ಮಹಿಳೆಯರ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ನೀಡಿ: ಶಾಸಕ ಕೆ.ಎಂ.ಶಿವಲಿಂಗೇಗೌಡ

| Published : Apr 04 2024, 01:09 AM IST / Updated: Apr 04 2024, 09:15 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.  

 ಅರಸೀಕೆರೆ :  ಮಹಿಳೆಯ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ತಾಲೂಕಿನ ಕಣಕಟ್ಟೆ ಹೋಬಳಿಯ ಬೊಮ್ಮಸಮುದ್ರ ಗ್ರಾಮದಲ್ಲಿರುವ ಬೊಮ್ಮಲಿಂಗೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, ಅಕ್ಕಿ, ೨ ಸಾವಿರ ರು. ಹಣ ಸೇರಿದಂತೆ ಯುವನಿಧಿ ಮೂಲಕ ವಿದ್ಯಾವಂತರಿಗೆ ಹಣ ನೀಡುವ ಮೂಲಕ ಬಡ ಜನರಿಗೆ ಸರ್ಕಾರ ಸ್ಪಂದಿಸಿದೆ. ಇದನ್ನು ಜನರು ಲೋಕಸಭಾ ಚುನಾವಣೆಯಲ್ಲಿ ಮರೆಯದೇ ತಪ್ಪದೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಹೇಳಿದರು.

‘ನಮ್ಮಲ್ಲಿ ಬಲವಾದ ಸೈನ್ಯ ಪಡೆ ಇದೆ. ಎಲ್ಲರೂ ಶ್ರಮಿಸಿದರೆ ೩೦ ಸಾವಿರಕ್ಕೂ ಹೆಚ್ಚಿನ ಮತಗಳ ಮುನ್ನಡೆಯನ್ನು ಪಡೆಯಬಹುದು. ದೇವೇಗೌಡರು ನೀರು ನೀಡಲಿಲ್ಲ. ಮಾಜಿ ಪ್ರಧಾನಿ ದೇವೇಗೌಡರಿಗೆ ಕಣಕಟ್ಟೆ ಹೋಬಳಿಯ ಜನರು ನದಿ ಮೂಲದಿಂದ ನೀರನ್ನು ತರುವಂತೆ ಮನವಿ ಮಾಡಿದಾಗ ಇತಿಹಾಸದಲ್ಲಿ ಈ ಭಾಗಕ್ಕೆ ನೀರು ಬರುವುದಿಲ್ಲ ಎಂದಿದ್ದರು. ಆದರೆ ನಾನು ಹೋರಾಟ ಮಾಡಿದ ಫಲ ೧೫೦ ಕಿ.ಮೀ ದೂರದಿಂದ ನೀರನ್ನು ತಂದಿದ್ದೇನೆ. ಅಂತಹ ಕುಟುಂಬಕ್ಕೆ ಬುದ್ಧಿ ಕಲಿಸುವ ಕಾಲ ಬಂದಿದೆ. ಎಲ್ಲರೂ ಒಂದಾಗಿ ಕಾಂಗ್ರೆಸ್‌ಗೆ ಮತ ನೀಡಿ’ ಎಂದು ಹೇಳಿದರು.

ಬಿಜೆಪಿ ಬಡವರ ಪಕ್ಷ ಅಲ್ಲ, ಇವರ ಶ್ರೀಮಂತರನ್ನು ಇನ್ನಷ್ಟು ಅಭಿವೃದ್ದಿ ಪಡಿಸುವವರು, ಅದಾನಿಗಳ ಸಾಲವನ್ನು ಮನ್ನಾ ಮಾಡಿದ ಇವರಿಗೆ ರೈತರ ಸಾಲ ಮನ್ನಾ ಮಾಡುವ ಯೋಚನೆ ಇಲ್ಲ. ದೀನ ದಲಿತರ, ಬಡವರ, ರೈತ ಕುಟುಂಬ ಬಿಜೆಪಿ ಪಕ್ಷವನ್ನು ಧಿಕ್ಕರಿಸಬೇಕು ಎಂದರು.

ಯಡಿಯೂರಪ್ಪನವರಿಗೆ ಅಧಿಕಾರ ನೀಡದೇ ಕಣ್ಣೀರಾಕಿಸಿದ ಪಕ್ಷ ಜೆಡಿಎಸ್, ಇಂತಹ ಪಕ್ಷದೊಂದಿಗೆ ಹೊಂದಾಣಿಕೆಯಾಗಿರುವ ಬಿಜೆಪಿಗೆ ನಾಚಿಕೆಯಾಗಬೇಕು. ಜೀವಮಾನದಲ್ಲಿ ಕೋಮುವಾದಿ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದಿದ್ದ ದೇವೇಗೌಡರು ತಮ್ಮ ಕುಟುಂಬಕ್ಕಾಗಿ ಎಲ್ಲಾ ಜಾತ್ಯತೀತ ಸಿದ್ದಾಂತಗಳನ್ನು ಗಾಳಿಗೆ ತೂರಿದ್ದಾರೆ ಎಂದು ಮೂದಲಿಸಿದರು.

ಜಿಲ್ಲೆಯಲ್ಲಿ ಹೊಳೆನರಸೀಪುರಕ್ಕೆ ಮಾತ್ರ ಮಂತ್ರಿಗಿರಿ ಇದೆ ಎಂಬುದು ಬದಲಾಗಬೇಕಿದೆ. ಜಿಲ್ಲೆಯಲ್ಲಿ ಶ್ರಮಿಸುವ ಎಲ್ಲರಿಗೂ ಅಧಿಕಾರ ಹಂಚಿಗೆಯಾಗುವ ಕಾಲಕ್ಕೆ ಎಲ್ಲರೂ ಕೈ ಜೋಡಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದರು.

ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ‘ಜನರ ಆಶೀರ್ವಾದ ಪಡೆಯಲು ನಿಮ್ಮ ಮನೆಯ ಮಗನಾಗಿ ಬಂದಿದ್ದೇನೆ. ದೇವೇಗೌಡರ ಕುಟುಂಬದಿಂದ ನಾವು ನೊಂದಿದ್ದೇವೆ. ರಾಜಕಾರಣದಲ್ಲಿ ನಮಗೆ ದುಡಿಯುವ ಆಸಕ್ತಿ ಇದೆ. ಇಂದಿನ ಸಂಸದರು ಮಾಡಿರುವುದಾದರೂ ಏನನ್ನು ಗೆದ್ದ ನಂತರ ಕ್ಷೇತ್ರವನ್ನು ತಿರುಗಿ ನೋಡದ ಇವರು ಒಂದು ಮತ ಕೇಳಲು ಬಂದಿದ್ದಾರೆ. ಅವರಿಗೆ ಜನರು ಪಾಠ ಕಲಿಸುವ ಕಾಲ ಸನಿಹವಾಗಿದೆ’ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಒಂದು ಕುಟುಂಬಕ್ಕೆ ವರ್ಷಕ್ಕೆ ೧ ಲಕ್ಷ ರು. ನೀಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿದ್ದಾರೆ ಎಂದರು.

ಮುಖಂಡರಾದ ಜಿ.ಬಿ. ಶಶಿಧರ್, ಬಿಳಿಚೌಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು, ಧರ್ಮಶೇಖರ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ವೆಂಕಟೇಶ್, ಮಾಡಾಳು ಸ್ವಾಮಿ, ನಗರಸಭೆ ಸದಸ್ಯ ವೆಂಕಟಮುನಿ, ಮಂಜುಳಬಾಯಿ, ಸುಲೋಚನಾಬಾಯಿ, ಪುರ‍್ಲೇಹಳ್ಳಿ ಜಯಣ್ಣ, ಸಿ.ಸಿ. ಮಹೇಶ್ವರಪ್ಪ, ನಾಗರಾಜು, ಭೈರೇಶ್, ಪಾಪಣ್ಣಿ, ಹಾಸನ ರಸ್ತೆಯ ಮಂಜ, ಬಾಲಮುರುಗನ್, ಅಣ್ಣಾದೊರೈ ಇದ್ದರು.

ಲೋಕಸಭಾ ಚುನಾವಣೆಯ ಚುನಾವಣಾ ಪ್ರಚಾರಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಗಣ್ಯರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.