ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಆಚಾರಕ್ಕೆ ದೇವಾಲಯ, ವಿಚಾರಕ್ಕೆ ಶಾಲೆ, ಜೀವ ಜಲಕ್ಕೆ ಕೆರೆ ಕಟ್ಟೆಗಳು ಇದ್ದರೇ ಗ್ರಾಮಗಳು ಸಮೃದ್ಧಿಯಾಗಿ ಸಮಾತೋಲನ ಇರಲು ಸಾಧ್ಯವಾಗುತ್ತದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲೂಕಿನ ಹೊಂಬೆಗೌಡನದೊಡ್ಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಈಶ್ವರ ದೇವಸ್ಥಾನವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿ, ಸಂಸ್ಕೃತಿ, ಸಂಸ್ಕಾರ, ಶಿಷ್ಟಾಚಾರ, ಶಿಸ್ತು, ಸಂಯಮ, ಸಹಿಷ್ಣತೆ, ಮಾತೃಭಾವನೆ, ಮೌನ ಎಲ್ಲವನ್ನು ಕಲಿಸುವ ದೇವಸ್ಥಾನಗಳು ಆಚಾರ ಕೇಂದ್ರಗಳಾಗಿವೆ. ಪ್ರತಿಯೊಂದು ಗ್ರಾಮಗಳಲ್ಲಿ ದೇವಾಸ್ಥಾನಗಳು ಇರಬೇಕೆಂಬುವುದು ಪೂರ್ವಿಕರು ಹಾಕಿಕೊಟ್ಟ ಸಂಪ್ರದಾಯವಾಗಿದೆ ಎಂದರು.
ಕೈಯಲ್ಲಿ ಸಾಧ್ಯವಾಗುವುದನ್ನು ಮತ್ತೊಬ್ಬರಿಗೆ ದಾನ ಕೊಡುವುದರಿಂದ ಘನತೆ ಹೆಚ್ಚಾಗುತ್ತದೆ. ಜೀವನದಲ್ಲಿ ಯಶಸ್ಸು ಸಿಕ್ಕಾಗ ಮಾತ್ರ ಮೋಕ್ಷ ಸಿಗಲಿದೆ. ಸಾವಿನ ಸಂತರವೂ ಹೆಸರು ಉಳಿಸಲು ಸಾಧ್ಯವಾಗುವ ರೀತಿಯಲ್ಲಿ ಸಾಧನೆ ಮಾಡಬೇಕು. ಹುಟ್ಟುವಾಗ ಉಸಿರು ಇತ್ತು, ಸತ್ತಮೇಲೆ ಹೆಸರಾಯಿತು ಎನ್ನುವ ರೀತಿಯಲ್ಲಿ ಊರಿಗೆ ಉಪಕಾರವಾಗುವ ರೀತಿಯಲ್ಲಿ ಬದುಕಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ಕರೆ ನೀಡಿದರು.ಧರ್ಮದ ಹೆಸರಿನಲ್ಲಿ ದಾಳಿಗಳು ಹಿಂದಿನಿಂದಲೂ ನೆಡೆದುಕೊಂಡು ಬರುತ್ತಿದೆ. ಇಂದಿಗೂ ನಡೆಯುತ್ತಿದೆ. ಭಾರತೀಯರಾದ ನಾವುಗಳು ದೇವರು, ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡು ಗೌರವವನ್ನು ಉಳಿಸಿಕೊಂಡರೇ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ ಎಂದರು.
ದೇವಾಲಯದಲ್ಲಿ ಪೂಜೆ ಸಲ್ಲಿಸಿದರೇ ಮನಸ್ಸಿಗೆ ನೆಮ್ಮದಿ ಸಿಗುವುದರಿಂದ ಪ್ರತಿಯೊಂದು ಗ್ರಾಮಗಳಲ್ಲಿ ದೇವಸ್ಥಾನಗಳು ನಿರ್ಮಾಣವಾಗಬೇಕು. ಹಿಂದಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಯುವ ಪೀಳಿಗೆಗೆ ಕಲಿಸುವ ಜವಾಬ್ದಾರಿ ಹಿರಿಯರದ್ದಾಗಿದೆ ಎಂದರು.ನಿಶ್ಚಲಾನಂದ ನಾಥ ಸ್ವಾಮೀಜಿ ಶಿವಲಿಂಗಕ್ಕೆ ಅಭಿಷೇಕ ನರೆವೇರಿಸಿ ಪೂಜೆ ಸಲ್ಲಿಸಿದ ನಂತರ ವಿಗ್ರಹ ಪ್ರತಿಷ್ಠಾಪನೆ ನರೆವೇರಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪೂರ್ಣಕುಂಭದೊಂದಿಗೆ ಎತ್ತಿನ ಗಾಡಿಯಲ್ಲಿ ಸ್ವಾಮೀಜಿಗಳನ್ನು ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತರಲಾಯಿತು. ಆಗಮಿಕರಾದ ಚೌಡಯ್ಯ ದೀಕ್ಷಿತ್ ಹಾಗೂ ಆರ್ಚಕ ಬಸವರಾಜು ಪೂಜಾ ಕೈಂಕರ್ಯಗಳನ್ನು ನೆರೆವೇರಿಸಿದರು.
ದೇವಸ್ಥಾನಕ್ಕೆ ಧನ ಸಹಾಯ ಮಾಡಿದ ದಾನಿಗಳನ್ನು ಅಭಿನಂದಿಸಲಾಯಿತು. ಗ್ರಾಮದಿಂದ ಸ್ವಾಮೀಜಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಮಠದ ಹೊನ್ನಾಯಕನಹಳ್ಳಿ ಬಸಪ್ಪ ಹಾಗೂ ಮತ್ತಿತಾಳೇಶ್ವರ ಬಸವಪ್ಪ ಭಾಗವಹಿಸಿದ್ದವು.ಕಾರ್ಯಕ್ರಮದಲ್ಲಿ ಮುಖಂಡರಾದ ಸಂಜಯ್‌ಗೌಡ, ಶಿವಲಿಂಗೇಗೌಡ, ರಾಮಕೃಷ್ಣ, ನಾಗೇಂದ್ರ, ಪ್ರೋ.ಬೋರೇಗೌಡ, ನಾಗರಾಜು, ಹೆಗ್ಗಡೆ ನಾಗರಾಜು, ಚಿಕ್ಕಲಿಂಗಯ್ಯ, ಮೊಗಣ್ಣ, ಅಂದಾನಿಗೌಡ, ಜಯರಾಮು, ದೊಡ್ಡವನು ಸೇರಿದಂತೆ ಇತರರು ಇದ್ದರು.