ದೇಶದ ಭವಿಷ್ಯಕ್ಕಾಗಿ ಮೋದಿಗೆ ಮತ ನೀಡಿ: ಕೋಟ

| Published : Apr 25 2024, 01:04 AM IST

ಸಾರಾಂಶ

ಹಿಂದಿನ 10 ವರ್ಷಗಳಲ್ಲಿ ಭಾರತ ಹೇಗಿತ್ತು, ನಂತರದ 10 ವರ್ಷಗಳಲ್ಲಿ ದೇಶದಲ್ಲಿ ಏನೇನೂ ಬದಲಾವಣೆಗಳಾಗಿವೆ ಎಂಬುದನ್ನು ಮತದಾರರು ಅರ್ಥ ಮಾಡಿಕೊಂಡು, ಈ ಅಭಿವೃದ್ಧಿ ಮುಂದುವರಿಸಲು ಬಿಜೆಪಿಗೆ ಮತ ನೀಡಬೇಕು ಎಂದು ಕೋಟ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಈ ಲೋಕಸಭಾ ಚುನಾವಣೆ ಗ್ರಾ.ಪಂ. ಚುನಾವಣೆಯಂತಲ್ಲ, ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದೆ. ಸಮರ್ಥ, ಸಮೃದ್ಧ, ಸುಭದ್ರ ಭಾರತ ನಿರ್ಮಾಣ ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಆದ್ದರಿಂದ ದೇಶದ ಭವಿಷ್ಯಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮತ ನೀಡಿ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು.

ಅವರು ಬುಧವಾರ ಸಂಜೆ ನರ್ಮ್ ಬಸ್ ನಿಲ್ದಾಣದಲ್ಲಿ ತಮ್ಮ ಚುನಾವಣಾ ಪ್ರಚಾರದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.

ಹಿಂದಿನ 10 ವರ್ಷಗಳಲ್ಲಿ ಭಾರತ ಹೇಗಿತ್ತು, ನಂತರದ 10 ವರ್ಷಗಳಲ್ಲಿ ದೇಶದಲ್ಲಿ ಏನೇನೂ ಬದಲಾವಣೆಗಳಾಗಿವೆ ಎಂಬುದನ್ನು ಮತದಾರರು ಅರ್ಥ ಮಾಡಿಕೊಂಡು, ಈ ಅಭಿವೃದ್ಧಿ ಮುಂದುವರಿಸಲು ಬಿಜೆಪಿಗೆ ಮತ ನೀಡಬೇಕು ಎಂದರು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಗೆಲ್ಲುವುದು ಶತಸಿದ್ಧ. ಆದರೆ ದಾಖಲೆ ಅಂತರದಲ್ಲಿ ಜನರು ಗೆಲ್ಲಿಸಬೇಕು ಎಂದರು.

ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಕಾಂಗ್ರೆಸ್‌ಗೆ ಸೋಲುವುದು ಖಚಿತವಾಗಿದೆ. ಅದಕ್ಕೆ ಜಾಹೀರಾತುಗಳ ಮೂಲಕ ಬಿಜೆಪಿ ಬಗ್ಗೆ ಅಪಪ್ರಚಾರ ನಡೆಸುತ್ತಿದೆ ಎಂದರು.

ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದರು.

ಇದಕ್ಕೆ ಮೊದಲು ಜೋಡುಕಟ್ಟೆಯಿಂದ ಕೋರ್ಟ್ ರಸ್ತೆ, ಡಯನಾ ವೃತ್ತ, ಕವಿ ಮದ್ದಣ ಮಾರ್ಗ, ಕ್ಲಾಕ್ ಟವರ್ ಮೂಲಕ ಸಿಟಿ ಬಸ್ ನಿಲ್ದಾಣದವರೆಗೆ ಅಬ್ಯರ್ಥಿ ಮತ್ತು ಇತರ ನಾಯಕರು ಪಾದಯಾತ್ರೆ ನಡೆಸಿದರು. ಪಕ್ಷದ ನಾಯಕರಾದ ತಿಂಗಳೆ ವಿಕ್ರಮಾರ್ಜುವ ಹೆಗ್ಡೆ, ಸುಪ್ರಸಾದ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ದಿನಕರ ಬಾಬು, ರೇಷ್ಮಾ ಉದಯ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ದಿನೇಶ್ ಅಮೀನ್, ದಿನಕರ ಶೆಟ್ಟಿ ಹೆರ್ಗ, ಸಂಧ್ಯಾ ರಮೇಶ್, ವಿಜಯ ಕೊಡವೂರು, ರಾಜೇಶ್ ಕಾವೇರಿ, ಶಿಲ್ಪಾ ಸುವರ್ಣ ಮುಂತಾದವರು ಭಾಗವಹಿಸಿದ್ದರು.