ಸಾರಾಂಶ
- ಪ್ರತಿಭಟನೆಯಲ್ಲಿ ಸೋಮಲಾಪುರ ಗ್ರಾಮಸ್ಥರ ಆಕ್ರೋಶ । ವಕ್ಫ್ ಬೋರ್ಡ್‌ನಿಂದ 5.31 ಎಕರೆ ಕಬಳಿಕೆ: ಆರೋಪ
- ಗ್ರಾಮದಲ್ಲಿ ಸಾಮರಸ್ಯ ಕದಡದಂತೆ ಸೂಕ್ತ ರಕ್ಷಣೆ ಒದಗಿಸಲು ಜಿಲ್ಲಾಡಳಿತ ಭವನ ಎದುರು ಗ್ರಾಮಸ್ಥರ ಒತ್ತಾಯ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಹಿಂದುಗಳ ಶವಸಂಸ್ಕಾರಕ್ಕೆ ಹಿಂದು ರುದ್ರಭೂಮಿಯಲ್ಲೇ ಅವಕಾಶ ನೀಡದಿರುವ ಕ್ರಮ ಖಂಡಿಸಿ ಚನ್ನಗಿರಿ ತಾಲೂಕಿನ ಸೋಮಲಾಪುರ ಗ್ರಾಮಸ್ಥರು ನಗರದ ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸಮೀಪದ ಸೋಮಲಾಪುರ ಗ್ರಾಮಸ್ಥರು ಹಿಂದು ಜಾಗರಣಾ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಅವರಿಗೆ ಮನವಿ ಅರ್ಪಿಸಿದರು.
ಗ್ರಾಮದ ಮುಖಂಡರು ಮಾತನಾಡಿ, ಸಂತೇಬೆನ್ನೂರಿಗೆ ಹೊಂದಿಕೊಂಡಿರುವ ಸೋಮಲಾಪುರದಲ್ಲಿ ಸ್ಮಶಾನ ಜಾಗಕ್ಕೆಂದು 5 ಎಕರೆ ಜಮೀನಿದೆ. ಇದನ್ನು ಮುಸ್ಲಿಂ ವಕ್ಫ್ ಬೋರ್ಡ್‌ಗೆ ಅಕ್ರಮವಾಗಿ ಮಾಡಿಕೊಟ್ಟಿದ್ದು, ಈಗ ಹಿಂದುಗಳಲ್ಲಿ ಯಾರೇ ಸಾವನ್ನಪ್ಪಿದರೂ ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.ಸೋಮಲಾಪುರ 2747 ಜನಸಂಖ್ಯೆ ಹೊಂದಿರುವ 700 ಮನೆಗಳಿರುವ ಗ್ರಾಮ. ಇಲ್ಲಿ ಬಹುತೇಕ ಎಲ್ಲರೂ ಕೃಷಿಕರಾಗಿದ್ದಾರೆ. ಗ್ರಾಮದಲ್ಲಿ ಸುಮಾರು 2567 ಹಿಂದುಗಳಿದ್ದಾರೆ. ಮುಸ್ಲಿಮರ ಜನಸಂಖ್ಯೆ ಅಂದಾಜು 180 ಮಾತ್ರ. ಸೋಮಲಾಪುರದಲ್ಲಿ ಪುರಾತನ ಶ್ರೀ ದುರ್ಗಾಂಬಿಕಾ ದೇವಸ್ಥಾನ, ಬೀರಪ್ಪನ ಗುಡಿ, ಶ್ರೀ ಬನಶಂಕರಿ ದೇವಸ್ಥಾನ, ಶ್ರೀ ಮಂಜುುನಾಥ ಸ್ವಾಮಿ, ಶ್ರೀ ಬಸವೇಶ್ವರ ದೇವಸ್ಥಾನಗಳೂ ಇವೆ ಎಂದು ತಿಳಿಸಿದರು.
ಶವಸಂಸ್ಕಾರಕ್ಕೆ ಮುಸ್ಲಿಮರ ಆಕ್ಷೇಪ:ಇಡೀ ಗ್ರಾಮದಲ್ಲಿ ಹಿಂದುಗಳಿಗೆ ರಿ.ಸ.ನಂ.111ರ ಪೂರ್ಣ ವಿಸ್ತೀರ್ಣ 8.31 ಎಕರೆ ಇದೆ. ಇದರಲ್ಲಿ 5.31 ಎಕರೆಯಲ್ಲಿ ಸಂಪ್ರದಾಯಬದ್ಧವಾಗಿ ಶವಸಂಸ್ಕಾರ ಮಾಡಿಕೊಂಡು ಬಂದಿದ್ದೇವೆ. ಇಂದಿಗೂ ಅದನ್ನು ರುದ್ರಭೂಮಿಯಾಗಿ ಬಳಸುತ್ತಿದ್ದೇವೆ. 2024ನೇ ಬೇಸಿಗೆ ಹಂಗಾಮಿನಲ್ಲಿ ರುದ್ರಭೂಮಿಯಲ್ಲಿ ಸಾಕಷ್ಟು ಗುಂಡಿ ಬಿದ್ದಿದ್ದರಿಂದ ಅವುಗಳನ್ನು ಮುಚ್ಚಿ, ಸಮತಟ್ಟು ಮಾಡಲು ಗ್ರಾಮಸ್ಥರು ಸೇರಿ ಸೂಳೆಕೆರೆ ಅಂಗಳದ ಮಣ್ಣು ತಂದು ಹಾಕಿದ್ದೆವು. ಈಗ ಸೋಮಲಾಪುರದ ಮುಸ್ಲಿಂ ಸಮಾಜದ 15-20 ಜನರು ರುದ್ರಭೂಮಿ ಜಾಗ ತಮಗೆ ಸೇರಿದ್ದು, ಅದು ವಕ್ಫ್ ಆಸ್ತಿಯೆಂದು, ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಬಾರದು, ಶವಸಂಸ್ಕಾರ ಮಾಡಬಾರದು, ಒಂದು ವೇಳೆ ಶವ ಸಂಸ್ಕಾರ ಮಾಡಬೇಕೆಂದರೆ ತಮ್ಮನ್ನು ಕೇಳಿಯೇ ಮಾಡಬೇಕೆಂಬುದಾಗಿ ಹೇಳುತ್ತಿದ್ದಾರೆ. ಮುಸ್ಲಿಮರ ಈ ನಡೆಯಿಂದ ಗ್ರಾಮದಲ್ಲಿ ಶಾಂತಿಭಂಗ ಆಗಬಾರದು, ಸಾಮರಸ್ಯಕ್ಕೆ ಧಕ್ಕೆ ಆಗಬಾರದು ಎಂದು ಸೌಹಾರ್ದದಿಂದ ಎಲ್ಲರೂ ಇರಬೇಕೆಂಬ ಕಾರಣಕ್ಕೆ ಸದ್ಯಕ್ಕೆ ರುದ್ರಭೂಮಿ ಅಭಿವೃದ್ಧಿ ಕೆಲಸ ಸ್ಥಗಿತಪಡಿಸಿದ್ದೇವೆ ಎಂದು ತಿಳಿಸಿದರು.
ತಿದ್ದುಪಡಿ ಆರೋಪ:ಕಂದಾಯ ಇಲಾಖೆಗೆ ತಾವು ಮಾಹಿತಿ ಕೇಳಿದಾಗ ಅದು ಮೂಲತಃ ಕಂದಾಯ ಇಲಾಖೆಗೆ ಸೇರಿದ್ದಾಗಿದೆ. ಆರ್‌ಆರ್ ನಂ.373ರಂದೆ ಖಬರಸ್ಥಾನ ಎಂಬುದಾಗಿ ನಮೂದಿಸಲಾಗಿದೆ. ನಂತರ ದಾಖಲಾತಿಗಳಲ್ಲಿ ಎಂಆರ್‌ಎಂ ನಂ.2-1984-85ರಲ್ಲಿ ಅರಣ್ಯ ಇಲಾಖೆ ಎಂಬುದಾಗಿ ನಮೂದಿಸಲಾಗಿದೆ. ಅನಂತರದ ವರ್ಷದಲ್ಲಿ ಜಮೀನಿನಲ್ಲಿ ಉಪಯೋಗವನ್ನು ಖುಷ್ಕಿ ಎಂಬುದಾಗಿ ದಾಖಲಿಸಲಾಗಿದೆ. 12.1.1982ರ ಸಾರ್ವಜನಿಕರ ತಿಳಿವಳಿಕೆಯಲ್ಲಿ 3 ಎಕರೆಯಿಂದ 8.31 ಎಕರೆಗೆ ತಿದ್ದುಪಡಿ ಮಾಡಿರುವುದು ಕಂಡುಬಂದಿದೆ ಎಂದು ಆರೋಪಿಸಿದರು.
ರುದ್ರಭೂಮಿಗಾಗಿ ಜಾಗ ಬಳಸಿದ್ದಕ್ಕೆ ಅಲ್ಲಿ ಇಂದಿಗೂ ಸಾಕಷ್ಟು ಅಂತ್ಯಕ್ರಿಯೆ ನಡೆಸಿದ ಕುರುಹುಗಳಿವೆ. ಯಾರೋ ದುರಾಲೋಚನೆಯಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ, ಮೋಸ, ವಂಚನೆಯಿಂದ ಹಿಂದುಗಳ ರುದ್ರಭೂಮಿ ಜಾಗವನ್ನು ಖಬರಸ್ಥಾನ ಎಂಬುದಾಗಿ ನಮೂದಿಸಿದ್ದಾರೆ. ಈ ರೀತಿ ದಾಖಲಿಸಿರುವುದಕ್ಕೆ ಯಾವುದೇ ಆಧಾರ ಇಲ್ಲ. ಹಾಗಿದ್ದರೆ, ಯಾವುದೇ ಆಧಾರ ಇಲ್ಲದೇ ದಾಖಲಿಸಿದ್ದು ಹೇಗೆ? ಇಡೀ 8.31 ಎಕರೆ ಪ್ರದೇಶವನ್ನು ಆರ್‌ಟಿಸಿಯಲ್ಲಿ ಖಬರಸ್ಥಾನ ಎಂಬುದಾಗಿ ದಾಖಲಿಸಿದ್ದಕ್ಕೆ ಆಧಾರ ಇಲ್ಲ. ಮುಸ್ಲಿಮರು ನಮ್ಮ ಗ್ರಾಮದಲ್ಲಿ ಹಸ್ತಕ್ಷೇಪ ಮಾಡಬಾರದು. ಸಾಮರಸ್ಯಕ್ಕೆ ಧಕ್ಕೆ ಬರುವಂತೆ ಮಾಡುವ ಸಾಧ್ಯತೆ ಇದ್ದು, ಅದನ್ನು ತಡೆಯಬೇಕು ಎಂದು ಒತ್ತಾಯಿಸಿದರು.ಹಿಂದು ಜಾಗರಣಾ ವೇದಿಕೆ ಮುಖಂಡ ಸತೀಶ ಪೂಜಾರಿ, ಸೋಮಲಾಪುರ ಮುಖಂಡರಾದ ರಂಗಪ್ಪ, ಜಿ.ರಂಗಸ್ವಾಮಿ, ಎಚ್.ಸಂಜೀವ, ಎನ್.ರುದ್ರಪ್ಪ, ಆರ್.ಶ್ರೀನಿವಾಸ, ಡಿ. ಸಂದೀಪ, ಎ.ಕೆ.ಅಂಜಿನಪ್ಪ, ಸಿ.ಕೆ.ಸಿದ್ದಪ್ಪ, ಎನ್.ದಾಸಪ್ಪ, ಎ.ಚಂದ್ರಶೇಖರ, ಎಸ್.ಶಿವಶಂಕರ, ಎಚ್.ಎಸ್.ಕಿರಣ, ತೋಟದ ಮನೆ ರಾಜಪ್ಪ, ಪಿ.ಸಾಗರ್, ಕೆ.ಎನ್.ರಮೇಶ, ಜಿ.ಎನ್. ಮಂಜುನಾಥ, ಎಸ್.ಪ್ರದೀಪ, ಎಚ್.ಆರ್.ಮಂಜುನಾಥ, ಕೆ.ಬಿ.ಸುರೇಶ, ಸಿ.ಎಚ್.ಪ್ರಸಾದ, ಕೆ.ತಿಪ್ಪೇಶ, ರಂಗಸ್ವಾಮಿ, ಎಸ್.ಶಿವಪ್ಪ, ಶೇಖರಪ್ಪ, ಎನ್.ಮನೋಹರ, ಕೆ.ಸಿ.ನಾಗರಾಜ, ಸಿ.ಎಸ್.ಯೋಗೇಶ, ಡಿ.ಸಿದ್ದೇಶ, ಎಸ್.ಮಂಜುನಾಥ, ಎಸ್.ರವಿ ಇತರರು ಇದ್ದರು.
- - -ಬಾಕ್ಸ್
* ಬೇಡಿಕೆಗಳೇನು? - ರುದ್ರಭೂಮಿಗೆ ಬಳಕೆ ಮಾಡಿದ ರಿ. ಸ.ನಂ.11ರ 5.31 ಎಕರೆ ಜಮೀನಿಗೆ ವಸ್ತುನಿಷ್ಠ ವರದಿ ಪಡೆಯಬೇಕು
- ಈಗ ಉಪಯೋಗಿಸುತ್ತಿರುವ 5.31 ಎಕರೆ ಜಮೀನಿನಲ್ಲಿ ರುದ್ರಭೂಮಿಯಾಗಿ ಮುಂದುವರಿಸಲು ಸಹಕಾರ, ರಕ್ಷಣೆ ನೀಡಬೇಕು- ಈ ಹಿಂದೆ ಖಬರಸ್ಥಾನ ಎಂದು ತಪ್ಪಾಗಿ ನಮೂದಿಸಿದ್ದನ್ನು ದಾಖಲಾತಿಗಳಿಂದ ತೆಗೆದು ಹಾಕಬೇಕು
- ಹಿಂದುಗಳಿಗೆ ರಿ.ಸ.ನಂ.111ರಲ್ಲಿ 8.31 ಎಕರೆ ಪೈಕಿ 5.31 ಎಕರೆ ರುದ್ರಭೂಮಿಗೆಂದೇ ಮಂಜೂರು ಮಾಡಬೇಕು- ಹಿಂದುಗಳು ಮುಂಚಿನಿಂದ ಬಳಸುತ್ತಿರುವ ರುದ್ರಭೂಮಿಗೆ ಗ್ರಾಮದ ಅನ್ಯ ಕೋಮಿನವರಾಗಲೀ, ಬೇರೆ ಯಾವುದೇ ಊರಿನ ಮುಸ್ಲಿಮರಾಗಲೀ ಅಡ್ಡಿಪಡಿಸದಂತೆ ಹಾಗೂ ಮುಂದೆ ಯಾವುದೇ ರೀತಿ ಶಾಂತಿಭಂಗ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು
- - - -(ಫೋಟೋ ಇದೆ)