ದೇಶ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ಗಾಯತ್ರಿ

| Published : Apr 01 2024, 12:55 AM IST / Updated: Apr 01 2024, 10:15 AM IST

ಸಾರಾಂಶ

ಹೆಣ್ಣು ಎಂದರೆ ಅಬಲೆಯಲ್ಲ, ಸಬಲೆ ಎಂಬುದನ್ನು ಈ ಚುನಾವಣೆಯಲ್ಲಿ ಸಾಧಿಸಿ ತೋರಿಸುತ್ತೇವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಜಗಳೂರು ಪ್ರಚಾರದಲ್ಲಿ ಮನವಿ ಮಾಡಿದರು.

 ಜಗಳೂರು :  ಹೆಣ್ಣು ಎಂದರೆ ಅಬಲೆಯಲ್ಲ, ಸಬಲೆ ಎಂಬುದನ್ನು ಈ ಚುನಾವಣೆಯಲ್ಲಿ ಸಾಧಿಸಿ ತೋರಿಸುತ್ತೇವೆ. ನಮಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆಯಾಗಿವೆ. ದೇಶದ ಅಭಿವೃದ್ಧಿಪಡಿಸಲು ಬಿಜೆಪಿಗೆ ಮತ ನೀಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಮನವಿ ಮಾಡಿದರು.

ಪಟ್ಟಣದಲ್ಲಿ ಭಾನುವಾರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಿಜೆಪಿ ಕಚೇರಿ ಉದ್ಘಾಟಿಸಿ, ಅನಂತರ ತಾಲೂಕಿನ ಮಾದಮುತ್ತೇನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ಹೆಣ್ಣಿನ ಬಗ್ಗೆ ಅಗೌರವ ಸಲ್ಲ:

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿ ಬಿಜೆಪಿ ಹೈಕಮಾಂಡ್ ಮಹಿಳಾ ಮೀಸಲಾತಿಯಲ್ಲಿ ಟಿಕೆಟ್ ಕೊಟ್ಟಿರುವುದು ನಮ್ಮ ಸೌಭಾಗ್ಯವಾಗಿದೆ. ಹೆಣ್ಣು ಕೂಡ ಪುರುಷರಷ್ಟೇ ಸರಿಸಮಾನವಾಗಿ ಕೆಲಸ ಮಾಡುತ್ತಾಳೆ. ಪ್ರತಿ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾಳೆ. ಹಿರಿಯರು, ಶಾಸಕ ಶಾಮನೂರು ಶಿವಶಂಕರಪ್ಪ ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡಿ ಅಗೌರವ ತೋರುವುದು ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಕೂಡ ಹೆಣ್ಣು ಎಂಬುವುದು ಗಮನದಲ್ಲಿ ಇಟ್ಟುಕೊಂಡು ಮಾತನಾಡಬೇಕು ಎಂದು ಕಿಡಿಕಾರಿದರು.

ಅಭಿವೃದ್ಧಿ ಭರವಸೆ:

ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ ಸರ್ಕಾರ 1 ವರ್ಷಕ್ಕೆ ಒಬ್ಬ ರೈತನಿಗೆ ₹6000 ನೀಡುತ್ತಿದೆ. ಆದರೆ, ನಮ್ಮ ಸರ್ಕಾರ ಆಳ್ವಿಕೆಯಲ್ಲಿ ಇದ್ದಾಗ ನೀಡುತ್ತಿದ್ದ ₹4000 ಸೌಲಭ್ಯ ಸ್ಥಗಿತಗೊಳಿಸಿ, ರಾಜ್ಯ ಸರ್ಕಾರ ರೈತರನ್ನು ಮರೆತಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಸಂಸದೆಯಾದರೆ ಕ್ಷೇತ್ರದಲ್ಲಿ ಕೈಗಾರಿಕೋದ್ಯಮ, ಮಹಿಳೆಯರಿಗಾಗಿ ಗಾರ್ಮೆಂಟ್ಸ್, ಯುವಕರ ಸ್ವಉದ್ಯೋಗಕ್ಕೆ ಉತ್ತೇಜನ ನೀಡುವ ಮೂಲಕ ತಳ ಸಮುದಾಯಗಳ ಅಭಿವೃದ್ಧಿಗೆ ಟೊಂಕಕಟ್ಟಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

ಜೊಡೆತ್ತುಗಳಂತೆ ಕೆಲಸ:

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ನಾನು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಜೊಡೆತ್ತುಗಳಂತೆ ಕೆಲಸ ಮಾಡುತ್ತೇವೆ. ಇಬ್ಬರೂ ಶಾಸಕರಾಗಿದ್ದಾಗ ಗ್ರಾಮಕ್ಕೆ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಿದ್ದೇವೆ. ಸಂಸದ ಸಿದ್ದೇಶ್ವರ್ ನಾಲ್ಕು ಬಾರಿ ಸಂಸದರಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ದೂರವಾಣಿ ಕರೆ ಮಾಡಿದರೆ ಕೆಲಸಗಳಾಗುತ್ತವೆ. ಆದರೆ, ವಿಪಕ್ಷದ ಸಚಿವರು, ಶಾಸಕರು ದೂರವಾಣಿ ಕರೆ ಮಾಡುವುದು ಕಷ್ಟ. ಅವರಿಂದ ಏನನ್ನು ನಿರೀಕ್ಷಿಸು ಸಾಧ್ಯವಿಲ್ಲ ಎಂದರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಸಂಸದರು ಹಲವಾರು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಭದ್ರಾ ಮೇಲ್ಡಂಡೆ ನೀರಾವರಿ ಯೋಜನೆ ಮತ್ತು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ನಾನೂರು ಪ್ಲಸ್ ಎಂದು ಹೇಳುತ್ತಿದ್ದಾರೆ. ಹಾಗಾಗಿ, ನಾವು ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸಿ, ದೆಹಲಿಗೆ ಕಳುಹಿಸಬೇಕಾಗಿದೆ ಎಂದು ಹೇಳಿದರು.

ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಕೆ.ಬಿ. ಕಲ್ಲೇರುದ್ರೇಶ್ ಮಾತನಾಡಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಜೆಡಿಎಸ್ ಬೆಂಬಲ ನೀಡಿದೆ. ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರನ್ನು ಅತ್ಯಧಿಕ ಮತಗಳಿಂದ ಆರಿಸಿ ಕಳಿಸಬೇಕೇಂದು ಅವರು ಮನವಿ ಮಾಡಿದರು.

ಅದ್ಧೂರಿ ಸ್ವಾಗತ:  ಅಣಬೂರು ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ತೊರೆದು ಹಲವಾರು ಮುಖಂಡರು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ , ಮಾಜಿ ಶಾಸಕರಾದ ಎಸ್.ವಿ.ಆರ್., ಎಚ್.ಪಿ.ಆರ್. ನೇತೃತ್ವದಲ್ಲಿ ಬಿಜೆಪಿ ಸೇರಿದರು. ಅಣಬೂರು ಗ್ರಾಮಕ್ಕೆ ಆಗಮಿಸುತ್ತಿದ್ದ ಬಿಜೆಪಿ ಅಭ್ಯರ್ಥಿಯನ್ನು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕಲ್ಲೇರುದ್ರೇಶ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿ, ಬರಮಾಡಿಕೊಂಡರು.

ತಾಲೂಕಿನ ಅಣಬೂರು, ಹನುಮಂತಪುರ, ಹಿರೇಮಲ್ಲನಹೊಳೆ, ಮುಸ್ಟೂರು ಕಲ್ಲೇದೇವರಪುರ, ತೊರಣಗಟ್ಟೆ, ಬಿದರಕೆರೆ, ಗ್ರಾಮ ಪಂಚಾಯಿತಿಗಳಲ್ಲಿ ಪ್ರಚಾರ ಸಭೆ ನಡೆಸಿದರು. ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಬಿಜೆಪಿ ಮುಖಂಡರಾದ ಜಿ.ಎಂ.ಎಸ್. ಅನಿತ್‌ಕುಮಾರ್, ಮಾಜಿ ಗ್ರಾಪಂ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ, ಎಲ್.ಬಿ. ಬೈರೇಶ್, ದ್ಯಾಮೇಗೌಡ, ಸವಿತಾ, ಶಾಂತಕುಮಾರಿ, ಮಂಜುನಾಥ್, ಗಡಿ ಮಾಕುಂಟೆ ಸಿದ್ದೇಶ್, ಎನ್.ಎಸ್. ರಾಜು, ತಿಪ್ಪೇಸ್ವಾಮಿ, ಜೆ.ವಿ. ನಾಗರಾಜ್, ಬಾಬು, ರವಿಕುಮಾರ್, ನಿಜಲಿಂಗಪ್ಪ, ಕಾನನಕಟ್ಟೆ ತಿಪ್ಪೇಸ್ವಾಮಿ, ಕುಬೇಂದ್ರಪ್ಪ, ಓಬಳೇಶ್, ಡಿ.ವಿ.ನಾಗಪ್ಪ ಮತ್ತಿತರರು ಹಾಜರಿದ್ದರು.