ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಳೆಯಿಂದ ಸೇತುವೆ ಕುಸಿದು ಎರಡು ವರ್ಷಗಳಾದರೂ ದುರಸ್ತಿ ಮಾಡದಿರುವುದನ್ನು ಖಂಡಿಸಿ ತಾಲೂಕಿನ ಮಾದಿಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಹೇಮಾವತಿ ಜಲಾಶಯದ ನ.03ರ ಉಪವಿಭಾಗದ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಸೇತುವೆ ಸರಿಪಡಿಸದ ನೀರಾವರಿ ಇಲಾಖೆ ಎಂಜಿನಿಯರುಗಳ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ತಾಲೂಕಿನ ಕಿಕ್ಕೇರಿ ಹೋಬಳಿಯ ಮಾದಿಹಳ್ಳಿ, ದೇವರಹಳ್ಳಿ, ಕಳ್ಳನಕೆರೆ ಮತ್ತು ಡಿಂಕ ಮಾರ್ಗವಾಗಿ ಶ್ರವಣಬೆಳಗೊಳ ಮುಖ್ಯ ರಸ್ತೆಯನ್ನು ಸಂರ್ಕಿಸುವ ಹಳ್ಳದ ಸೇತುವೆ ಕುಸಿದು ಎರಡು ವರ್ಷಗಳಾದರೂ ಪುನರ್ ನಿರ್ಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಪಂ ಸದಸ್ಯ ಎಂ.ಎಸ್.ಶ್ರೀಧರ್ ಮಾತನಾಡಿ, 2022 ರಲ್ಲಿ ಸುರಿದ ಭೀಕರ ಮಳೆಗೆ ಮಾದಿಹಳ್ಳಿ ಹಳ್ಳದ ಸೇತುವೆ ಕುಸಿದಿತ್ತು. ಇದರಿಂದ ಮಾದಿಹಳ್ಳಿ, ದೇವರಹಳ್ಳಿ, ಕಳ್ಳನಕೆರೆ ಮತ್ತು ಡಿಂಕ ಗ್ರಾಮದ ಜನ 10 ಕಿ.ಮೀ ದೂರದ ಹೋಬಳಿ ಕೇಂದ್ರ ಕಿಕ್ಕೇರಿಗೆ ಬರಲು ಹತ್ತಾರು ಕಿಮೀ ಬಳಸಿ ಬರಬೇಕಾಗಿದೆ ಎಂದು ಕಿಡಿಕಾರಿದರು.
ಶಾಲಾ ಕಾಲೇಜಿಗೆ ಹೋಗಲು ಮಕ್ಕಳು, ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಪರದಾಡುತ್ತಿದ್ದಾರೆ. ರೈತರು ತಾವು ಬೆಳೆದ ಕಬ್ಬು, ಎಳನೀರು ಮತ್ತಿತರ ಕೃಷಿ ಉತ್ಪನ್ನಗಳನ್ನು ಕಾರ್ಖಾನೆ ಹಾಗೂ ಮರುಕಟ್ಟೆಗೆ ತಲುಪಿಸಲು ಪ್ರಯಾಸ ಪಡಬೇಕಾಗಿದೆ ಎಂದು ಆಕ್ರೋಶ ಹೊರ ಹಾಕಿದರು.ಹೊಸ ಸೇತುವೆ ನಿರ್ಮಾಣದ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೀರಾವರಿ ಇಲಾಖೆ ಎದುರು ಪ್ರತಿಭಟಿಸುತ್ತಿದ್ದರೂ ನಮ್ಮ ಅಹವಾಲು ಕೇಳಲು ನೀರಾವರಿ ಇಲಾಖೆಯಲ್ಲಿ ಒಬ್ಬನೇ ಒಬ್ಬ ಸಿಬ್ಬಂದಿಯಿಲ್ಲ ಎಂದರು.
ತಕ್ಷಣವೇ ತುರ್ತು ಕಾಮಗಾರಿಯಡಿ ಸೇತುವೆ ಪುನರ್ ನಿರ್ಮಾಣ ಮಾಡದಿದ್ದರೆ ಗ್ರಾಮಸ್ಥರು, ರೈತರು ಕಚೇರಿ ಎದುರು ಅನಿರ್ಧಿಷ್ಠ ಕಾಲದ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.ಪ್ರತಿಭಟನೆ ಮಾಡುತ್ತಿದ್ದರೆ ಕನಿಷ್ಠ ಗುಮಾಸ್ಥರಿಂದ ಎಂಜಿನಿಯರುಗಳವರೆಗೆ ಯಾರೊಬ್ಬರು ಕಚೇರಿಯಲ್ಲಿ ಇಲ್ಲ. ಕಾರ್ಯಪಾಲಕ ಅಭಿಯಂತರರ ಕಚೇರಿ ಬಾಗಿಲು ಮುಚ್ಚಿದ್ದರೆ, ಉಳಿದ ಸಿಬ್ಬಂದಿ ಚೇರು ಖಾಲಿ ಖಾಲಿಯಾಗಿತ್ತು. ಕಡತಗಳು ಅನಾಥವಾಗಿ ಬಿದ್ದಿದ್ದವು. ಇವರಿಗೆ ಹೇಳುವವರು ಕೇಳುವವರೇ ಇಲ್ಲದಂತಾಗಿದೆ ಎಂದು ದೂರಿದರು.
ಗ್ರಾಮಸ್ಥರು ಮಧ್ಯಾಹ್ನದವರೆಗೆ ಪ್ರತಿಭಟಿಸುತ್ತಿದ್ದರೂ ಯಾವುದೇ ಸಿಬ್ಬಂದಿ ಸ್ಥಳದಲ್ಲಿದ್ದು ಅಹವಾಲು ಆಲಿಸಲಿಲ್ಲ. ಮಧ್ಯಾಹ್ನ 12 ಗಂಟೆ ವೇಳೆಗೆ ಇಲಾಖೆ ತಾಂತ್ರಿಕ ಸಹಾಯಕಿ ರಶ್ಮಿ ಸ್ಥಳಕ್ಕಾಗಮಿಸಿ ರೈತರ ಮನವಿ ಸ್ವೀಕರಿಸಿದರು.ಈ ವೇಳೆ ಮಾತನಾಡಿದ ರಶ್ಮಿ, ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿ ಟೆಂಡರ್ ಕರೆಯಲಾಗಿತ್ತು. ಈ ಹಿಂದಿನ ಸರ್ಕಾರದ ಎಲ್ಲಾ ಕಾಮಗಾರಿಗಳನ್ನು ಮುಂದಿನ ಆದೇಶದವೆರಗೆ ರಾಜ್ಯ ಸರ್ಕಾರ ಸ್ಥಗಿತಗೊಳಿಸಿದ್ದರಿಂದ ಟೆಂಡರ್ ಪ್ರಕ್ರಿಯೆ ನಿಂತಿದೆ. ಟೆಂಡರ್ ಪ್ರಕ್ರಿಯೆಗೆ ಮರುಸೂಚನೆ ನೀಡಿ ಹಣ ಬಿಡುಗಡೆ ಮಾಡಿದ ತಕ್ಷಣವೇ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಸದಸ್ಯ ಬಾಲರಾಜು, ಕಿಕ್ಕೇರಿ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ಮುಖಂಡರಾದ ಪ್ರಶಾಂತಗೌಡ, ನಾಗೇಗೌಡ, ಲಕ್ಷ್ಮಗೌಡ, ರಾಮೇಗೌಡ, ರಾಜೇಗೌಡ, ನಿವೃತ್ತ ಪ್ರಾಮಶುಪಾಲ ಗಣೇಶ್‌ಗೌಡ, ಗ್ರಾ.ಪಂ ಮಾಜಿ ಅಧ್ಯಕ್ಷ ಮುರುಳಿ, ಚಂದ್ರಶೇಖರ್, ಪಿಗ್ಮಿ ಸ್ವಾಮಿ, ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.