ಸರ್ಕಾರಿ ಶಾಲೆಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರ ಭೇಟಿ

| Published : Jun 10 2024, 12:31 AM IST / Updated: Jun 10 2024, 12:32 AM IST

ಸಾರಾಂಶ

ಶಾಲೆಯ ನಿರ್ವಹಣೆ, ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದು ಶೌಚಾಲಯ, ಕೊಠಡಿ ನಿರ್ವಹಣೆ ಸೇರಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದು ಸೂಚನೆ ನೀಡಿದರು. ಅಡುಗೆ ಮನೆ ಕಟ್ಟಡ ನಿರ್ಮಾಣ ಕೆಲಸ ಶೀಘ್ರ ಮುಗಿಸಿ ಅನುಕೂಲವಾಗುವಂತೆ ಮಾಡಿ ಎಂದು ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಮಾಡುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ಭಾ ಯಂಟಗಾನಹಳ್ಳಿ ಸರ್ಕಾರಿ ಶಾಲೆಗೆ ಭೇಟಿ ನೀಡಿ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.ತಾಲೂಕಿನ ಯಂಟಗಾನಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ ಶಾಲಾ ಕೊಠಡಿಗಳು, ಶೌಚಾಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್, ಶಿಕ್ಷಕರ ಕೊಠಡಿಗಳು, ಅಡುಗೆ ಮನೆ, ಕ್ರೀಡಾಂಗಣ ಸೇರಿ ವಿವಿಧ ಸೌಲಭ್ಯಗಳಿರುವ ಬಗ್ಗೆ ಹಾಗೂ ಸೌಲಭ್ಯಗಳ ಅನಿವಾರ್ಯತೆಯ ಬಗ್ಗೆ ಮಾಹಿತಿ ಪಡೆದು ಕರ್ನಾಟಕ ಪಬ್ಲಿಕ್ ಶಾಲೆ ಮಾಡುವ ಸೌಲಭ್ಯಗಳ ಬಗ್ಗೆಯೂ ಪರಿಶೀಲನೆ ಮಾಡಿದರು.ಕೆಲವು ಬದಲಾವಣೆಗಳಿಗೆ ಸೂಚನೆ:

ಶಾಲೆಯ ನಿರ್ವಹಣೆ, ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದು ಶೌಚಾಲಯ, ಕೊಠಡಿ ನಿರ್ವಹಣೆ ಸೇರಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ ಎಂದು ಸೂಚನೆ ನೀಡಿದರು. ಅಡುಗೆ ಮನೆ ಕಟ್ಟಡ ನಿರ್ಮಾಣ ಕೆಲಸ ಶೀಘ್ರ ಮುಗಿಸಿ ಅನುಕೂಲವಾಗುವಂತೆ ಮಾಡಿ ಎಂದು ಸೂಚನೆ ನೀಡಿದರು. ಸಿಆರ್‌ಪಿ ಕಟ್ಟಡ ಎದುರು ಕುಡಿದು ಮಲಗಿದ್ದ ವ್ಯಕ್ತಿಯನ್ನು ಕಂಡು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಕಾರ್ಯದರ್ಶಿಗಳು, ಪೊಲೀಸರನ್ನು ಕರೆಸಿ ಆತನನ್ನು ಹೊರಗೆ ಕಳುಹಿಸಿ ಸಂಪೂರ್ಣ ಕಾಂಪೌಂಡ್ ನಿರ್ಮಾಣ ಮಾಡಿ ಒಳಗೆ ಯಾರು ಬಾರದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದರು.

ಜಿಲ್ಲೆಯಲ್ಲಿ 10 ಶಾಲೆಗಳ ಪ್ರಸ್ತಾವನೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 10 ಕರ್ನಾಟಕ ಪಬ್ಲಿಕ್ ಶಾಲೆಗಳ ಪಟ್ಟಿಯನ್ನು ನೀಡಲಾಗಿದೆ. ಆ ನಿಟ್ಟಿನಲ್ಲಿ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಭೇಟಿ ನೀಡಿದ್ದು, ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೆಚ್ಚು ಆಧ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಶೀಘ್ರದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಕೆಲವು ಶಾಲೆಗಳು ಬದಲಾವಣೆ ಆಗಲಿವೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದರು.ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಆಯುಕ್ತೆ ಕಾವೇರಿ, ಡಿಡಿಪಿಐ ಕೃಷ್ಣಮೂರ್ತಿ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಲಲಿತಮ್ಮ , ಡಿಡಿಪಿಐ ಕಚೇರಿ ಶಿಕ್ಷಣಾಧಿಕಾರಿ ಹನುಮನಾಯಕ್, ಬಿಇಓ ತಿಮ್ಮಯ್ಯ, ಶಾಲೆ ಕಾರ್ಯಾಧ್ಯಕ್ಷ ಸಂಪತ್‌ಬಾಬು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್, ಶಿಕ್ಷಣ ಸಂಯೋಜಕ ಸುಚೀತ್ರ ಸೇರಿದಂತೆ ಮತ್ತಿತರರಿದ್ದರು.