ಸಾರಾಂಶ
ಹಾವೇರಿ: ದೇಶದ ಆರ್ಥಿಕ ಬೆಳವಣಿಗೆಗೆ ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯಗಳು ಹೇಗೆ ಸಹಕಾರಿಯಾಗಿದೆಯೋ ಅದೇ ರೀತಿ ವಿಶ್ವಕರ್ಮಿಗಳು ಕೂಡ ದೇಶದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ಪಿಎಂ ವಿಶ್ವಕರ್ಮ ಯೋಜನೆಗಳ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಳೆದ ವರ್ಷ ದೇಶಾದ್ಯಂತ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಮಹತ್ವಾಕಾಂಕ್ಷಿ ಯೋಜನೆಯ ಮುಖ್ಯ ಉದ್ದೇಶ ದೇಶದಲ್ಲಿರುವ ೧೮ ಮೂಲ ಕಸಬುದಾರರು ಪಾರಂಪರಿಕವಾಗಿ ಸಂಪ್ರದಾಯಕವಾಗಿ ತಮ್ಮ ವೃತ್ತಿಗಳನ್ನು ಮಾಡುತ್ತ ಬಂದಿರುತ್ತಾರೆ. ಅಂತಹ ಸಮುದಾಯದವರು ಕೇವಲ ಒಂದೇ ಒಂದು ವೃತ್ತಿಗೆ ಸೀಮಿತರಾಗದೆ ಬೇರೆ ಬೇರೆ ಉದ್ಯೋಗದಲ್ಲಿ ತೊಡಗಿ ಆರ್ಥಿಕವಾಗಿ ಅಭಿವೃದ್ಧಿ ಹಾಗೂ ಸ್ವಾವಲಂಬನೆ ಹೊಂದುವುದಾಗಿದೆ ಎಂದರು. ಜಿಲ್ಲೆಯಲ್ಲಿ ಒಟ್ಟು ೨೫ ವಿಶ್ವಕರ್ಮ ತರಬೇತಿ ಕೇಂದ್ರಗಳಿದ್ದು, ಅದರಲ್ಲಿ ೧೪ ತರಬೇತಿ ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಈವರೆಗೂ ೮೪,೮೮೫ ಜನರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ೨,೮೪೬ ಜನರು ತರಬೇತಿ ಪಡೆದುಕೊಂಡಿರುತ್ತಾರೆ. ತರಬೇತಿ ಪಡೆದುಕೊಂಡವರಿಗೆ ಗುರುತಿನ ಚೀಟಿ, ತರಬೇತಿ ಪ್ರಮಾಣ ಪತ್ರ, ಆರ್ಥಿಕ ಬೆಂಬಲ, ಮಾರುಕಟ್ಟೆ ಸೌಲಭ್ಯ ಹಾಗೂ ಪ್ರೋತ್ಸಾಹ ಧನ ನೀಡಲಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಕುಶಲಕರ್ಮಿಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಮತ್ತು ಅವರು ಉತ್ಪಾದನೆ ಪ್ರಮಾಣವನ್ನು ಹೆಚ್ಚಿಸುವುದಾಗಿದೆ ಎಂದರು.ಈ ಯೋಜನೆಯಡಿಯಲ್ಲಿ ತರಬೇತಿ ಪಡೆದುಕೊಂಡವರಿಗೆ ಬ್ಯಾಂಕುಗಳಿಂದ ಆರ್ಥಿಕ ಬೆಂಬಲ ಜೊತೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ತರಬೇತಿ ಪಡೆದುಕೊಂಡ ಕಾರ್ಮಿಕರಿಗೆ ಮೊದಲನೇ ಹಂತದಲ್ಲಿ ರು. ೧ ಲಕ್ಷಕ್ಕೆ ಶೇ.೫ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ಈ ಸಾಲ ಮರುಪಾವತಿ ನಂತರ ಮತ್ತೆ ರು ೨ ಲಕ್ಷಕ್ಕೆ ಶೇ.೫ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವ ಗುರಿ ಹೊಂದಿದೆ ಎಂದರು. ಇಂತಹ ಸೌಲಭ್ಯವನ್ನು ಪ್ರತಿಯೊಬ್ಬ ಕಾರ್ಮಿಕರು ಇದರ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.ಇದೇ ಸಂದರ್ಭದಲ್ಲಿ ತರಬೇತಿ ಪಡೆದುಕೊಂಡ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿಗಳು ಪ್ರಮಾಣ ಪತ್ರ ವಿತರಣೆ ಮಾಡಿದರು.ಪಿ.ಎಂ. ವಿಶ್ವಕರ್ಮ ಸಂಯೋಜನಾಧಿಕಾರಿ ರೋಹಿಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಅಶೋಕ ಬ್ಯಾಡಗಿ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಎಸ್ .ಎಚ್.ತಿಮ್ಮೇಶಕುಮಾರ, ಅಂಚೆ ಕಚೇರಿ ಶಾಖಾಧಿಕಾರಿ ಶಾಮಪ್ರಸಾದ್, ಎಸ್‌ಬಿಐ ಶಾಖಾಧಿಕಾರಿ ಧನಂಜಯ, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.