ರಾಜಾಜಿನಗರ, ಮಹದೇವಪುರದಲ್ಲಿ ಮತಗಳ್ಳತನ ಬಗ್ಗೆ ರಾಗಾ ಬಳಿ ಸಾಕ್ಷಿ

| N/A | Published : Aug 01 2025, 12:30 AM IST / Updated: Aug 01 2025, 05:27 AM IST

ರಾಜಾಜಿನಗರ, ಮಹದೇವಪುರದಲ್ಲಿ ಮತಗಳ್ಳತನ ಬಗ್ಗೆ ರಾಗಾ ಬಳಿ ಸಾಕ್ಷಿ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆ ವೇಳೆ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿರುವ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಳಿ ಸಾಕ್ಷಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.  

  ಬೆಂಗಳೂರು :  ಲೋಕಸಭೆ ಚುನಾವಣೆ ವೇಳೆ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ಆಗಿರುವ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಳಿ ಸಾಕ್ಷಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈವರೆಗೆ ಮಹದೇವಪುರದಲ್ಲಿ ಮತಗಳ್ಳತನವಾಗಿದೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದರು. ರಾಜಾಜಿನಗರದಲ್ಲೂ ಮತಗಳ್ಳತನವಾಗಿದೆ ಎಂದು ಸಿಎಂ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳ್ಳತನದ ಕುರಿತು ಪ್ರತಿಭಟನೆ ನಡೆಸಲು ಮತ್ತು ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಲು ರಾಹುಲ್ ಗಾಂಧಿ ಆ.5ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಅವರ ಬಳಿ ಮತಗಳ್ಳತನ ಬಗ್ಗೆ ಸಾಕ್ಷಿ ಇದೆ ಎಂದು ಹೇಳಿದರು. 

5ರಂದು ಬೆಂಗಳೂರಲ್ಲಿಕೈ ಬೃಹತ್‌ ಪ್ರತಿಭಟನೆ

ಬೆಂಗಳೂರು : ರಾಜ್ಯದಲ್ಲಿ ಲೋಕಸಭೆ ಚುನಾವಣೆ ವೇಳೆ ಚುನಾವಣಾ ಅಕ್ರಮ ಹಾಗೂ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಆ.5 ರಂದು ನಗರದ‌ ಸ್ವಾತಂತ್ರ್ಯ ಉದ್ಯಾನವನದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ಪಕ್ಷ ನಿರ್ಧಾರ ಮಾಡಿದೆ.

ಮತದಾರರ ಹಕ್ಕು, ಸಂವಿಧಾನ ರಕ್ಷಣೆ ಹಾಗೂ ಪ್ರಜಾಪ್ರಭುತ್ವ ಉಳುವಿಗಾಗಿ ಬೃತಹ್‌ ಹೋರಾಟ ನಡೆಸಲು ತೀರ್ಮಾನಿಸಲಾಗಿದ್ದು, ಈ ವೇಳೆ ಯಾವುದೇ ಪಾದಯಾತ್ರೆ ನಡೆಸುವುದಿಲ್ಲ. ಬದಲಿಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಬಳಿಕ ಐದಾರು ಮಂದಿ ಹಿರಿಯ ನಾಯಕರು ಚುನಾವಣಾ ಆಯೋಗದ ಕಚೇರಿಗೆ ಹೋಗಿ ಚುನಾವಣಾ ಅಕ್ರಮದ ವಿರುದ್ಧ ಕ್ರಮಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ಗುರುವಾರ ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಮ್ಮುಖದಲ್ಲಿ ಸಚಿವರು ಹಾಗೂ ಬೆಂಗಳೂರು ಕಂದಾಯ ವಿಭಾಗದ ಶಾಸಕರೊಂದಿಗೆ ಪ್ರತಿಭಟನೆ ಕುರಿತು ಪೂರ್ವಸಿದ್ಧತಾ ಸಭೆ ನಡೆಸಿದರು.

ಈ ವೇಳೆ ಬಿಜೆಪಿಯು ಚುನಾವಣಾ ಆಯೋಗವನ್ನು ಕೈಗೊಂಬೆ ಮಾಡಿಕೊಂಡು ದೇಶದೆಲ್ಲೆಡೆ ಚುನಾವಣೆಗಳನ್ನು ಗೆಲ್ಲಲು ಹೊರಟಿದೆ. ಇದರ ವಿರುದ್ಧ ಕರ್ನಾಟಕದ ನೆಲದಿಂದಲೇ ಹೋರಾಟ ಶುರು ಮಾಡಲು ನಿರ್ಧರಿಸಲಾಗಿದೆ. ಈ ಹೋರಾಟವನ್ನು ಯಶಸ್ವಿಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ರಾಜ್ಯದ ಎಲ್ಲಾ ಬ್ಲಾಕ್ ಗಳಿಂದ ಪ್ರತಿನಿಧಿಗಳು ಹಾಜರಿರಬೇಕು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸಚಿವರಿಗೆ ನಿರ್ದೇಶನ ನೀಡಿದರು ಎನ್ನಲಾಗಿದೆ.

ಲೋಪದೋಷ ಎತ್ತಿ ಹಿಡಿಯಲಿದ್ದಾರೆ-ಡಿಕೆಶಿ:

ಇದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕರ್ನಾಟಕದ ಭೂಮಿಯಿಂದಲೇ ಈ ಹೋರಾಟ ಪ್ರಾರಂಭ ಮಾಡಿದರೆ ಹೆಚ್ಚಿನ ಶಕ್ತಿ ದೊರೆಯುತ್ತದೆ ಎಂದು ರಾಹುಲ್ ಗಾಂಧಿಯವರು ಇಲ್ಲಿಂದ ಶುರು ಮಾಡುತ್ತಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಆದಂತಹ ಹಲವಾರು ಲೋಪದೋಷಗಳನ್ನು ನಮ್ಮ ನಾಯಕರು ಎತ್ತಿಹಿಡಿಯಲಿದ್ದಾರೆ. ನ್ಯಾಯಾಲಯದ ನಿರ್ದೇಶನದ ಅಡಿಯಲ್ಲೇ ಪ್ರತಿಭಟನೆ ನಡೆಸುತ್ತೇವೆ. ಈ ವೇಳೆ ಯಾವುದೇ ಪ್ರತಿಭಟನಾ ಮೆರವಣಿಗೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಆಕ್ಷೇಪಣೆಗೆ ಸ್ಪಂದಿಸಿರಲಿಲ್ಲ:

ಕರಡು ಮತದಾರರ‌ ಪಟ್ಟಿಯ ಬಗ್ಗೆ ಏಕೆ ಮೊದಲೇ ಆಕ್ಷೇಪಣೆ ಸಲ್ಲಿಸಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್‌, ನಾವು ಆಕ್ಷೇಪಣೆ ಸಲ್ಲಿಸಿದ್ದೆವು. ಆದರೆ ಚುನಾವಣಾ ಆಯೋಗ ಅದನ್ನು ಸ್ವೀಕರಿಸಲಿಲ್ಲ. ಮಹದೇವಪುರ ಕ್ಷೇತ್ರದಲ್ಲಿ ಅಭ್ಯರ್ಥಿ ನಾಗೇಶ್ ಅವರು ಹಾಗೂ ಅವರ ಪುತ್ರ ದಾಖಲೆಗಳನ್ನು ತೋರಿಸಿದರು. ದಿನೇಶ್ ಗುಂಡೂರಾವ್ ಕ್ಷೇತ್ರ ಗಾಂಧಿನಗರದಲ್ಲೂ ಇದೇ ರೀತಿ ನಡೆದಿದೆ. ಇಲ್ಲಿ ಒಂದು ವಾರ್ಡ್‌ನಲ್ಲಿ 7 ಸಾವಿರದಷ್ಟು ಮತದಾರರ ಸೇರ್ಪಡೆಯಾಗಿದೆ. ಇದರ ಬಗ್ಗೆ ಆಕ್ಷೇಪಣೆಯನ್ನು ಆಯೋಗವೇ ಸ್ವೀಕರಿಸಿರಲಿಲ್ಲ ಎಂದರು.

ಮನವಿ ನೀಡಲು ನಡಿಗೆ ಮೂಲಕ ಹೋಗುತ್ತೀರಾ? ಎಂದು ಕೇಳಿದಾಗ, ‘ನಾವು ಐದಾರು ಮಂದಿ ಚುನಾವಣಾ ಆಯೋಗಕ್ಕೆ ಹೋಗಿ ಮನವಿ ಪತ್ರ ನೀಡುತ್ತೇವೆ. ಪೊಲೀಸರು ವಾತಾವರಣ ನೋಡಿ ಯಾವ ಸಲಹೆ ನೀಡುತ್ತಾರೋ ಆ ರೀತಿ ಮಾಡುತ್ತೇವೆ. ನಡಿಗೆ ಮೂಲಕವಾದರೂ ಹೋಗಬಹುದು ಅಥವಾ ವಾಹನದಲ್ಲಿಯಾದರೂ ತೆರಳಬಹುದು’ ಎಂದು ಸ್ಪಷ್ಟಪಡಿಸಿದರು.

ದಾಖಲೆ ವಿಚಾರ ರಾಹುಲ್‌ ಬಹಿರಂಗಪಡಿಸ್ತಾರೆ: ಡಿಕೆಶಿ

ಚುನಾವಣಾ ಅಕ್ರಮದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೀರಾ ಎಂಬ ಪ್ರಶ್ನೆಗೆ, ಈ ವಿಚಾರವನ್ನು ರಾಹುಲ್ ಗಾಂಧಿ ಅವರು ತೀರ್ಮಾನ ಮಾಡಿ ಬಹಿರಂಗಪಡಿಸಿದ್ದಾರೆ. ನಾನು ಈ ವಿಚಾರವಾಗಿ ಏನು ಹೇಳುವುದಿಲ್ಲ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇನ್ನು ಚುನಾವಣೆ ಬಳಿಕ 45 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸದೆ ಕಾಂಗ್ರೆಸ್‌ನವರು ಏನು ಮಾಡುತ್ತಿದ್ದರು ಎಂದು ಬಿಜೆಪಿಯವರು ಪ್ರಶ್ನಿಸಿದ್ದಾರೆ. ನಾವು ಚುನಾವಣೆ ನಂತರ ಮಲಗಿರಲಿಲ್ಲ. ಪ್ರಮಾಣ ವಚನ ಸ್ವೀಕರಿಸಿ, ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟೆವು ಎಂದು ತಿರುಗೇಟು ನೀಡಿದರು.

ಪ್ರತಿಭಟನಾ ಸ್ಥಳ ಪರಿಶೀಲಿಸಿದ ಸುರ್ಜೇವಾಲಾ, ಶಿವಕುಮಾರ್‌

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಆ.5 ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ಸ್ವಾತಂತ್ರ್ಯ ಉದ್ಯಾನವನದ ಪ್ರತಿಭಟನಾ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಸೇರಿ ಹಲವು ನಾಯಕರು ಭಾಗವಹಿಸಿದ್ದರು.

Read more Articles on