ಸಾರಾಂಶ
ಚಿನ್ನನಾಯಕನಹಳ್ಳಿ ಗ್ರಾಮದ ಬಡಾವಣೆ ನಿವಾಸಿಗಳಿಗೆ ಸರ್ಕಾರ ನೀರಿನ ಸೌಲಭ್ಯ ಜೊತೆಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಹೇಳಿ ಮೂರು ವರ್ಷ ಕಳೆದರೂ ಯಾವುದೇ ಸೌಲಭ್ಯ ನೀಡದೆ ವಂಚಿಸಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ತಾಲೂಕಿನ ಚಿನ್ನನಾಯಕನಹಳ್ಳಿ ಗ್ರಾಮಸ್ಥರು ಪಟ್ಟಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಗ್ರಾಮದಿಂದ ಪಟ್ಟಣಕ್ಕೆ ಆಗಮಿಸಿದ ಗ್ರಾಮಸ್ಥರು, ಇಲಾಖೆ ಕಚೇರಿ ಎದುರು ಆಗಮಿಸಿ ಕುಡಿಯುವ ನೀರು ನೀಡದ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಬಡಾವಣೆ ನಿವಾಸಿಗಳಿಗೆ ಸರ್ಕಾರ ನೀರಿನ ಸೌಲಭ್ಯ ಜೊತೆಗೆ ಮೂಲ ಸೌಕರ್ಯ ಒದಗಿಸಲಾಗುತ್ತಿದೆ ಎಂದು ಹೇಳಿ ಮೂರು ವರ್ಷ ಕಳೆದರೂ ಯಾವುದೇ ಸೌಲಭ್ಯ ನೀಡದೆ ವಂಚಿಸಿದೆ ಎಂದು ಆರೋಪಿಸಿದರು.2020 ಮತ್ತು 21ರ ಸಾಲಿನಲ್ಲಿ 45 ಲಕ್ಷದ ವೆಚ್ಚದಲ್ಲಿ ಮನೆಮನೆಗಳಿಗೆ ನೀರಿನ ಸೌಲಭ್ಯ ಒದಗಿಸುವುದಾಗಿ ಇಲಾಖೆ ಅಧಿಕಾರಿಗಳು ಹೇಳಿದ್ದರು. ಇದುವರೆಗೆ ನೀರು ಪೂರೈಸುವ ನಲ್ಲಿ, ಪೈಪು ಅಳವಡಿಸಿ ಯೋಜನೆ ಕಾರ್ಯಗತವಾಗಿಲ್ಲ. ಆದರೆ, ಅಧಿಕಾರಿಗಳು ಮಾತ್ರ ಈಗಾಗಲೇ ಪೈಪ್ ಅಳವಡಿಸಿ ನೀರು ಕೊಡಲಾಗಿದೆ ಎಂದು ನಾಮಫಲಕಗಳನ್ನು ಅಳವಡಿಸಿದ್ದಾರೆ ಎಂದು ಕಿಡಿಕಾರಿದರು.
ನಾಮಫಲಕದ ಪ್ರಕಾರ ಬಡಾವಣೆಯಲ್ಲಿರುವ 112 ಮನೆಗಳಿಗೆ ಶುದ್ಧ ನೀರು ಸರಬರಾಜಾಗುತ್ತಿದೆ. ಆದರೆ, ಬಡಾವಣೆ ಮನೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಿಲ್ಲ. ಯಾವುದೇ ಮನೆಗೂ ನಲ್ಲಿಯನ್ನು ಸಹ ಅಳವಡಿಸಿಲ್ಲ. ನೀರು ಕೂಡ ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.ಗ್ರಾಮದ ಬಡಾವಣೆ ನಿವಾಸಿಗಳಿಗೆ ನೀರಿಲ್ಲದೆ ಪರದಾಡುವಂತಾಗಿದೆ. ಜನಪ್ರತಿನಿಧಿಗಳು ಹಾಗೂ ಮೇಲಾಧಿಕಾರಿಗಳು ಸುಳ್ಳಿನ ಭರವಸೆ ನೀಡುವುದನ್ನು ನಿಲ್ಲಿಸಿ ಎಲ್ಲಾ ಮನೆಗಳಿಗೂ ನೀರು ಕೊಡಬೇಕು ಎಂದು ಆಗ್ರಹಿಸಿ ಪಂಚಾಯತ್ ರಾಜ್ ಇಂಜಿನಿಯರ್ ರಾಮಕೃಷ್ಣೇಗೌಡರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ರಾಮಕೃಷ್ಣೇಗೌಡರು, ಕಾಮಗಾರಿಗಳು ಮುಗಿದಿದ್ದು, ನೀರಿನ ಟ್ಯಾಂಕ್ ನಿರ್ಮಿಸುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಕಾಮಗಾರಿತಡೆ ಮಾಡಿದ್ದರಿಂದ ನಿರು ಒದಗಿಸಲು ತಡವಾಗಿತ್ತು. ಈಗಾಗಲೆ ಅರಣ್ಯ ಇಲಾಖೆಯೊಂದಿಗೆ ಮಾತು ಕತೆ ಮೂಲಕ ಸಮಸ್ಯೆ ಬಗೆಹರಿದಿದೆ. ಇನ್ನೆರಡು ದಿನದಲ್ಲಿ ಗ್ರಾಮದ ಮನೆಗಳಿಗೆ ನೀರು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಚಿನ್ನನಾಯಕನಹಳ್ಳಿ ಗ್ರಾಮಸ್ಥರು, ಮಹಿಳೆಯರು ಭಾಗವಹಿಸಿದ್ದರು.