ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ

| Published : Apr 13 2024, 01:06 AM IST

ಸಾರಾಂಶ

ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆಗೆ ಮುನ್ನ ಸಮುದ್ರ ಹಾಗೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.

ಕಾರವಾರ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಮೂರು ಸೆಟ್‌ಗಳಲ್ಲಿ ನಾಮಪತ್ರ ಸಲ್ಲಿಸಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಸಾಥ್ ನೀಡಿದರು.

ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರಿಗೆ ನಾಮಪತ್ರ ಸಲ್ಲಿಸಿದರು.

ನಗರದ ದೈವಜ್ಞ ಭವನದಿಂದ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಬಸನಗೌಡ ಪಾಟೀಲ ಯತ್ನಾಳ, ಹರತಾಳು ಹಾಲಪ್ಪ ಮತ್ತಿತರರು ಸಾಥ್ ನೀಡಿದರು.

ಸಮುದ್ರ, ದೇಗುಲಗಳಲ್ಲಿ ಕಾಗೇರಿ ಪೂಜೆ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆಗೆ ಮುನ್ನ ಸಮುದ್ರ ಹಾಗೂ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.ಪತ್ನಿ ಭಾರತಿ ಹೆಗಡೆ, ಪುತ್ರಿ ಜಯಲಕ್ಷ್ಮೀ ಅವರೊಂದಿಗೆ ನಗರದ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಮಾಲಾದೇವಿಗೆ ಪೂಜೆ ಸಲ್ಲಿಸಿದರು. ತರುವಾಯ ಟಾಗೋರ್ ಕಡಲತೀರಕ್ಕೆ ಆಗಮಿಸಿ ಸಮುದ್ರಕ್ಕೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.ಬಿಜೆಪಿ ಮುಖಂಡರಾದ ಸುನೀಲಕುಮಾರ, ರೂಪಾಲಿ ಎಸ್. ನಾಯ್ಕ, ಹರತಾಳು ಹಾಲಪ್ಪ, ವಿಧಾನಪರಿಷತ್ ಶಾಸಕ ಗಣಪತಿ ಉಳ್ವೇಕರ, ಜಿಲ್ಲಾ ಅಧ್ಯಕ್ಷ ಎನ್.ಎಸ್. ಹೆಗಡೆ ಮತ್ತಿತರರು ಇದ್ದರು.

ಕಾಗೇರಿ ಬಳಿ ₹10.23 ಕೋಟಿ ಆಸ್ತಿ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಚರ, ಸ್ಥಿರಾಸ್ತಿ ಸೇರಿ ₹10.23 ಕೋಟಿ ಒಡೆಯರಾಗಿದ್ದಾರೆ. ಹಾಗಂತ ಕಾಗೇರಿ ಅವರ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿ ಇಲ್ಲ.ಅವಿಭಕ್ತ ಕುಟುಂಬ ಎಂದು ಅಫಿಡವಿಟ್‌ನಲ್ಲಿ ತೋರಿಸಿದ್ದು, ಕಾಗೇರಿ ಬಳಿ ₹೫ ಲಕ್ಷ , ಕುಟುಂಬದ ಸದಸ್ಯರ ಬಳಿ ₹1 ಲಕ್ಷ ನಗದು ಇದೆ. ವಿಶ್ವೇಶ್ವರ ಹೆಗಡೆ ಕಾಗೇರಿ ₹5.78 ಕೋಟಿ ಮೌಲ್ಯದ ಚರಾಸ್ಥಿ, ಪತ್ನಿ ಭಾರತಿ ₹79.32 ಲಕ್ಷ, ಮಕ್ಕಳಾದ ರಾಜಲಕ್ಷ್ಮೀ ₹12.54 ಲಕ್ಷ, ಶ್ರೀಲಕ್ಷ್ಮೀ ₹4.90 ಲಕ್ಷ ಮೌಲ್ಯದ ಚರಾಸ್ಥಿ ಹೊಂದಿದ್ದಾರೆ. ಇದಲ್ಲದೇ ಕುಟುಂಬದ ಇತರ ಸದಸ್ಯರು ₹3.48 ಕೋಟಿ ಆಸ್ತಿ ಹೊಂದಿದ್ದಾರೆ.ಕಾಗೇರಿ ಬಳಿ ₹೭೦ ಲಕ್ಷ ಮೌಲ್ಯದ ಬಂಗಾರ, ₹2.69 ಲಕ್ಷ ಮೌಲ್ಯದ ಬೆಳ್ಳಿ, ಪತ್ನಿ ಭಾರತಿ ಬಳಿ ₹61.60 ಲಕ್ಷ ಮೌಲ್ಯದ ಬಂಗಾರದ ಆಭರಣಗಳಿವೆ. ಪುತ್ರಿಯರ ಬಳಿ ಬಂಗಾರ, ಬೆಳ್ಳಿ ಇಲ್ಲ. ಕಾಗೇರಿ ಹಾಗೂ ಅವರ ಪತ್ನಿ, ಪುತ್ರಿಯರ ಬಳಿ ಕೃಷಿ ಭೂಮಿ ಇಲ್ಲ.

ವಿಶ್ವೇಶ್ವರ ಹೆಗಡೆ ಕಾಗೇರಿ ಬಳಿ ₹4.45 ಕೋಟಿ ಮೌಲ್ಯದ ಹಾಗೂ ಅವಿಭಕ್ತ ಕುಟುಂಬದ ಸದಸ್ಯರ ಬಳಿ ₹2.5 ಕೋಟಿ ಮೌಲ್ಯದ ಸ್ಥಿರಾಸ್ತಿಯಿದೆ. ಕಾಗೇರಿ ಬಿಕಾಂ ಪದವೀಧರರಾಗಿದ್ದಾರೆ. ಕಾಗೇರಿ ಅವರು ಶಿರಸಿಯ ದೀನದಯಾಳ ಟ್ರಸ್ಟಗೆ ₹ 24,50,000 ಸಾಲ ನೀಡಿದ್ದಾರೆ.