ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭಾರತದ ಶ್ರೇಷ್ಠ ಸಂಸ್ಕೃತಿ, ಪರಂಪರೆಯನ್ನು ಇಡೀ ವಿಶ್ವಕ್ಕೆ ಅನಾವರಣಗೊಳಿಸಿದ ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ಪರಿಕಲ್ಪನೆಯ ಅದರ್ಶ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದು ಉಪನ್ಯಾಸಕ ಹಾಗೂ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್. ಋಗ್ವೇದಿ ಅವರು ತಿಳಿಸಿದರು.ನಗರದ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್ ಕಾಲೇಜಿನಲ್ಲಿ ಭಾರತ ಸರ್ಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಗೂ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ೧೬೧ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ’ರಾಷ್ಟ್ರೀಯ ಯುವ ದಿನ’ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ರಾಷ್ಟ್ರದ ಯುವಜನತೆಗೆ ಮಾದರಿ ಶಕ್ತಿಯಾಗಿರುವ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ದೇಶದ್ಯಾಂತ ಆಚರಿಸಲಾಗುತ್ತಿದೆ. ದೇಶದ ಅಭಿವೃದ್ಧಿಗಾಗಿ ಯುವಶಕ್ತಿಯ ಸೇವಾ ಮನೋಭಾವ, ಗುಣಶ್ರೇಷ್ಠತೆ, ತ್ಯಾಗ, ಏಕಾಗ್ರತೆ ಹೇಗಿರಬೇಕು ಎಂದು ತಮ್ಮ ಸಂದೇಶಗಳ ಮೂಲಕ ಸಾರಿದ ವಿವೇಕಾನಂದರು ಯುವಕರನ್ನು ಅಜ್ಞಾನದಿಂದ ಸುಜ್ಞಾನದೆಡೆಗೆ ನಡೆಸಿದರು. ದೇಶದಲ್ಲಿನ ಬಡತನ, ಜಾತೀಯತೆಯಿಂದ ಭಾರತೀಯರನ್ನು ಕೇವಲವಾಗಿ ನೋಡುತ್ತಿದ್ದ ವಿದೇಶಿಯರಿಗೆ ಚಿಕಾಗೋ ವಿಶ್ವಸಮ್ಮೇಳನದಲ್ಲಿ ಸಹೋದರ, ಸಹೋದರಿಯರೇ ಎಂದು ಮಾನವತೆಯ ದಿವ್ಯಸಂದೇಶದ ಮೂಲಕ ಉಪನ್ಯಾಸ ಆರಂಭಿಸಿದ ವಿವೇಕಾನಂದರು ಇಡೀ ಜಗತ್ತು ಅಭಿಮಾನ, ಆತ್ಮವಿಶ್ವಾಸದಿಂದ ಭಾರತದತ್ತ ನೋಡುವಂತೆ ಮಾಡಿದರು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ದೇಶದ ಆಧುನಿಕ ಚಿಂತಕ, ತತ್ವಜ್ಞಾನಿ, ದಾರ್ಶನಿಕರಾಗಿದ್ದಾರೆ. ಅವರ ಆದರ್ಶ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಜಿ. ಬಂಗಾರು ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕದ ಮಹದೇವಪ್ರಸಾದ್ ಇದ್ದರು. ಶಿವಶಂಕರರಾಜೇ ಅರಸ್ ಅವರು ಏಡ್ಸ್ ನಿಯಂತ್ರಣದ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಿದರು. ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಬಿ.ಎಡ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.