ಶ್ರೀ ವೈಷ್ಣವರ ಮನೆಗಳಲ್ಲಿ ವಿಶೇಷವಾದ ಮಣ್ಣಿನ ಗಜರಾಜನನ್ನು ಪ್ರತಿಷ್ಠಾಪಿಸಿ ಹೆಣ್ಣು ಮಕ್ಕಳು ವಿಶೇಷ ಪೂಜೆ ಆರತಿ ಮಾಡಿದರು. ಮನೆ ಮುಂಭಾಗದಲ್ಲಿ ದೀಪಗಳನ್ನು ಹಚ್ಚಿ ಸಂಭ್ರಮಿಸಿದರು. ಮೂರು ದಿನಗಳ ನಂತರ ಪ್ರತಿಷ್ಠಾಪಿಸಿದ ಗಜರಾಜನನ್ನು ನೀರಿನಲ್ಲಿ ವಿಸರ್ಜಿಸಿ ಆನೆ ಹಬ್ಬವನ್ನು ಆಚರಿಸುವುದು ವಿಶೇಷವಾಗಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಇಲ್ಲಿನ ಪ್ರಖ್ಯಾತ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದೇವಾಲಯಗಳಲ್ಲಿ ವಿಷ್ಣು ದೀಪೋತ್ಸವ ಶನಿವಾರ ರಾತ್ರಿ ವೈಭವದಿಂದ ನೆರವೇರಿತು.

ದೇವಾಲಯಗಳಲ್ಲಿ ನೂರಾರು ಹಣತೆಗಳನ್ನು ಹಚ್ಚಿ ಸಂಭ್ರಮಿಸಲಾಯಿತು. ಸಂಜೆ ವಿಶೇಷ ಪೂಜೆ ನಂತರ ಚೆಲುವನಾರಾಯಣಸ್ವಾಮಿಗೆ ವೇದ ಮಂತ್ರಘೋಷದೊಂದಿಗೆ ಘಟಾರತಿ ನೆರವೇರಿಸಿ ಕೃತಿಕೋತ್ಸವಕ್ಕೆ ಚಾಲನೆ ನೀಡಲಾಯಿತು.

ಪರಿಚಾರಕ ಪಾರ್ಥಸಾರಥಿಯವರು ಸ್ವಾಮಿಗೆ ಆರತಿ ಮಾಡಿದ ಘಟಾರತಿಯನ್ನು ತಲೆ ಮೇಲೆ ಹೊತ್ತು ಉತ್ಸವದ ಜೊತೆಗೆ ದೇವಾಲಯದ ಮುಂಭಾಗ ಬಂದರು. ನಂತರ ಘಟಾರತಿಯನ್ನು ಪ್ರಸಾದ ಮಣೆಗಾರ್ ಗರುಡಗಂಭದ ಗಂಟೆಯ ಮೇಲ್ಭಾಗದ ಕಮಾನಿನ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿದರು.

ದೇವಾಲಯದ ಬಂಡಿಕಾರರು ಎಣ್ಣೆ ಮತ್ತು ಬಟ್ಟೆಯಿಂದ ಮಾಡಿದ 25 ಅಡಿ ಉದ್ದದ ಕರಗನ್ನು ರಾಜಗೋಪುರದ ಮುಂದೆ ಚೆಲುವನಾರಾಯಣಸ್ವಾಮಿಯವರ ಮಂಟಪ ವಾಹನದ ಮುಂದೆ ದಹನ ಮಾಡಿದರು. ಸ್ವಾಮಿ ಕರುಗನ್ನು ನೂರಾರು ಮಂದಿ ಭಕ್ತರು ಹಣಗೆ ತಿಲಕದಂತೆ ಧರಿಸಿ ಸಂಕಷ್ಟಗಳೆಲ್ಲವೂ ಕರಗಿ ಹೋಗಲಿ ಎಂದು ಪ್ರಾರ್ಥಿಸಿದರು.

ಸ್ವಾಮಿ ಉತ್ಸವ ಮುಕ್ತಾಯವಾಗಿ ಜನವರಿ 5ರಂದು ಕೊಠಾರೋತ್ಸವದೊಂದಿಗೆ ಆರಂಭವಾಗಲಿದೆ. ಡಿ.16 ರಿಂದ ದೇವಾಲಯದಲ್ಲಿ ಬೆಳಗಿನ ಧನುರ್ ಮಾಸ ಪೂಜೆ ಆರಂಭವಾಗಲಿದೆ. ವಿಷ್ಣು ದೀಪೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.