲ್ಲಿಡುತ್ತದೆ. ಈ ಸತ್ಯವನ್ನು ಅರಿತು ಹಸಿರು ಉಳಿಸುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಬರ ನೀಗಿಸುವ ಸಲುವಾಗಿ ಹಸಿರೀಕರಣಕ್ಕೆ ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮಸ್ಥರು ಮುಂದಾಗಿದ್ದಾರೆ.

2 ಸಾವಿರ ಸಸಿ ನೆಡುವ ಕಾರ್ಯಕ್ರಮ: ಅರಣ್ಯ ಇಲಾಖೆ ಪ್ರತಿವರ್ಷ ಗಿಡಮರಗಳನ್ನು ನೆಡುವ ಕೆಲಸ ಮಾಡುತ್ತಿದೆ. ಆದರೆ, ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಹಚ್ಚಿರುವ ಸಸಿಗಳು ಬೆಳೆದು ನೆರಳು ನೀಡುತ್ತಿಲ್ಲ, ಓಡುವ ಮೋಡಗಳನ್ನು ತಡೆದು ನಿಲ್ಲಿಸಿ ಮಳೆ ಸುರಿಸುತ್ತಿಲ್ಲ. ಹೀಗಾಗಿ ಇಲಾಖೆಯ ಜೊತೆಗೆ ಜನರ ಸಾಮಾಜಿಕ ಜವಾಬ್ದಾರಿಯೂ ಬಹಳ ಅವಶ್ಯಕವಾಗಿದೆ ಎನ್ನುವ ಬಡದಾಳದ ಡಾ. ಅಭಿನವ ಚನ್ನಮಲ್ಲ ಶಿವಯೋಗಿಗಳು ಸಾರ್ವಜನಿಕರು ಕೂಡ ಪರಿಸರ ರಕ್ಷಣೆಯ ಹೊಣೆ ಹೊರಬೇಕು ಎನ್ನುತ್ತಾರೆ. ಹೀಗಾಗಿ ಬಡದಾಳ ಗ್ರಾಮದಲ್ಲಿ ಸಾಮಾಜಿಕ ಅರಣ್ಯೀಕರಣಕ್ಕೆ ಮುಂದಾಗಿದ್ದು ಕನೀಷ್ಟ 2 ಸಾವಿರ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಸಂಕಲ್ಪ ಮಾಡಬೇಕೆಂದು ಕರೆ ನೀಡಿದ್ದಾರೆ.

ಅಭಿಯಾನ: ಡಾ. ಚನಮಲ್ಲ ಶಿವಯೋಗಿಗಳ ಸಂಕಲ್ಪದಂತೆ ಬಡದಾಳ ಗ್ರಾಮದಲ್ಲಿ ಜು.4ರಂದು ಸಾಮಾಜಿಕ ಅರಣ್ಯೀಕರಣ ಹಾಗೂ ಮನೆಗೊಂದು ಮರ, ಊರಿಗೊಂದು ವನ, ಒಬ್ಬ ನಾಗರಿಕ ಒಂದು ಸಸಿ ಅಭಿಯಾನ ಕೈಗೊಂಡಿದ್ದಾರೆ. ಶ್ರೀಗಳ ಸಂಕಲ್ಪಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಬಡದಾಳ ನಾಗರಿಕ ಹೋರಾಟ ಸಮಿತಿ, ಶೌರ್ಯ ವಿಪತ್ತ ನಿರ್ವಹಣಾ ಸಮಿತಿ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಇವರುಗಳು ಕೈ ಜೋಡಿಸಿದ್ದು ಸಾಮಾಜಿಕ ಅರಣ್ಯೀಕರಣ ಸಂಕಲ್ಪ ಸಾಕಾರಕ್ಕೆ ಸಿದ್ದರಾಗಿದ್ದಾರೆ. ಶ್ರೀಗಳ ಸಂಕಲ್ಪ ಸಫಲವಾದರೆ ನಾಲೈದು ವರ್ಷಗಳಲ್ಲಿ ಬಡದಾಳ ಗ್ರಾಮ ರಾಜ್ಯಕ್ಕೆ ಪರಿಸರ ರಕ್ಷಣೆಯ ವಿಷಯದಲ್ಲಿ ಮಾದರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲದಂತಾಗಲಿದೆ.

----

ಪ್ರಸ್ತುತ ಸನ್ನಿವೇಶ ಅವಲೋಕಿಸಿದಾಗ ಗಿಡಮರಗಳಿಗೆ ಮನುಷ್ಯ ತನ್ನ ದುರಾಸೆಯಿಂದ ಹಾಕುತ್ತಿರುವ ಕೊಡಲಿ ಪೆಟ್ಟಿನ ಕಾರಣದಿಂದ ಹೆಚ್ಚುತ್ತಿರುವ ಬಿಸಿಲಿನ ತಾಪ, ಪಾತಾಳ ಸೇರಿದ ಅಂತರ್ಜಲ, ಜಲಕ್ಷಾಮದಿಂದ ಜನ ಜಾನುವಾರುಗಳಿಗೆ ಆಗುತ್ತಿರುವ ನೀರಿನ ಪಡಿಪಾಟಲು, ಮಾರುದ್ದ, ಮೈಲುದ್ದ ನೋಡಿದರೂ ಸಿಗದ ಗಿಡದ ನೆರಳು ಎಲ್ಲವು ಭೀಕರ ಭವಿಷ್ಯದ ಮೂನ್ಸೂಚನೆಯಾಗಿವೆ. ಭವಿಷ್ಯದಲ್ಲಿ ಮುಂದಿನ ಪೀಳಿಗೆ ಹೊಲ ಮನೆ ಆಸ್ತಿಗಳಿಂತಲೂ ಕುಡಿವ ನೀರಿಗಾಗಿ ಕಾದಾಡುವ ಪರಿಸ್ಥಿತಿ ಉದ್ಭವಿಸಿದರೂ ಅಚ್ಚರಿ ಪಡಬೇಕಾಗಿಲ್ಲ. ಈ ಭಯಾನಕ ವಿಷಯವನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ಪರಿಸರ ರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ. ಅರಣ್ಯ ಇಲಾಖೆ, ಸರ್ಕಾರಗಳ ಮೇಲೆ ಹೊಣೆಗಾರಿಕೆ ಹಾಕಿದರೆ ಸಾಕಾಗುವುದಿಲ್ಲ. ಎಲ್ಲರೂ ಸಾಮಾಜಿಕ ಜವಾಬ್ದಾರಿ ಅರಿತು ಗಿಡಮರಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು. ಈ ನಿಟ್ಟಿನಲ್ಲಿ ಬಡದಾಳ ನಾಗರಿಕ ಹೋರಾಟ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಸಾಮಾಜಿಕ ಅರಣ್ಯೀಕರಣಕ್ಕೆ ಮುಂದಾಗಿದ್ದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ.

- ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು

---

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮ ಕೈಗೊಂಡಿದ್ದು ತಾಲೂಕಿನಾದ್ಯಂತ ಸುಮಾರು 5 ಸಾವಿರ ಸಸಿಗಳನ್ನು ನೆಡುವ ಯೋಜನೆ ಹಾಕಿಕೊಂಡಿದೆ. ಬಡದಾಳದ ಡಾ. ಅಭಿನವ ಚನ್ನಮಲ್ಲ ಶಿವಯೋಗಿಗಳ ನೇತೃತ್ವದಲ್ಲಿ ಬಡದಾಳ ನಾಗರಿಕ ಹೋರಾಟ ಸಮಿತಿ ಸಹಯೋಗದೊಂದಿಗೆ ಹಮ್ಮಿಕೊಂಡ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯವರೆಲ್ಲ ಕೂಡಿಕೊಂಡು ಬಡದಾಳ ಗ್ರಾಮದಲ್ಲಿ ಸಾಮಾಜಿಕ ಅರಣ್ಯೀಕರಣ, ಮನೆಗೊಂದು ಮರ, ಊರಿಗೊಂದು ವನ, ಒಬ್ಬ ನಾಗರಿಕ, ಒಂದು ಮರ ಅಭಿಯಾನದ ಯಶಸ್ವಿಗೆ ಮುಂದಾಗಿದ್ದೇವೆ.

- ಶಿವರಾಜ ಆಚಾರ್ಯ, ಯೋಜನಾಧಿಕಾರಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಫಜಲ್ಪುರ