ಸಾರಾಂಶ
ಕುಷ್ಟಗಿ: ಸ್ವಾಮಿ ವಿವೇಕಾನಂದರು ನಾಡಿಗೆ ನೀಡಿದ ಕೊಡುಗೆ ಅಪಾರ. ಯುವ ಜನಸಮೂಹಕ್ಕೆ ಬದುಕನ್ನು ಕಟ್ಟಿಕೊಳ್ಳಲು ಇರಬೇಕಾದ ಅರ್ಹತೆ ಕುರಿತು ಹಲವಾರು ವಿಚಾರಗಳನ್ನು ಬಿಟ್ಟು ಹೋಗಿದ್ದಾರೆ ಅವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಾಲೂಕು ಕಸಾಪ ಅಧ್ಯಕ್ಷ ವಿರೇಶ ಬಂಗಾರಶೆಟ್ಟರ ಅಭಿಪ್ರಾಯಪಟ್ಟರು.ಪಟ್ಟಣದ ವಿವೇಕ ಕಂಪ್ಯೂಟರ್ ಶಿಕ್ಷಣ ಕೇಂದ್ರದಲ್ಲಿ ಆಯೋಜಿಸಿದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಯುವ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಮ್ಮೆ ಸ್ವಾಮಿ ವಿವೇಕಾನಂದರು ಭಾಷಣ ಮಾಡುತ್ತಿದ್ದಾಗ ವಿದೇಶಿ ಮಹಿಳೆಯೊಬ್ಬಳು ವಿವೇಕಾನಂದರ ಪಾಂಡಿತ್ಯಕ್ಕೆ ಮನಸೋತು ಅವರಂತೆ ಒಂದು ಮಗುವನ್ನು ಪಡೆಯುವ ಇಚ್ಚೆಯಿಂದ ಪತಿಯಾಗಿ ಪಡೆಯುವ ಹಂಬಲವನ್ನು ವ್ಯಕ್ತಪಡಿಸಿದಾಗ ಅಷ್ಟೇ ನಿಷ್ಕಲ್ಮಶದಿಂದ ವಿವೇಕಾನಂದರು ಅವಳ ಬೇಡಿಕೆಯನ್ನು ನಿರಾಕರಿಸಿ, ನನ್ನನ್ನೇ ನಿನ್ನ ಮಗನನ್ನಾಗಿ ಸ್ವೀಕರಿಸಿ ಬಿಡು ತಾಯಿ ಎಂದು ಹೇಳಿದರಂತೆ. ಅಂತಹ ವೀರ ಸನ್ಯಾಸಿ ವಿವೇಕಾನಂದರು ಎಂದು ಹೇಳಿದರು.ಕೇಂದ್ರದ ಮುಖ್ಯಸ್ಥ ಭರತ ಜೋಶಿ ಮಾತನಾಡಿ ವಿವೇಕಾನಂದರು ಯುವಕರನ್ನು ಬಡಿದೆಬ್ಬಿಸುವ ಜೊತೆಗೆ ರಾಷ್ಟ್ರದ ಗೌರವ ರಾಷ್ಟ್ರ ಪ್ರೇಮವನ್ನು ಮೂಡಿಸಿದ ಮಹಾನ್ ಸಂತರು. ಅವರು ರಚಿಸಿದ ಹಲವಾರು ಕೃತಿಗಳನ್ನು ಓದುವ ಮೂಲಕ ಅವರ ಬಗ್ಗೆ ಹೆಚ್ಚಿನ ವಿಚಾರ ತಿಳಿದುಕೊಳ್ಳಲು ಸಾಧ್ಯ. ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿದು ಯುವ ಸಮುದಾಯಕ್ಕೆ ಉತ್ತಮ ಸಂದೇಶ ನೀಡಿದರು ಎಂದು ನುಡಿದರು.ಪಾಂಡುರಂಗ ಆಶ್ರಿತ, ಶಾಂತರಾಜ ಗೋಗಿ, ವಿವೇಕಾನಂದರ ಜೀವನ ಬದುಕಿನ ಬಗ್ಗೆ ಮಾತನಾಡಿ, ಕೇವಲ ೩೯ ವರ್ಷ ಬದುಕಿದ ಸ್ವಾಮಿ ವಿವೇಕಾನಂದರು ಸಾವಿರಾರು ವರ್ಷಗಳ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ವಿವೇಕ ಕಂಪ್ಯೂಟರ್ ಶಿಕ್ಷಣದ ವಿದ್ಯಾರ್ಥಿಗಳು ಕೂಡಾ ಸ್ವಾಮಿ ವಿವೇಕಾನಂದರ ಕುರಿತು ಅಭಿಪ್ರಾಯ ಮಂಡಿಸಿದರು.ವೇದಿಕೆಯ ಮೇಲೆ ಕಸಾಪ ಮಾಜಿ ತಾಲೂಕು ಅಧ್ಯಕ್ಷ ರವೀಂದ್ರ ಬಾಕಳೆ ಉಪಸ್ಥಿತರಿದ್ದರು.