ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು
ಕಳೆದ 35 ವರ್ಷಗಳಿಂದ ರೈತರ ಪಾಲಿಗೆ ಹಗಲು ಕನಸಾಗಿದ್ದ ನುಗು ಏತ ನೀರಾವರಿ ಯೋಜನೆ ಕಾಮಗಾರಿ ಸಂಪೂರ್ಣವಾಗಿದ್ದರೂ ಸಹ ಸ್ಥಳೀಯ ಶಾಸಕರ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಉದ್ಘಾಟನೆಗೊಂಡಿಲ್ಲ, ರೈತರ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಶಾಸಕರನ್ನು ಆಗ್ರಹಿಸುತ್ತೇನೆ ಎಂದು ಮಾಜಿ ಶಾಸಕ ಬಿ. ಹರ್ಷವರ್ಧನ್ ಹೇಳಿದರು.ಕಣೆನೂರು ಸಮೀಪದ ನುಗು ಏತ ನೀರಾವರಿ ಯೋಜನೆಯ ನೀರೆತ್ತುವ ಪಂಪ್ ಹೌಸ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ನನ್ನ 5 ವರ್ಷದ ರಾಜಕೀಯ ತಪಸ್ಸಿನ ಫಲ ಯೋಜನೆ ಪೂರ್ಣಗೊಂಡಿದೆ.ಮೂರು ದಶಕಗಳ ರೈತರ ಕನಸಾಗಿದ್ದ ಈ ಯೋಜನೆ ಜಾರಿಗೊಳಿಸಲು ಮಾಜಿ ಸಚಿವರಾದ ಎಂ. ಮಹದೇವು, ಡಿ.ಟಿ. ಜಯಕುಮಾರ್ ಸೇರಿದಂತೆ ಹಲವಾರು ಘಟಾನುಘಟಿ ನಾಯಕರು ಪ್ರಯತ್ನಿಸಿದರೂ ಸಹ ಯೋಜನೆ ಅನುಷ್ಠಾನಗೊಂಡಿರಲಿಲ್ಲ, 2018ರಲ್ಲಿ ನೂತನ ಶಾಸಕನಾಗಿ ಆಯ್ಕೆಯಾದ ನಂತರ ಯೋಜನೆ ಆರಂಭಿಸುವ ಮಾತನಾಡಿದಾಗ ಹಿರಿಯ ರಾಜಕಾರಣಿಗಳು, ರಾಜಕೀಯ ತಿಳಿಯದ ಅಪ್ರಬುದ್ದರು, ಈತನಿಂದ ಸಾಧ್ಯವೇ ಎಂದೂ ಸಹ ಕುಹಕವಾಡಿದ್ದರು. ಎಚ್.ಡಿ. ಕುಮಾರಸ್ವಾಮಿ ಸುತ್ತೂರು ಜಾತ್ರೆಯಲ್ಲಿ ಪಾಲ್ಗೊಂಡಿದ್ದ ವೇಳೆ ಸುತ್ತೂರು ಶ್ರೀಗಳ ಮೂಲಕ ಯೋಜನೆಗೆ ಒಪ್ಪಿಗೆ ಸೂಚಿಸುವಂತೆ ಬೇಡಿಕೆ ಇಟ್ಟ ಪರಿಣಾಮ ಎಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ ನಲ್ಲಿ ಸೇರಿಸಿ 80 ಕೋಟಿ ಅನುದಾನವನ್ನು ಮೀಸಲಿಟ್ಟದ್ದರು. ಆದರೆ ಕೊರೋನಾ ಸಂದರ್ಭದಲ್ಲಿ ಯಾವುದೇ ಹಣ ಬಿಡುಗಡೆಯಾಗದೆ ಮತ್ತೆ ಎರಡು ವರ್ಷ ವಿಳಂಬವಾಯಿತು, ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಯೋಜನೆಗೆ ಒಪ್ಪಿಗೆ ನೀಡಿ ಆಡಳಿತಾತ್ಮ ಅನುಮೋದನೆ ನೀಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರವೇರಿಸಿ ಅನುಷ್ಠಾನಗೊಳಿಸಿದರು ಎಂದು ಅವರು ತಿಳಿಸಿದರು.
80 ಕೋಟಿ ಅನುದಾನದಲ್ಲಿ 60 ಕೋಟಿ ಮಾತ್ರ ಬಳಸಿಕಾವೇರಿ ನೀರಾವರಿ ನಿಗಮದ ಎಂಡಿಯಾಗಿದ್ದ ಜಯಪ್ರಕಾಶ್ ಅವರು ಈ ನುಗು ಏತ ನಿರಾವರಿ ಯೋಜನೆಯನ್ನು ಸೋಲಾರ್ ಶಕ್ತಿಯಿಂದ ಕಾರ್ಯನಿರ್ವಹಿಸುವಂತಹ ಯೋಜನೆ ಸಿದ್ದಪಡಿಸಿದ್ದರು. ಆದರೆ ಶಾಸಕರು ಇಚ್ಚಾಶಕ್ತಿ ಕೊರತೆಯಿಂದ ಆ 20 ಕೋಟಿ ಸೋಲಾರ್ ಶಕ್ತಿ ಯೋಜನೆಗೆ ಕಾರ್ಯಗತಗೊಳಿಸದೆ ಬರೀ ವಿದ್ಯುತ್ಛಕ್ತಿ ಮೂಲಕವೇ ಕಾರ್ಯನಿರ್ವಹಿಸುವಂತೆ ಮಾಡಿದ್ದಾರೆ. ಇಡೀ ರಾಜ್ಯದಲ್ಲಿ ಸೋಲಾರ್ ನಲ್ಲಿ ಕಾರ್ಯನಿರ್ವಹಿಸುವ ಕಾರ್ಯಯೋಜನೆ ಎಲ್ಲೂ ಇಲ್ಲ, ಬಹುಶಃ ಈ ಯೋಜನೆಯನ್ನು ಶಾಸಕರು ಪೂರ್ಣಗೊಳಿಸಿದಲ್ಲಿ ನಂಜನಗೂಡು ಕ್ಷೇತ್ರಕ್ಕೆ ಬಹು ದೊಡ್ಡ ಹೆಸರು ಬರುತ್ತಿತ್ತು. ಆದರೆ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಯೋಜನೆಯಲ್ಲಿ 20 ಕೋಟಿಗಳನ್ನು ಬಳಕೆ ಮಾಡಿಕೊಳ್ಳಲು ಮನಸ್ಸು ಮಾಡಿಲ್ಲ ಎಂದು ಹರಿಹಾಯ್ದರು.ಈ ಯೋಜನೆ ಉದ್ಘಾಟನೆಗೊಳಿಸಿದರೆ ಹರ್ಷವರ್ಧನ್ಗೆ ಹೆಸರು ಬಂದುಬಿಡುತ್ತದೆ ಎಂದು ವಿಳಂಬಗೊಳಿಸುತ್ತಿದ್ದಾರೆ. ಈ ಯೋಜನೆಯನ್ನು ತುರ್ತಾಗಿ ಅನುಷ್ಠಾನಗೊಳಿಸಿ ತಾಲೂಕು ಆಡಳಿತ ವಿಫಲರಾದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಯೋಜನೆಯನ್ನು ಉದ್ಘಾಟನೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು. ಜಿಪಂ ಮಾಜಿ ಸದಸ್ಯ ಸಿ. ಚಿಕ್ಕರಂಗನಾಯಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಣೆನೂರು ಪರಶಿವಮೂರ್ತಿ, ತಾಪಂ ಮಾಜಿ ಸದಸ್ಯರಾದ ಶಿವಣ್ಣ, ಬಸವರಾಜು, ಮುಖಂಡರಾದ ಶಿವರುದ್ರ, ದೊಡ್ಡಂಕಶೆಟ್ಟಿ, ಶಿವಬಸಪ್ಪ, ರಜಾಕ್, ಮಹೇಶ್ ಇದ್ದರು. -- ಬಾಕ್ಸ್- -- ಶಾಸಕರು ರೈತ ವಿರೋಧ ನೀತಿ ಅನುಸರಿಸಿದ್ದಾರೆ--ಯೋಜನೆ ಪೂರ್ಣಗೊಂಡು ಸುಮಾರು ಎರಡು ತಿಂಗಳು ಕಳೆದಿದೆ, ಈ ವರ್ಷ ಅದೃಷ್ಟಕ್ಕೆ ಉತ್ತಮ ಮಳೆಯಾಗಿದೆ, ಈ ಯೋಜನೆ ಉದ್ಘಾಟನೆಗೊಂಡಿದ್ದಲ್ಲಿ 900 ಎಕರೆ ಪ್ರದೇಶದ ನರಸಾಂಬುದಿ ಕೆರೆ ಸೇರಿದಂತೆ ತಾಲೂಕಿನ 7 ಕೆರೆಗಳು ತುಂಬಿ ಸುಮಾರು 25 ಹೆಕ್ಟೇರ್ ಪ್ರದೇಶಕ್ಕೆ ನಿರಾವರಿ ಸೌಲಭ್ಯ ಒದಗಿಸುವ ಮೂಲಕ ರೈತರಿಗೆ ಅನುಕೂಲವಾಗುತ್ತಿತ್ತು. ಅಲ್ಲದೆ ಅಂತರ್ಜಲ ಹೆಚ್ಚಳಕ್ಕೆ ಸಹಕಾರಿಯಾಗುತ್ತಿತ್ತು. ಹಲವಾರು ಬಾರಿ ಮುಖ್ಯಮಂತ್ರಿಗಳು ನಂಜನಗೂಡಿಗೆ ಬಂದಿದ್ದರೂ ಸಹ ಯೋಜನೆ ಉದ್ಘಾಟನೆಗೊಳಿಸದೆ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ರಾಜಕೀಯ ಮಾಡಿಕೊಂಡು ನಿರ್ಲಕ್ಷ್ಯವಹಿಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸುತ್ತಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಆಪಾದಿಸಿದರು.
------------