ವಿನಿಶಾ ರೊಡ್ರಿಗಸ್ ಎತ್ತಿನ ಗಾಡಿ ಎಕ್ಸ್‌ಪ್ರೆಸ್‌ ಕೃತಿಗೆ ದಾಂತಿ ಪುರಸ್ಕಾರ

| Published : May 12 2024, 01:19 AM IST

ವಿನಿಶಾ ರೊಡ್ರಿಗಸ್ ಎತ್ತಿನ ಗಾಡಿ ಎಕ್ಸ್‌ಪ್ರೆಸ್‌ ಕೃತಿಗೆ ದಾಂತಿ ಪುರಸ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಇದರ ಮೊದಲ ಭಾಗ 2015ರಲ್ಲಿ ಪ್ರಕಟವಾಗಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಪದವಿ ಪಡೆದಿರುವ ವಿನಿಶಾ, ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಝೀ ಟಿವಿ ಮತ್ತು ದೂರದರ್ಶನ ವಾಹಿನಿಯಲ್ಲಿ ನಾಟಕ, ಯಕ್ಷಗಾನದಲ್ಲಿ ಪಾತ್ರಗಳನ್ನು ಮಾಡಿರುತ್ತಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕೆಥೊಲಿಕ್ ಸಭಾ ಉಡುಪಿ ಪ್ರದೇಶ, ಕನ್ನಡ ಭಾಷೆಯಲ್ಲಿ ಕ್ರೈಸ್ತ ಸಾಹಿತಿಗಳು ಬರೆದಿರುವ ಪುಸ್ತಕಗಳಿಗೆ ವರ್ಷಪ್ರತಿ ನೀಡಲಾಗುವ ದಿವಗಂತ ದಾಂತಿ ಪುರಸ್ಕಾರಕ್ಕೆ 2023ನೇ ಸಾಲಿಗೆ ವಿನಿಶಾ ರೊಡ್ರಿಗಸ್ ಅವರ ‘ಎತ್ತಿನಗಾಡಿ ಎಕ್ಸ್‌ಪ್ರೆಸ್-2’ ಪುಸ್ತಕ ಆಯ್ಕೆಯಾಗಿದೆ.

ಇದರ ಮೊದಲ ಭಾಗ 2015ರಲ್ಲಿ ಪ್ರಕಟವಾಗಿದೆ. ಇಂಗ್ಲಿಷ್ ಸಾಹಿತ್ಯದಲ್ಲಿ ಎಂಎ ಪದವಿ ಪಡೆದಿರುವ ವಿನಿಶಾ, ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ಝೀ ಟಿವಿ ಮತ್ತು ದೂರದರ್ಶನ ವಾಹಿನಿಯಲ್ಲಿ ನಾಟಕ, ಯಕ್ಷಗಾನದಲ್ಲಿ ಪಾತ್ರಗಳನ್ನು ಮಾಡಿರುತ್ತಾರೆ. ಕರಾವಳಿ ಕರ್ನಾಟಕದ ಕನ್ನಡ, ಕೊಂಕಣಿ ಹಾಗೂ ಇತರ ಭಾಷೆಯ ಪತ್ರಿಕೆಗಳಲ್ಲಿ ಇವರ ಅಂಕಣಗಳು ಪ್ರಕಟವಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ವಿನಿಶಾ, ವಿಕ್ಟರ್ ರೊಡ್ರಿಗಸ್ ಮತ್ತು ವಿಕ್ಟೋರಿಯ ಡಿಮೆಲ್ಲೊ ಅವರ ಮಗಳಾಗಿದ್ದು, ಬರಹಗಾರ ಪ್ರಮೋದ್ ರೊಡ್ರಿಗಸ್ ಹೊಸ್ಪೆಟ್ ಅವರ ಪತ್ನಿಯಾಗಿದ್ದಾರೆ. ಅವರ ಸಹೋದರಿ ಕೂಡ ಹೆಸರಾಂತ ಸಾಹಿತಿಯಾಗಿದ್ದು, ಮುದ್ದು ತೀರ್ಥಹಳ್ಳಿ ಹೆಸರಿನಲ್ಲಿ ಚಿರಪರಿಚಿತರಾಗಿದ್ದಾರೆ.

ಪುರಸ್ಕಾರವು 25 ಸಾವಿರ ರು. ನಗದಿನೊಂದಿಗೆ ಶಾಲು, ನೆನಪಿನ ಕಾಣಿಕೆಯನ್ನು ಹೊಂದಿದ್ದು, ಜೂನ್‌ 9ರಂದು ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ನಡೆಯಲಿರುವ ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆಯಲ್ಲಿ ಪ್ರದಾನ ಮಾಡಲಾಗುವುದು ಎಂದು ಪುರಸ್ಕಾರ ಸಮಿತಿ ಸಂಚಾಲಕ ಅಲ್ಪೋನ್ಸ್ ಡಿಕೋಸ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.