ದಾವಣಗೆರೆಯ ಸ್ವಾಮಿ ವಿವೇಕಾನಂದ ಬಡಾವಣೆಯ ಪಾರ್ಕ್ ಜಾಗವನ್ನು ಏಕ ನಿವೇಶನ ಮಾಡಿಕೊಟ್ಟಿಲ್ಲ, ಸಾರ್ವಜನಿಕ ಪಾರ್ಕ್ ಜಾಗವನ್ನು ಯಾವುದೇ ಖಾಸಗಿ ವ್ಯಕ್ತಿಗಳಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯ ಸ್ವಾಮಿ ವಿವೇಕಾನಂದ ಬಡಾವಣೆಯ ಪಾರ್ಕ್ ಜಾಗವನ್ನು ಏಕ ನಿವೇಶನ ಮಾಡಿಕೊಟ್ಟಿಲ್ಲ, ಸಾರ್ವಜನಿಕ ಪಾರ್ಕ್ ಜಾಗವನ್ನು ಯಾವುದೇ ಖಾಸಗಿ ವ್ಯಕ್ತಿಗಳಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಆಯುಕ್ತರು ಸ್ಪಷ್ಟಪಡಿಸಿದರು.ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ಸ್ವಾಮಿ ವಿವೇಕಾನಂದ ಬಡಾವಣೆಯ ಪಾರ್ಕ್ ಜಾಗವು ಮಹಾನಗರ ಪಾಲಿಕೆ ಆಯುಕ್ತರ ಹೆಸರಿಗೆ ಇ-ಸ್ವತ್ತು ಇದೆ. ಅದನ್ನು ಖಾಸಗಿ ವ್ಯಕ್ತಿಗಳಿಗೆ ಮಾಡಿಕೊಡುವ ಪ್ರಶ್ನೆಯೇ ಇಲ್ಲ ಎಂದರು.
ಶಾಬನೂರು ರಿ.ಸ.ನಂ.127/1ಎ1ರ 13 ಗುಂಟೆ ಜಾಗಕ್ಕೆ ದೂಡಾದಿಂದ ಏಕ ನಿವೇಶನಕ್ಕೆ ಪಹಣಿ, ಪೋಡಿ, ಭೂ ಪರಿವರ್ತನೆ ಆದೇಶ, ನ್ಯಾಯಾಲಯದ ಆದೇಶ ಹಾಗೂ ಸ್ಥಳ ಪರಿಶೀಲಿಸಿದ ನಂತರವೇ ಅನುಮೋದನೆ ನೀಡಲಾಗಿದೆ. ಇದರಲ್ಲಿ ಯಾವುದೇ ಅಕ್ರಮವೂ ಆಗಿಲ್ಲ. ಎಲ್ಲವೂ ದಾಖಲೆ ಪ್ರಕಾರ ಆಗಿದೆ. ನಾವು ಸ್ಥಳ ಪರಿಶೀಲಿಸಿದ ವೇಳೆ ಅಲ್ಲಿ ಪಾರ್ಕ್ ಇರುವುದು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿದರು.ಏಕ ನಿವೇಶನದ ಅನುಮೋದನೆಗೂ ಮುಂಚೆಯೇ ಪಾಲಿಕೆಗೆ ರಸ್ತೆಯನ್ನು ತಾತ್ಕಾಲಿಕವಾಗಿ ಹಸ್ತಾಂತರಿಸಲಾಗುತ್ತದೆ. ಆಗಲೂ ಪಾಲಿಕೆಯಿಂದ ಯಾವುದೇ ಆಕ್ಷೇಪಣೆಗಳೂ ಬಂದಿಲ್ಲ. ಎಲ್ಲಾ ಅಂತಿಮಗೊಂಡ ಬಳಿಕ ಅದು ಸಾರ್ವಜನಿಕ ಪಾರ್ಕ್ ಜಾಗ. ಮಹಾನಗರ ಪಾಲಿಕೆಗೆ ಸಂಬಂಧಿಸಿದ ಜಾಗವೆಂಬುದಾಗಿ ಹೇಳುತ್ತಿದ್ದು, ಈಗ ಪ್ರಕರಣ ನ್ಯಾಯಾಲಯದಲ್ಲಿದೆ. ಸಾರ್ವಜನಿಕ ಆಸ್ತಿ ರಕ್ಷಣೆಗೆ ನಾವು ಬದ್ಧರಿದ್ದೇವೆ ನ್ಯಾಯಾಲಯದ ಆದೇಶ ಪರಿಪಾಲಿಸುತ್ತೇವೆ ಎಂದು ತಿಳಿಸಿದರು.
ಖಾಸಗಿ ವ್ಯಕ್ತಿಗಳ ಪರವಾಗಿ ಪಿಆರ್‌ಎಲ್ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಸಿಜೆಎಂ ದಾವಣಗೆರೆ ನ್ಯಾಯಾಲಯದ ಪ್ರಕರಣ ಸಂಖ್ಯೆ ಓ.ಎಸ್.ನಂ.411/2023ರ ಆದೇಶದ ಪ್ರತಿಯನ್ನು ಅರ್ಜಿದಾರರು ಸಲ್ಲಿಸಿದ್ದರು. ಜೂ.3ರಂದು ನಡೆದ ದೂಡಾ ಸಭೆಯ ನಿರ್ಣಯದಂತೆ ಜು.4ರಂದು ಪರಿಷ್ಕೃತ ತಾತ್ಕಾಲಿಕ ಏಕ ನಿವೇಶನ ವಸತಿ ವಿನ್ಯಾಸ ಅನುಮೋದನೆ ನೀಡ ಲಾಗಿರುತ್ತದೆ. ಪಾಲಿಕೆ ಆಯುಕ್ತರು ಜಂಟಿ ಸರ್ವೇಗೆ ನಿಗದಿಪಡಿಸಿ, ಆದೇಶಿಸಿದ್ದರು ಎಂದರು.ನಂತರ ಪಾಲಿಕೆ ಆಯುಕ್ತರು ಅಪೀಲು ಸಂಖ್ಯೆ 61/2025ರಂದು ಮೇಲ್ಮನವಿ ಸಲ್ಲಿಸಿದ್ದಾರೆ. ಓ.ಎಸ್.ನಂಬರ್ 411/2023ರ ಪ್ರಕರಣದ ಮೇಲ್ಮನವಿ ವಿಚಾರಣೆ ನಡೆದು, ಆದೇಶದವಾದ ನಂತರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ದೂಡಾದಿಂದ ಏಕ ನಿವೇಶನ ಅನುಮೋದನೆ ಬಳಕಿ ಸಂಬಂಧಿಸಿದ ವ್ಯಕ್ತಿ ಡೋರ್ ನಂಬರ್‌ಗಾಗಿ ಪಾಲಿಕೆಗೆ ಬಂದಿದ್ದರು. ಆಗ ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿಗಳ ಸಂಘವು ಪಾರ್ಕ್ ಜಾಗವು ಖಾಸಗಿ ವ್ಯಕ್ತಿ ಹೆಸರಿಗೆ ಮಾಡಿಕೊಳ್ಳುತ್ತಿರುವ ಬಗ್ಗೆ ದೂರಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿ, ದಾಖಲೆ ಹಾಗೂ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದಾಗ ಪಾರ್ಕ್‌ಗೆ ಮೀಸಲಿದ್ದ ಜಾಗವೆಂದು ಸ್ಪಷ್ಟವಾಯಿತು. ಹಾಗಾಗಿ ಡೋರ್ ನಂಬರನ್ನು ಪಾಲಿಕೆ ನೀಡಲಿಲ್ಲ. ಪಾರ್ಕ್ ಜಾಗವನ್ನು ಪಾಲಿಕೆ ಹೆಸರಿಗೆ ಇ-ಸ್ವತ್ತು ಸಹ ಮಾಡಿಸಲಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದೇವೆ ಎಂದರು.ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಸದಸ್ಯರಾದ ವಾಣಿ ಬಕ್ಕೇಶ ನ್ಯಾಮತಿ, ಮಂಜುನಾಥ, ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ವಿಪಕ್ಷದ ಮಾಜಿ ನಾಯಕ ಎ.ನಾಗರಾಜ, ಎಚ್.ಜೆ. ಮೈನುದ್ದೀನ್, ರಾಘವೇಂದ್ರ ಗೌಡ, ಎಲ್.ಎಂ.ಎಚ್.ಸಾಗರ್, ವರುಣ್ ಬೆಣ್ಣೆಹಳ್ಳಿ ಇತರರು ಇದ್ದರು.
ದಾವಣಗೆರೆ ಪಾಲಿಕೆಯ ಕೆಲ ಅಧಿಕಾರಿ, ಸಿಬ್ಬಂದಿ ಬಳಸಿಕೊಂಡು ದಾಖಲೆ ತಿದ್ದುವ, ದಾಖಲೆಯನ್ನು ಕೆರೆದು ಅಳಿಸಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ. ಪಾರ್ಕ್ ಜಾಗದ ವಿವರವನ್ನು ಬ್ಲೇಡ್‌ನಿಂದ ಕೆರೆಯುವ ಪ್ರಯತ್ನ ನಡೆಸಲಾಗಿದೆ. ಆದರೆ, ದಾಖಲೆಗಳಲ್ಲಿ ಯಾವುದೇ ಅಧಿಕಾರಿ ಷರಾ ಬರೆದಿಲ್ಲ.ರೇಣುಕಾ, ಆಯುಕ್ತೆ, ದಾವಣಗೆರೆ ಪಾಲಿಕೆ.