ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಸೀದಿ ದರ್ಶನವು ಮಸೀದಿಗಳಲ್ಲಿ ಭಾವೈಕ್ಯತೆ ಮತ್ತು ಸಮರಸ್ಯ ಉಂಟು ಮಾಡುವ ಒಂದು ರಹದಾರಿಯಾಗಿದೆ. ಎಲ್ಲಾ ಜನಾಂಗದ ಒಳಿತಿಗೆ ಇಲ್ಲಿ ಪಾಠ ಹೇಳುವಂತಿರುತ್ತದೆ. ನಮ್ಮ ನಮ್ಮಲ್ಲಿನ ಸಾಮರಸ್ಯ ಕದಡದಂತೆ ನಾವು ಮುನ್ನಡೆಯಬೇಕು. ಅದು ಇಂತಹ ಮಸೀದಿಯಿಂದ ಕಲಿತ ಪಾಠವಾಗಲಿದೆ. ಯಾವುದೇ ಧರ್ಮವು ಮನುಷ್ಯ ಮನುಷ್ಯರ ಮಧ್ಯೆ ವಿಷ ಬೀಜ ಹರಡಲಾರದು. ಅದಕ್ಕೆ ನಿಜ ಸಾಕ್ಷಿ ಈ ಮಸೀದಿ ದರ್ಶನ. ನಾವೆಲ್ಲ ಸೋದರರು ಎಂಬ ಮನೋಭಾವನೆಯಿಂದ ಮುನ್ನಡೆಬೇಕು ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ತಿಳಿಸಿದರು.

ನಗರದ ಮುನಿಸಿಪಾಲ್ ಲೇಔಟ್‌ನ ಅಕ್ಸ ಎ ಮಸೀದಿ ಸಮಿತಿ ವತಿಯಿಂದ ರಂಜಾನ್ ಮಾಸದ ಅಂಗವಾಗಿ ಮಸೀದಿಗಳ ಕುರಿತಂತೆ ಜನಸಾಮಾನ್ಯರಿಗೆ ಇರುವ ಕುತೂಹಲವನ್ನು ತಣಿಸಲು ಏರ್ಪಡಿಸಿದ್ದ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ, ವೃತ್ತ ಪತ್ರಿಕೆಗಳಲ್ಲಿ ಬರುವ ಅಂಶಗಳೆಲ್ಲವೂ ನಿಜವೆಂದು ನಂಬಬಾರದು. ಬದಲಿಗೆ ನಮ್ಮ ನಮ್ಮೊಳಗಿನ ಅಂತರ್ ಶುದ್ಧಿಯನ್ನು ಹೆಚ್ಚಿಸಿಕೊಂಡು ಸರ್ವರೊಂದಿಗೆ ಸಾಮರಸ್ಯ ಬೆಳೆಸಿಕೊಳ್ಳಬೇಕು ಎಂದರು.

ಮಸೀದಿ ಕಮಿಟಿ ಅಧ್ಯಕ್ಷ ಅಬ್ದುಲ್ ಮಾತನಾಡಿ, ರಂಜಾನ್‌ ಶಾಂತಿ ಪ್ರೀತಿ ಹಾಗೂ ಕರುಣೆಯ ತಿಂಗಳಾಗಿದ್ದು, ರಂಜಾನ್ ಮಾಸ ಸಹನೆಯ ಮಾಸವಾಗಿದೆ. ಈ ಅವಧಿಯಲ್ಲಿ ಕಡ್ಡಾಯ ಕರ್ಮಗಳನ್ನು ಶ್ರದ್ಧೆಯಿಂದ ನಿರ್ವಹಿಸುವವರಿಗೆ ಇತರೆ ಅವಧಿಗಿಂತ 80 ಪಟ್ಟು ಹೆಚ್ಚು ಪ್ರತಿಫಲ ಸಿಗಲಿದೆ. ಈ ಮಾಸದಲ್ಲಿ ಉಪವಾಸ, ಸೃಷ್ಟಿಕರ್ತನ ಧ್ಯಾನ, ಪ್ರಾರ್ಥನೆ, ದೈಹಿಕ, ಮಾನಸಿಕ ಪರಿಶುದ್ಧತೆ, ಪಂಚೇಂದ್ರಿಯಗಳ ಮೇಲೆ ಲಗಾಮು, ಆಸ್ತಿ, ಪಾಸ್ತಿ ಆಧರಿಸಿ ನೀಡುವ ಕಡ್ಡಾಯ ದಾನ, ಧರ್ಮ, ಕಟ್ಟಿಗೆ ಸುಡುವ ಬೆಂಕಿಯಂತೆ ಈ ಮಾಸವನ್ನು ಆಚರಿಸುವ ವ್ಯಕ್ತಿಯ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ ಎಂದರು.

ಸಮುದಾಯದ ಮುಖಂಡ ಬೆಂಗಳೂರಿನ ಡಾ. ಮಸೂದ್ ರುಹುಲ್ಲ ಮಾತನಾಡಿ, ರಂಜಾನ್ ಈ ಅವಧಿಯಲ್ಲಿ ಯಾವುದೇ ಬಯಕೆಗಳನ್ನು ತೋರ್ಪಡಿಸದೇ ನಿತ್ಯದ ಕಾರ್ಯಗಳ ಜೊತೆಗೇ ಕುರಾನ್ ಓದುವಿಕೆ, ಧರ್ಮಗ್ರಂಥಗಳ ವ್ಯಾಖ್ಯಾನ ಮೊದಲಾದವುಗಳ ಮೂಲಕ ಕಾಲ ಕಳೆಯುವುದರ ಜೊತೆ ಜನರಲ್ಲಿ ಸದ್ಭಾವನೆ ಉಂಟುಮಾಡುವ ನಿಟ್ಟಿನಲ್ಲಿ ಈ ಮಾಸಂತ್ಯ ಜಾಗೃತಿ ಹೆಚ್ಚು ಮಾಡಲಿದೆ ಎಂದರು.


ಧರ್ಮ ಗುರು ಮನ್ಸೂರ್ ಮಾತನಾಡಿ, ಈ ಮಾಸದ ಪ್ರತಿ 10 ದಿನಗಳನ್ನು 1 ಭಾಗವಾಗಿ ವಿಂಗಡಿಸಿದೆ. 1ನೇ ಭಾಗ ಅಲ್ಲಾಹನ ಕರುಣೆಗಾಗಿ, 2ನೇ ಭಾಗ ಸಾರ್ವತ್ರಿಕ ಕ್ಷಮೆಗಾಗಿ, 3ನೇ ಭಾಗ ನರಕದಿಂದ ಮುಕ್ತಿಗಾಗಿ ಎಂಬುದಾಗಿದೆ ಪ್ರತಿ ಪ್ರೌಢ, ಬುದ್ಧಿ ಪಕ್ವವಾಗಿರುವ ಹಾಗೂ ಸ್ಥಿರವಾಗಿ ವಾಸಿಸುವ ಮುಸ್ಲಿಮರಿಗೆ ಉಪವಾಸ ಕಡ್ಡಾಯವಾಗಿದೆ. ಸೂರ್ಯೋದಯದಿಂದ ಪ್ರಾರಂಭಗೊಂಡು ಸೂರ್ಯಾಸ್ತಮಾನದವರೆಗೆ ಉಪವಾಸ ವ್ರತ ಜಾರಿಯಲ್ಲಿರುತ್ತದೆ ಎಂದರು

ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುಬಾರಕ್, ಉಪಾಧ್ಯಕ್ಷ ಸೈಯದ್ ನಜೀ಼ರ್, ಜಂಟಿ ಕಾರ್ಯದರ್ಶಿ ಶಮ್ಸ್ ತಬರೇಜ಼್, ಖಜಾಂಚಿ ಅಬ್ದುಲ್ ಅಲೀಂ ಸಮುದಾಯದ ಪ್ರಮುಖರಾದ ಮುಜೀಬ್, ಶಿವಕುಮಾರ್, ಪತ್ರಕರ್ತ ಎಂ ಕೃಷ್ಣಪ್ಪ, ಭಾಸ್ಕರ ಮತ್ತಿತರರು ಮಾತನಾಡಿದರು.ಕಾರ್ಯಕ್ರಮದಲ್ಲಿ ಹಾಜರಿದ್ದವರಿಗೆ ಮಸೀದಿಯ ಆವರಣವನ್ನು, ಅದರ ಪ್ರಾರ್ಥನಾ ಪ್ರದೇಶಗಳು, ಮೇಲಿನ ಮಹಡಿಗಳು ಮತ್ತು ಪರಂಪರೆಯ ವಿಭಾಗಗಳನ್ನು ಮುಕ್ತವಾಗಿ ಅನ್ವೇಷಿಸಲು ಅವಕಾಶ ನೀಡಲಾಯಿತು.ಕುರಾನ್ ಸಂದೇಶಗಳು, ಪ್ರವಾದಿಯ ಬೋಧನೆಗಳು, ವಿವಿಧ ಭಾಷೆಗಳಲ್ಲಿ ಕುರಾನ್‌ನ ಅನುವಾದಗಳು ಮತ್ತು ಮಸೀದಿಯ ಇತಿಹಾಸ ಹಾಗೂ ವಾಸ್ತುಶಿಲ್ಪವನ್ನು ಎತ್ತಿ ತೋರಿಸುವ ವಿಡಿಯೋ ಪ್ರಸ್ತುತಿ ಮಾಡಲಾಯಿತು. ಸ್ವಯಂಸೇವಕರು ಮತ್ತು ಧಾರ್ಮಿಕ ವಿದ್ವಾಂಸರು ನಮಾಜ್(ಪ್ರಾರ್ಥನೆ), ಅಜಾನ್(ಪ್ರಾರ್ಥನೆಗೆ ಕರೆ), ಮಸೀದಿ ಶಿಷ್ಟಾಚಾರ ಮತ್ತು ವಿವಿಧ ಜಮಾಅತ್‌ಗಳ(ಸಭೆಗಳು) ಪಾತ್ರಗಳ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದರು.

ಮಸೀದಿಗೆ ಬಂದ ಸರ್ವ ಧರ್ಮೀಯರನ್ನು ಖರ್ಜೂರ, ಕಲ್ಲಂಗಡಿ ರಸ, ತಿಂಡಿಗಳು, ಚಹಾ, ಊಟ, ಇಸ್ಲಾಮಿಕ್ ಸಾಹಿತ್ಯ ಮತ್ತು ಸುಗಂಧ ದ್ರವ್ಯ ಉಡುಗೊರೆಗಳನ್ನು ಒಳಗೊಂಡ ಆತಿಥ್ಯದೊಂದಿಗೆ ಸ್ವಾಗತಿಸಲಾಯಿತು.

ಸಿಕೆಬಿ-2 ನಗರದ ಸರ್ ಎಂವಿ ಬಡಾವಣೆಯ ಅಕ್ಸ ಎ ಮಸೀದಿ ಸಮಿತಿ ವತಿಯಿಂದ ಎರ್ಪಡಿಸಿದ್ದ “ಮಸೀದಿ ದರ್ಶನ” ಕಾರ್ಯಕ್ರಮದಲ್ಲಿಡಾ.ಎನ್.ಶಿವರಾಮರೆಡ್ಡಿ ಮಾತನಾಡಿದರು.