ಪ್ರಧಾನ ಮಂತ್ರಿಗಲ್ಲ, ಇಲ್ಲಿ ಕೆಲಸ ಮಾಡುವವರಿಗೆ ಮತ ನೀಡಿ: ಜಯಪ್ರಕಾಶ್ ಹೆಗ್ಡೆ

| Published : Apr 06 2024, 12:47 AM IST

ಪ್ರಧಾನ ಮಂತ್ರಿಗಲ್ಲ, ಇಲ್ಲಿ ಕೆಲಸ ಮಾಡುವವರಿಗೆ ಮತ ನೀಡಿ: ಜಯಪ್ರಕಾಶ್ ಹೆಗ್ಡೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಪು ಕ್ಷೇತ್ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಡೆಯಿತು. ಸಬೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಶಾಸಕ, ಸಚಿವ, ಸಂಸದನಾಗಿ ಅನೇಕ ಹುದ್ದೆಗಳಲ್ಲಿ, ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಈ ಬಾರಿ ನನ್ನ ಜನಪರ ಕೆಲಸಕ್ಕೆ ಮತ ನೀಡಿ, ಮತ್ತೊಮ್ಮೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಲು ಒಗ್ಗಟ್ಟಿನಿಂದ ಪ್ರಯತ್ನಿಸಬೇಕಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ಮನವಿ ಮಾಡಿದರು.

ಅವರು ಕಾಪು ಕ್ಷೇತ್ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಕಾರ್ಯಕರ್ತರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.

ಸಂಸದರಾಗಿ ಏನೂ ಕೆಲಸವನ್ನು ಮಾಡದೇ ನಾಯಕನ ಹೆಸರಲ್ಲಿ ಮತ ಕೇಳಿದವರು ಮತ್ತೆ ಬರುವುದು 5 ವರ್ಷಗಳ ಬಳಿಕ. ಆದರೆ ನನಗೆ ಮತವನ್ನು ನೀಡಿದರೆ, ನಾನು ಕೆಲಸ ಮಾಡಲೇಬೇಕಾಗುತ್ತದೆ. ನಾಯಕನಿಗೆ ಮತವನ್ನು ಪಡೆದು ಗೆದ್ದವರು ದೆಹಲಿಯಲ್ಲಿ ಕಾಲಕಳೆಯುತ್ತಾರೆ. ಒಂದು ಒಳ್ಳೆಯ ಸರ್ಕಾರ ಬೇಕು, ಅದರೊಂದಿಗೆ ಪ್ರಬಲವಾದ ಪ್ರತಿಪಕ್ಷವೂ ಬೇಕಾಗುತ್ತದೆ. ಅದಕ್ಕಾಗಿ ಒಳ್ಳೆಯ ಸಂಸದನನ್ನು ಆರಿಸಿ ಕಳುಹಿಸಬೇಕು. ನಾವು ಮತವನ್ನು ನೀಡುವುದು ಪ್ರಧಾನ ಮಂತ್ರಿಗಳ ಬದಲಾಗಿ ಇಲ್ಲಿ ಕೆಲಸ ಮಾಡುವ ಅಭ್ಯರ್ಥಿಗೆ ಎನ್ನುವುದು ಮತದಾರರು ಅರಿಯಬೇಕು ಎಂದರು.

ಜನರಿಗೆ ಸೌಲಭ್ಯಗಳು ಹತ್ತಿರದಲ್ಲೇ ಸಿಗಬೇಕು ಎನ್ನುವ ಉದ್ದೇಶದಿಂದ ನಾನು ಮಂತ್ರಿಯಾಗಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿಯನ್ನು ಪ್ರತ್ಯೇಕಿಸಿ ಜಿಲ್ಲೆಯನ್ನು ಮಾಡಲಾಗಿತ್ತು. ಇದರಿಂದಾಗಿ ಉಡುಪಿ ಜಿಲ್ಲೆ ಇಷ್ಟೊಂದು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು ಎಂದರು.

ತಾನು ಸಂಸದನಾಗಿದ್ದಾಗ ಅನುಮೋದನೆಗೊಂಡ ರಾಷ್ಟ್ರೀಯ ಹೆದ್ದಾರಿ ಯೋಜನೆ, ನಂತರ 10 ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ರೈತರ ಸಮಸ್ಯೆಗಳಿಗೂ ಸ್ಪಂದನೆ ಇಲ್ಲದೇ ಅವರೂ ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ ಹೀಗೆ ಅನೇಕ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಅದರ ಪರಿಹಾರಕ್ಕಾಗಿ ಹೋರಾಟ ಅನಿವಾರ್ಯವಾಗಿದೆ, ಈ ನಿಟ್ಟಿನಲ್ಲಿ ನನಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಕೇಂದ್ರ ಸರ್ಕಾರಿಂದ ರಾಜ್ಯಕ್ಕೆ ಅನುದಾನ ತರುವಲ್ಲಿ ಬಿಜೆಪಿಯ ಸಂಸದರು ಸಂಪೂರ್ಣ ವಿಫಲರಾಗಿದ್ದು, ಕೆಂದ್ರ ಸರ್ಕಾರದ ಜನವಿರೋಧಿ ನೀತಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಬೆಲೆ ಏರಿಕೆ, ಸುಳ್ಳು ಭರವಸೆಗಳು, ಚುನಾವಣಾ ಬಾಂಡ್‌ನಂತಹ ಭ್ರಷ್ಟಾಚಾರ ಕೇಂದ್ರದ ಸಾಧನೆಗಳಾಗಿವೆ. ಕೇವಲ ಸುಳ್ಳು ಹೇಳಿಕೊಂಡು ಜನರನ್ನು ಮರುಳು ಮಾಡುವ ಬಿಜೆಪಿಯನ್ನು ತಿರಸ್ಕರಿಸಿ ಸಜ್ಜನ ಹಾಗೂ ಸಂಸತ್ತಿನಲ್ಲಿ ಕ್ಷೇತ್ರಕ್ಕೆ ಉತ್ತಮ ದನಿಯಾಗಬಲ್ಲ ಜಯಪ್ರಕಾಶ್ ಹೆಗ್ಡೆಯವರನ್ನು ಗೆಲ್ಲಿಸಬೇಕಾಗಿದೆ ಎಂದರು.

ಕಾಪು ವಿಧಾನಸಭಾ ಕ್ಷೇತ್ರದ ಹೆಜಮಾಡಿ, ಪಡುಬಿದ್ರೆ, ಪಲಿಮಾರು, ಏರ್ಮಾಳ್, ಉಚ್ಚಿಲ, ಎಲ್ಲೂರು, ಮುದರಂಗಡಿ, ಶಿರ್ವ, ಕಳತ್ತೂರು, ಕುತ್ಯಾರು, ಮಜೂರಿನಲ್ಲಿ ಜಯಪ್ರಕಾಶ್ ಹೆಗ್ಡೆ ಕಾರ್ಯಕರ್ತರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ ನಾಯಕರಾದ ಅಡ್ವೆ ನವೀನ್ ಚಂದ್ರ ಸುವರ್ಣ, ಯಶ್ವಂತ್ ಕುಕ್ಯಾನ್, ಸುನೀಲ್ ಬಂಗೇರ, ಸುಕುಮಾರ್ ಪಡುಬಿದ್ರೆ, ನವೀನ್ ಚಂದ್ರ ಶೆಟ್ಟಿ, ಕರುಣಾಕರ ಪೂಜಾರಿ, ದಿವಾಕರ್ ಶೆಟ್ಟಿ, ರಮೀಝ್ ಹುಸೈನ್, ಸುಧೀರ್ ಕರ್ಕೇರ, ಪ್ರಶಾಂತ್ ಜತ್ತನ್ನ, ಮೆಲ್ವಿನ್ ಡಿಸೋಜ, ಗುಲಾಮ್ ಮೊಹಮ್ಮದ್, ಅಝೀಜ್ ಹಾಗೂ ಪಕ್ಷದ ವಿವಿಧ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.