ಆಮಿಷಕ್ಕೆ ಬಲಿಯಾಗದೆ, ನಿರ್ಭಯದಿಂದ ಮತ ಹಾಕಿ

| Published : Mar 23 2024, 01:00 AM IST / Updated: Mar 23 2024, 01:01 AM IST

ಸಾರಾಂಶ

ಮತದಾನ ಮಾಡುವುದು ನಮ್ಮ ನಿಮ್ಮೆಲ್ಲರ ಹಕ್ಕು. ಯಾರೂ ಸಹ ಮತದಾನದಿಂದ ವಂಚಿತರಾಗಬಾರದು. ತಪ್ಪದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು.ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ವರ್ಗದವರು ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು

ಕನ್ನಡ ಪ್ರಭ ವಾರ್ತೆ ಚಿಕ್ಕಬಳ್ಳಾಪುರ

2024ರ ಏಪ್ರಿಲ್ 26 ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನದಂದು ನಿರ್ಭಯವಾಗಿ, ಧರ್ಮ, ಜನಾಂಗ, ಜಾತಿ, ಮತ, ಭಾಷೆ, ಪ್ರಾದೇಶಿಕತೆ ಸೇರಿದಂತೆ ಯಾವುದೇ ಇತರೆ ಪ್ರೇರಣೆಗಳಿಗೆ, ಆಮಿಷಗಳಿಗೆ ಪ್ರಭಾವಿತರಾಗದೆ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು. ಶುಕ್ರವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ನಗರಸಭಾ ಕಾರ್ಯಾಲಯ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕು ಸ್ವೀಪ್ ಸಮಿತಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮತದಾನದ ಜಾಗೃತಿ ಕುರಿತ ಮೆರವಣಿಗೆಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.

ಮತದಾನ ಎಲ್ಲರ ಹಕ್ಕು

ಮತದಾನ ಮಾಡುವುದು ನಮ್ಮ ನಿಮ್ಮೆಲ್ಲರ ಹಕ್ಕು. ಯಾರೂ ಸಹ ಮತದಾನದಿಂದ ವಂಚಿತರಾಗಬಾರದು. ತಪ್ಪದೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು.ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ವರ್ಗದವರು ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಆ ದಿಸೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಇಂದು ಚಿಕ್ಕಬಳ್ಳಾಪುರ ನಗರದ ಮುಖ್ಯ ರಸ್ತೆಗಳಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ಸ್ವೀಪ್ ಸಮಿತಿಯು ವಿಶೇಷ ಚೇತನರ ಬೈಕ್ ರ್‍ಯಾಲಿ ಹಾಗೂ ಜಾಥಾದ ಮೂಲಕ ಅರಿವು ಮೂಡಿಸುತ್ತಿರುವುದು ಶ್ಲಾಘನೀಯವಾದುದು ಎಂದು ತಿಳಿಸಿದರು.ಅಭ್ಯರ್ಥಿಗಳ ಹಾಗೂ ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗದೆ, ನಿರ್ಭೀತಿಯಿಂದ ಮತದಾನ ಮಾಡುವ ಮನೋಬಲವನ್ನು ಮತದಾರರು ಬೆಳೆಸಿಕೊಳ್ಳಬೇಕು. ಮತದಾನ ನಮ್ಮ ಧ್ವನಿ, ನಮ್ಮ ಮತ, ನಮ್ಮ ಕರ್ತವ್ಯ ಎಂಬುದನ್ನು ಅರಿತುಕೊಂಡು ಹಕ್ಕನ್ನು ಚಲಾಯಿಸಿದಾಗ ಶಾಂತಿಯುತ ಚುನಾವಣೆ ಸಾಧ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಪ್ರಕಾಶ್.ಜಿ.ಟಿ.ನಿಟ್ಟಾಲಿ, ಎಸಿ ಡಿ.ಎಚ್.ಅಶ್ವಿನ್, ತಹಸಿಲ್ದಾರ್ ಅನಿಲ್, ಪೌರಾಯುಕ್ತ ಎ.ಎಸ್.ಮಂಜುನಾಥ್, ತಾಲ್ಲೂಕು ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಎಲ್.ಸಂದೀಪ್, ವಿಶೇಷ ಚೇತನರು, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ನಗರಸಭೆ ಸಿಬ್ಬಂದಿ, ತ್ತಿತರರು ಇದ್ದರು.