ಮನೆಯಲ್ಲಿ ಮತದಾನಕ್ಕೆ ಮತದಾರರ ನಿರಾಸಕ್ತಿ

| Published : Apr 26 2024, 12:53 AM IST

ಸಾರಾಂಶ

ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ೪೧೧೪ ವಿಶೇಷ ಚೇತನರು ಹಾಗೂ ೨೫೦೦ ಜನ ೮೫ ವರ್ಷ ಮೇಲ್ಪಟ್ಟ ವೃದ್ಧರು ಸೇರಿ ಸುಮಾರು ೬೬೧೪ ಜನರಿದ್ದು, ೩೨೩ ಜನರು ಅಂದರೆ ಶೇ.೫ರಷ್ಟು ಮಾತ್ರ ಜನರು ಮನೆಯಲ್ಲಿ ಮತದಾನಕ್ಕೆ ಒಪ್ಪಿಗೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಮನೆಯಲ್ಲಿಯೇ ಮತದಾನ ನಡೆಸಲು ಸರ್ಕಾರ ಯೋಜನೆ ರೂಪಿಸಿದೆ. ಆದರೆ, ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ೪೧೧೪ ವಿಶೇಷ ಚೇತನರು ಹಾಗೂ ೨೫೦೦ ಜನ ೮೫ ವರ್ಷ ಮೇಲ್ಪಟ್ಟ ವೃದ್ಧರು ಸೇರಿ ಸುಮಾರು ೬೬೧೪ ಜನರಿದ್ದು, ೩೨೩ ಜನರು ಅಂದರೆ ಶೇ.೫ರಷ್ಟು ಮಾತ್ರ ಜನರು ಮನೆಯಲ್ಲಿ ಮತದಾನಕ್ಕೆ ಒಪ್ಪಿರುವುದು ಗಮನೀಯ ಅಂಶ.

ಲೋಕಸಭೆ ಚುನಾವಣೆಗೆ ಏ.೨೬ ಮತ್ತು ೨೭ರಂದು ೮೫ ವರ್ಷ ಮೇಲ್ಪಟ್ಟ ವೃದ್ಧರು, ವಿಶೇಷಚೇತನರು ಹಾಗು ಕೋವಿಡ್-೧೯ ಶಂಕಿತ ಅಥವಾ ಬಾಧಿತ ವ್ಯಕ್ತಿಗಳು ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರ ಚುನಾವಣಾಧಿಕಾರಿ ಸಾಜಿದ್ ಮುಲ್ಲಾ ತಿಳಿಸಿದರು.

ತೇರದಾಳ ವಿಧಾನಸಭಾ ಮತಕ್ಷೇತ್ರದಲ್ಲಿ ೧೨ ಮಾರ್ಗ ಮಾಡಲಾಗಿದೆ. ಮತಗಟ್ಟೆ ಅಧಿಕಾರಿ, ಮೈಕ್ರೋ ಅಬ್ಜರ್ವರ್, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ಸೇರಿ ನೋಂದಾಯಿತ ಮತದಾರರ ಮನೆಗೆ ತೆರಳಿ ಮತದಾನ ಮಾಡಿಸಲಿದ್ದಾರೆ.

೮೫ ವರ್ಷ ಮೇಲ್ಪಟ್ಟವರು ೨೦೬ ಹಾಗೂ ವಿಶೇಷಚೇತನರು ೧೧೭ ಜನ ಮತದಾರರಿದ್ದು, ಸೀಮಿತ ಮತದಾರರು ಅಂದಿನ ದಿನ ಮನೆಯಲ್ಲಿಯೇ ಇರುವಂತೆ ಮನವಿ ಮಾಡಿದ್ದಾರೆ.

ಈ ಮತದಾರರು ನಿರ್ಲಕ್ಷ್ಯ ವಹಿಸಿ ಮತದಾನ ಮಾಡದಿದ್ದಲ್ಲಿ ಇಂಥವರಿಗೆ ಮತಗಟ್ಟೆಯಲ್ಲಿ ಮತದಾನಕ್ಕೆ ಅವಕಾಶವಿಲ್ಲ. ಕಡ್ಡಾಯ ಮತದಾನ ಮಾಡಲು ಸಮಯ ನಿಗದಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ತೇರದಾಳ ಕ್ಷೇತ್ರ ವ್ಯಾಪ್ತಿಯಲ್ಲಿ ಪುರುಷರು ೧.೧೭.೯೬೨, ಮಹಿಳೆಯರು ೧.೧೯.೪೭೨ ಒಟ್ಟು ೨.೩೭.೪೫೦ ಮತದಾರರಿದ್ದಾರೆ. ಈಗಾಗಲೇ ೩ ಚೆಕ್‌ಪೋಸ್ಟ್ ಸ್ತಾಪಿಸಲಾಗಿದೆ. ೧೧೨೮ ಚುನಾವಣೆ ಸಿಬ್ಬಂದಿಗಳಿಂದ ೨೩೬ ಮತಗಟ್ಟೆಗಳಲ್ಲಿ ಮತದಾನಕ್ಕೆ ಸಿದ್ಧತೆ ನಡೆಯುತ್ತಿದೆ. ಪಿಂಕ್, ವಿಶೇಷಚೇತನ, ಯುವ ಹಾಗೂ ಮಾದರಿ ಸೇರಿದಂತೆ ಒಟ್ಟು ೯ ವಿಶೇಷ ಮತಗಟ್ಟೆಗಳನ್ನಾಗಿ ನಿರ್ಮಿಸಿದೆ. ಇದರಲ್ಲಿ ೧೧೮ ಮತಗಟ್ಟೆಗಳಲ್ಲಿ ನೇರ ಪ್ರಸಾರ ನಡೆಯಲಿದ್ದು, ಇತರೆ ಮತಗಟ್ಟೆಗಳಲ್ಲಿ ವಿಡಿಯೋ ಹಾಗೂ ಮೈಕ್ರೋ ಆಬ್ಜರ್ವರ್ ಕಾರ್ಯ ನಿರ್ವಹಿಸಲಿದ್ದಾರೆಂದು ಸಾಜಿದ್ ಮುಲ್ಲಾ ಸ್ಪಷ್ಟಪಡಿಸಿದರು.