ಮತಗಳ್ಳತನದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲ: ಸಚಿವ ಸಂತೋಷ್ ಲಾಡ್

| Published : Nov 12 2025, 01:45 AM IST

ಸಾರಾಂಶ

ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಈಗಾಗಲೇ ಹೋರಾಟ ಆರಂಭಿಸಿದೆ. ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ತೀವ್ರ ಕಟ್ಟೆಚರ ವಹಿಸಬೇಕು. ಜೊತೆಗೆ ಅಭಿಯಾನದ ಜನರಲ್ಲಿ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಕೇಂದ್ರದ ಬಿಜೆಪಿ ಸರ್ಕಾರ ಮತಗಳ್ಳತನ ನಡೆಸಿದ ಪ್ರಕರಣ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಂಗಳವಾರ ಹೇಳಿದರು.

ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕದಲೂರು ಗ್ರಾಮದ ಶಾಸಕ ಕೆ.ಎಂ.ಉದಯ್ ನಿವಾಸದಲ್ಲಿ ಸ್ಟಾಪ್ ವೋಟ್ ಚೂರಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಮತಪೆಟ್ಟಿಗೆಯಲ್ಲಿ ನಿಜವಾದ ಮತದಾರರ ಹೆಸರನ್ನು ತೆಗೆದು ಹಾಕುವ ಮೂಲಕ ನಕಲಿ ಹೆಸರನ್ನು ಸೇರಿಸಲು ಹುನ್ನಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಈಗಾಗಲೇ ಹೋರಾಟ ಆರಂಭಿಸಿದೆ. ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ತೀವ್ರ ಕಟ್ಟೆಚರ ವಹಿಸಬೇಕು. ಜೊತೆಗೆ ಅಭಿಯಾನದ ಜನರಲ್ಲಿ ಮತದಾನದ ಹಕ್ಕಿನ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಬೂತ್ ಮಟ್ಟದಲ್ಲಿ ಪ್ರತಿಯೊಬ್ಬ ಮತದಾರರು ಯಾವುದೇ ರೀತಿಯ ಅಕ್ರಮಗಳು ಕಂಡು ಬಂದರೆ ಚುನಾವಣಾ ಆಯೋಗ ಮತ್ತು ಪಕ್ಷದ ಮುಖಂಡರಿಗೆ ಮಾಹಿತಿ ನೀಡಬೇಕು ಎಂದರು.

ಇದೇ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸಹಕಾರ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಸಿ.ಚೆಲುವರಾಜು , ಪಿ.ಸಂದರ್ಶ, ಮನ್ಮುಲ ನಿರ್ದೇಶಕ ಹರೀಶ್ ಬಾಬು , ಕಾಂಗ್ರೆಸ್ ಯುವ ಘಟಕದ ಪದಾಧಿಕಾರಿಗಳು ಇದ್ದರು.ಕಾರ್ಮಿಕ ಭವನ, ವಸತಿ ಶಾಲೆ ನಿರ್ಮಾಣಕ್ಕೆ ಅಗತ್ಯ ಕ್ರಮ: ಸಂತೋಷ್ ಲಾಡ್

ಮದ್ದೂರು:

ವಿಧಾನ ಸಭಾ ಕ್ಷೇತ್ರದಲ್ಲಿ ಕಾರ್ಮಿಕ ಭವನ ನಿರ್ಮಾಣ ಮತ್ತು ವಸತಿ ಶಾಲೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಶಾಸಕರಿಂದ ಮನವಿ ಸ್ವೀಕರಿಸಿ ಕಾರ್ಮಿಕ ಭವನ ನಿರ್ಮಾಣ, ಹಾಲಿಇರುವ ಇಎಸ್ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ಹಾಗೂ ಕಾರ್ಮಿಕ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲ ವಾಗುವಂತೆ ವಸತಿ ಶಾಲೆ ಮಂಜೂರು ಮಾಡುವಂತೆ ಮನವಿ ಸಲ್ಲಿಸಿದರು.

ಶಾಸಕ ಉದಯ್ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಲಾಡ್ ಎಲ್ಲಾ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಲು ಯಾವುದೇ ಸರ್ಕಾರ ಅಥವಾ ಸಚಿವರಿಂದ ಸಾಧ್ಯವಿಲ್ಲ. ವಸತಿ ಶಾಲೆ ತೆರೆಯಲು ಅಗತ್ಯ ನಿವೇಶನವನ್ನು ಗೊತ್ತುಪಡಿಸಿದರೆ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಆಶ್ವಾಸನೆ ನೀಡಿದರು.