ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜಾತ್ರಾ ಸಮಯದಲ್ಲಿ ಎಲ್ಲಾ ಭಕ್ತರಿಗೂ ಶೀಘ್ರವಾಗಿ ಶ್ರೀ ಹಾಸನಾಂಬೆ ದರ್ಶನ ಸಿಗುವಂತಾಗಬೇಕು. ವಿಐಪಿ ದರ್ಶನ, ಶಿಷ್ಟಾಚಾರ ದರ್ಶನ ಎರಡು ದಿನಕ್ಕೆ ಮಾತ್ರ ಸೀಮಿತಗೊಳಿಸಬೇಕು. ಉಳಿದ ದಿನದ ಕಡ್ಡಾಯವಾಗಿ ವಿಐಪಿ ದರ್ಶನ ನಿಷೇಧಿಸಬೇಕು ಎಂದು ಒತ್ತಾಯಿಸಿ ಶ್ರೀ ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಸಿ. ಸತ್ಯಭಾಮಗೆ ಮಂಗಳವಾರ ಮನವಿ ಸಲ್ಲಿಸಿದರು.ಶ್ರೀ ಹಾಸನಾಂಬ ಜಾತ್ರಾ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಡಾ. ಎನ್. ರಮೇಶ್ ಮಾತನಾಡಿ, ವರ್ಷದಲ್ಲಿ ಕೇವಲ ಒಮ್ಮೆ ಮಾತ್ರ ಹಾಸನಾಂಬೆ ಬಾಗಿಲು ತೆರೆಯುವ ಹಾಸನದ ಅಧಿದೇವತೆಯ ಕ್ಷಣಮಾತ್ರ ದರ್ಶನದಿಂದ ತಮ್ಮ ಜೀವನವು ಪಾವನವಾಯಿತು ಎಂದು ಲಕ್ಷಾಂತರ ಭಕ್ತರು ಭಾವಿಸುತ್ತಾರೆ. ಹಾಸನಾಂಬೆ ದೇವಿಯ ದರ್ಶನ ಎಲ್ಲ ಭಕ್ತರಿಗೂ ಸುಗಮವಾಗಿ ಸಿಗಲೆಂಬ ಉದ್ದೇಶದೊಂದಿಗೆ ಈ ಕೆಳಗಿನ ಬದಲಾವಣೆಗಳನ್ನು ಈ ವರ್ಷದ ಹಾಸನಾಂಬೆ ದೇವಿ ದರ್ಶನದಿಂದ ಅಳವಡಿಸಬೇಕೆಂದು ಮನವಿ ಮಾಡಿದರು.
ವಿಐಪಿ ದರ್ಶನ, ಶಿಷ್ಟಾಚಾರ ದರ್ಶನ ಎರಡು ದಿನಕ್ಕೆ ಮಾತ್ರ ಸೀಮಿತಗೊಳಿಸಬೇಕು. ಉಳಿದ ದಿನಗಳಲ್ಲಿ ಕಡ್ಡಾಯವಾಗಿ ವಿಐಪಿ ದರ್ಶನ ನಿಷೇಧಿಸಬೇಕು. ಭಕ್ತಾದಿಗಳು ದೇವಾಲಯದ ಗರ್ಭಗುಡಿಯ ಹೊರಗೆ ನಿಂತೇ ದರ್ಶನ ಮಾಡುತ್ತಾರೆ. ಅದೇ ರೀತಿ ಶ್ರೀ ಸಿದ್ದೇಶ್ವರ ದೇವಾಲಯದ ನವರಂಗಕ್ಕೂ ಕೂಡ ಪ್ರವೇಶವನ್ನು ನಿಷೇಧಿಸಿ ಶ್ರೀ ಹಾಸನಾಂಬೆ ದೇವರ ಗರ್ಭಗುಡಿಗೆ ಮತ್ತು ಶ್ರೀ ಸಿದ್ದೇಶ್ವರ ದೇವಾಲಯದ ನವರಂಗಕ್ಕೆ ವಿವಿಪಿಗಳನ್ನು ಮಾತ್ರ ಬಿಡಲಾಗುತ್ತಿದೆ. ಇದು ಭಕ್ತರಿಗೆ ಅತ್ಯಂತ ಅಸಮಾಧಾನದ ವಿಚಾರ ಎಂದರು.ವಿಐಪಿಗಳು ಮತ್ತು ಅವರ ಜೊತೆ ಬರುವ ಹಿಂಬಾಲಕರಿಂದ ದೇವಿಯ ದರ್ಶನ ಕನಿಷ್ಠ ೩೦ ರಿಂದ ೪೫ ನಿಮಿಷಗಳವರೆಗೆ ಗರ್ಭಗುಡಿ ಪ್ರವೇಶ ಮಾಡಿ ಅಲ್ಲಿಯವರೆಗೆ ಶ್ರೀಸಾಮಾನ್ಯರ ದರ್ಶನವನ್ನು ಮೂಟಕುಗೊಳಿಸುವುದು ಸಾಮಾನ್ಯವಾಗಿಬಿಟ್ಟಿದೆ. ಕಳೆದ ವರ್ಷವಂತೂ ದೇವಿಯ ದರ್ಶನ ಕಾಯುವಿಕೆ ಎಂಟರಿಂದ ಹತ್ತು ಗಂಟೆವರೆಗೂ ಕೂಡ ತಲುಪಿದ್ದನ್ನು ನಾವು ನೆನಪಿಸಿಕೊಳ್ಳಬಹುದು. ತಿರುಪತಿ ತಿಮ್ಮಪ್ಪನ ದರ್ಶನದಲ್ಲೂ ವಿಶೇಷ ದಿನಗಳಲ್ಲಿ ಅತಿಯಾದ ಭಕ್ತರ ಸಂಖ್ಯೆ ಉಂಟಾಗಿದ್ದರಿಂದ ವಿಐಪಿಗಳ ದರ್ಶನವನ್ನೇ ತಿರುಪತಿ ತಿರುಮಲ ದೇವಾಲಯದ ನಿಲ್ಲಿಸಲಾಗಿದೆ. ಶ್ರೀ ಹಾಸನಾಂಬೆ ದೇವಿಯ ಗರ್ಭಗುಡಿಯಲ್ಲಿ ವಿಐಪಿಗಳ ಫೋಟೋ ತೆಗೆಯುವುದು ಸಂಪೂರ್ಣವಾಗಿ ನಿಷೇಧಿಸಲಿ. ಸರ್ಕಾರ ದೇವಿ ಫೋಟೋವನ್ನು ತೆಗೆಯಬಾರದೆಂದು ಸೂಚನಾ ಫಲಕಗಳನ್ನು ಜಾತ್ರಾ ಮಹೋತ್ಸವ ಪ್ರಕಟಣೆಗಳಲ್ಲಿ ತಿಳಿಸಲಿ, ಹಾಗೆಯೇ ಸರ್ಕಾರದ ಜಾಹೀರಾತುಗಳಲ್ಲಿ ದೇವಿಯ ಫೋಟೋ ಬಳಕೆ ನಿಷೇಧಿಸಲು ಮನವಿ ಮಾಡಿದರು. ಶ್ರೀ ಹಾಸನಾಂಬೆ ದೇವಿಯು ದೇಶದಲ್ಲೇ ಒಂದು ವಿಶೇಷವಾದ ಶಕ್ತಿ. ವರ್ಷದಲ್ಲಿ ಕೆಲವೇ ದಿನ ಬಾಗಿಲು ತೆಗೆದು ದರ್ಶನ ನೀಡುವ ದೇವಿಯ ಫೋಟೋವನ್ನು ಹಾಕುವುದು/ ಪೂಜಿಸುವ ಪದ್ಧತಿ ಇಲ್ಲ. ದೇವಿಯು ಕೇವಲ ನಿರ್ದಿಷ್ಟ ಸಮಯ ಮಾತ್ರ ದರ್ಶನ ನೀಡಲು ಇಚ್ಛೆ ಪಡುತ್ತಾಳೆ. ಬೇರೆ ಸಮಯದಲ್ಲಿ ಆಕೆ ದರ್ಶನ ನೀಡುವುದಿಲ್ಲ. ಹೀಗಿರುವಾಗ ದೇವಿಯ ಫೋಟೋವನ್ನು ಫ್ಲೆಕ್ಸ್, ಪತ್ರಿಕೆ, ಟಿವಿಗಳಲ್ಲಿ ಹಾಕುವುದು ಇನ್ನೂ ಮುಂದಾದರೂ ನಿಲ್ಲಲಿ. ವಿಐಪಿ ಪಾಸುಗಳ ವಿತರಣೆ ನಿಷೇಧಿಸಿದ ಜಿಲ್ಲಾ ಆಡಳಿತದ ಕ್ರಮ ಸ್ವಾಗತಾರ್ಹ. ಜಾತ್ರಾ ಸಮಯದಲ್ಲಿ ಒತ್ತಡಗಳಿಗೆ ಮಡಿದು ವಿಐಪಿ ಪಾಸ್ ಪುನರ್ ಪ್ರಾರಂಭ ಮಾಡಬಾರದು ಎಂದರು.
ದೇವಿಯ ದರ್ಶನಕ್ಕೆ ಆಗಮಿಸುವ ಹಿರಿಯ ನಾಗರಿಕರಿಗೆ ಶೀಘ್ರ ದರ್ಶನದ ವ್ಯವಸ್ಥೆ ಕಲ್ಪಿಸಲಿ. ಜಾತ್ರಾ ಸಮಯದಲ್ಲಿ ಅನ್ನದಾನವನ್ನು ಸಂಘ ಸಂಸ್ಥೆಗಳ ಮೂಲಕ ದೊಡ್ಡ ಮಟ್ಟದಲ್ಲಿ ಆಯೋಜಿಸುವ ಬಗ್ಗೆ ಹಾಗೂ ನಡೆಸುವವರಿಗೆ ಸರ್ಕಾರದಿಂದ ಸೂಕ್ತವಾದ ಸೌಲಭ್ಯ ನೀಡಬೇಕು. ಶ್ರೀ ಹಾಸನಂಬ ಜಾತ್ರಾ ಹಿತ ರಕ್ಷಣಾ ಸಮಿತಿ ಕಾರ್ಯದರ್ಶಿ ರಾಜ ವೆಂಕಟೇಶ್, ಖಜಾಂಚಿ ಅರುಣ್ ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗೇಗೌಡ, ಚಂದ್ರಶೇಖರ್, ಸತೀಶ್, ಸುರೇಶ್, ದೀಪಕ್ ರವರು ರಾಧಾತಿವಾರಿ, ಸತ್ಯವತಿ, ಗಿರೀಶ್ ಬೈರಾಟೆ, ರಾಷ್ಟ್ರ ರಕ್ಷಣಾ ಸೇನೆಯ ಸುರೇಶ್ ಗೌಡ, ಅಶೋಕ್ ಕೋಶಿ ಹಾಗೂ ಸಮಿತಿಯ ಇದ್ದರು.ದೇವಿ ದರ್ಶನ ಎಲ್.ಇ.ಡಿ. ಪರದೇಲಿ ನೇರ ಪ್ರಸಾರ ಮಾಡಿಸಬಾರದು ಶ್ರೀ ಸಿದ್ಧೇಶ್ವರ ದೇವಾಲಯದ ಪ್ರಾಂಗಣದಲ್ಲಿ ಫ್ಲೆಕ್ಸ್ ಅಳವಡಿಸಿ ಪತ್ರಿಕಾಗೋಷ್ಠಿ ಅಥವಾ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಸಮಾರಂಭಗಳನ್ನ ನಿಷೇಧಿಸಲಿ. ಶ್ರೀ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ, ಸರದಿ ಸಾಲಿನಲ್ಲಿ ನಿಂತವರಿಗೆ ಹಣೆಯಲ್ಲಿ ಕುಂಕುಮ ಇಡಲು, ಬಟ್ಟಲುಗಳಲ್ಲಿ ಕುಂಕುಮವನ್ನು ಸರತಿ ಸಾಲಿನ ಬಳಿ ಇಡಲು ಹಾಗೂ ಭಕ್ತಾದಿಗಳಿಗೆ ದರ್ಶನದ ನಂತರ ಅರಿಶಿನ ಕುಂಕುಮ, ಹೂಗಳ ಪ್ರಸಾದ ವಿತರಿಸುವ ವ್ಯವಸ್ಥೆಯನ್ನು ಸಂಘ-ಸಂಸ್ಥೆಗಳಿಗೆ/ ಸ್ವಯಂ ಸೇವಕರಿಗೆವಹಿಸಲಿ. ಶ್ರೀ ಹಾಸನಾಂಬೆ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲಿ. ಪ್ರಾಂಗಣದಲ್ಲಿರುವ ಪರಿವಾರ ದೇವತೆಗಳ ಶಿವನ ೧೦೮ ಲಿಂಗ ದೇವಾಲಯ ಶ್ರೀ ವೀರಭದ್ರ ದೇವಾಲಯ ಹಾಲಪ್ಪನವರ ಗದ್ದುಗೆ ಮತ್ತು ಕಳ್ಳಪ್ಪನ ಗುಡಿ ದೇವಾಲಯ ಮುಂದೆ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಲಿ. ಶ್ರೀ ಹಾಸನಾಂಬೆ ದೇವಿ ಪೂಜೆಯ ನೇರ ದರ್ಶನವನ್ನು ರಸ್ತೆಯ ಸರ್ಕಲ್ ಗಳಲ್ಲಿ, ಇನ್ನಿತರ ಸ್ಥಳದಲ್ಲಿ ಎಲ್.ಇ.ಡಿ. ಪರದೆಯ ನೇರ ಪ್ರಸಾರ ಮಾಡಿಸಬಾರದು.