ಮುಕ್ತ ಮನಸ್ಸಿನಿಂದ ಮತ ಚಲಾಯಿಸದ ಮತದಾರರು

| Published : Apr 30 2024, 02:03 AM IST

ಸಾರಾಂಶ

ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ಸರಹದ್ದಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಕಹಿ ಘಟನೆಯಿಂದ ಇಡೀ ಗ್ರಾಮವೇ ಭಯದ ವಾತಾವರಣದಿಂದ ತತ್ತರಿಸಿ ಹೋಗಿದೆ.

ಜಿ. ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ಸರಹದ್ದಿನ ಇಂಡಿಗನತ್ತ ಗ್ರಾಮದಲ್ಲಿ ನಡೆದ ಕಹಿ ಘಟನೆಯಿಂದ ಇಡೀ ಗ್ರಾಮವೇ ಭಯದ ವಾತಾವರಣದಿಂದ ತತ್ತರಿಸಿ ಹೋಗಿದೆ.

ಜಿಲ್ಲಾಡಳಿತ ಮರು ಮತದಾನ ಮಾಡಿಸುವಲ್ಲಿ ಯಶಸ್ಸಿಯಾಗಿದೆ. ಆದರೆ, ಇಲ್ಲಿನ ಜನ ಮುಕ್ತ ಮನಸ್ಸಿನಿಂದ ಬಂದು ಮತ ಚಲಾಯಿಸಿಲ್ಲ. ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ಭರವಗಳು ಇನ್ನೂ ಬಾಕಿ ಇವೆ. ಕುಗ್ರಾಮ ಇಂಡಿಗನತ್ತ ಗ್ರಾಮದಲ್ಲಿ ಏ.26ರಂದು ನಡೆದ ಗಲಭೆಗೆ ಮೂಲ ಸೌಲಭ್ಯ ಮತ್ತು ನಿರುದ್ಯೋಗ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದರು. ಮೆಂದಾರೆ ಗ್ರಾಮದ ಆದಿವಾಸಿ ಜನಾಂಗದವರನ್ನು ಇಂಡಿಗನತ್ತ ಗ್ರಾಮಕ್ಕೆಮತದಾನ ಮಾಡುವಂತೆ ಪೊಲೀಸ್ ಅಧಿಕಾರಿಯೊಬ್ಬರು ಪ್ರೇರೇಪಿಸಿ ಕರೆತಂದಿದ್ದೇ ಘಟನೆಗೆ ಕಾರಣವೆನ್ನಲಾಗಿದೆ.

ಭಯದ ವಾತಾವರಣ: ಇಂಡಿಗನತ್ತ ಗ್ರಾಮದಲ್ಲಿ ಸೋಮವಾರ ಮರುಮತದಾನಕ್ಕೆ ಚುನಾವಣೆ ಅಧಿಕಾರಿಗಳು ಆದೇಶ ನೀಡಿದ ಹಿನ್ನೆಲೆ ಗ್ರಾಮದಲ್ಲಿ ಜನರಿಗಿಂತ ಎಲ್ಲಿ ನೋಡಿದರೂ ಪೊಲೀಸರೇ ಹೆಚ್ಚಾಗಿದ್ದರು. ಇಲ್ಲಿನ ಜನತೆ ಮತದಾನ ಮಾಡಬೇಕೆ ಇಲ್ಲವೋ ಎಂಬ ಗೊಂದಲ ಹಾಗೂ ಭಯದ ವಾತಾವರಣ ಕಂಡುಬಂದಿತು. ಇಂಡಿಗನತ್ತ ಗ್ರಾಮದ ಹಿರಿಯ ಮುಖಂಡ ಪುಟ್ಟ ತಂಬಡಿ ಅವರು ಮರುಮತದಾನದಲ್ಲಿ ಭಾಗವಹಿಸಿ ಮಾತನಾಡಿ, ಚುನಾವಣೆ ಮುನ್ನ ಎರಡು ಗ್ರಾಮಗಳ ಮುಖಂಡರು ಸೇರಿ ತೀರ್ಮಾನಿಸಿದಂತೆ ಮತದಾನ ಬಹಿಷ್ಕರಿಸಲಾಗಿತ್ತು. ಇದನ್ನು ಉಲ್ಲಂಘಿಸಿ ಏ.26ರಂದು ಮೆಂದರೆ ಗ್ರಾಮದ ಕೆಲವರು ಮತದಾನ ಮಾಡಿದ್ದರಿಂದ ಗ್ರಾಮದಲ್ಲಿದ್ದ ಕೆಲವು ಯುವಕರು ಪ್ರಶ್ನೆ ಮಾಡಲಾಗಿ ವಿಕೋಪಕ್ಕೆ ತಿರುಗಿ ಘಟನೆ ಜರುಗಿದೆ. ನನಗೆ ಹುಷಾರಿಲ್ಲದ ಕಾರಣ ನಾನು ಮನೆಯಲ್ಲಿ ಇದ್ದೆ ಮತ್ತೊಂದೆಡೆ ನಿರುದ್ಯೋಗದಿಂದ ಬೇಸತ್ತಿದ್ದ ಯುವಕರಿಗೆ ಅರಣ್ಯ ಇಲಾಖೆ ಕಿರುಕುಳ ಜೊತೆಗೆ ಜೀಪ್‌ ಚಾಲಕರ ದಿನಗೂಲಿಗೆ ಕಡಿವಾಣ ಹಾಕಿರುವುದೇ ಇಂತಹ ಘಟನೆಗೆ ಕಾರಣವಾಗಿದೆ ಎಂದು ತಿಳಿಸಿದರು. ಘಟನೆಯ ಬಗ್ಗೆ ತಿಳಿದಿಲ್ಲ:

ಇಂಡಿಗನತ್ತ ಗ್ರಾಮದ ಮಹಿಳೆ ದುಂಡಮ್ಮ ಮಾತನಾಡಿ, ಯಾವುದೇ ಸೌಲಭ್ಯ ನೀಡದೆ ಗ್ರಾಮದಲ್ಲಿ ಮತದಾನ ಮಾಡುವಂತೆ ಹೇಳಿದ್ದಾರೆ. ಅಧಿಕಾರಿಗಳು ಮೊದಲು ಸೌಲಭ್ಯ ನೀಡಿ ಮತದಾನ ಮಾಡು ಎನ್ನಬೇಕು. ತುಂಬಾ ಭಯದ ವಾತಾವರಣದಲ್ಲಿ ಇದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು, ಸರ್ಕಾರ ನಮಗೆ ನೆರವಾಗಿ ಎಂದರು. ಇಲ್ಲಿನ ಜನರು ನೂರಾರು ವರ್ಷಗಳಿಂದ ಮೂಲ ಸೌಲಭ್ಯ ಕಲ್ಪಿಸುವಂತೆ ಸರ್ಕಾರ, ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ. ಮಾದೇಶ್ವರ ಬೆಟ್ಟ ಹಳೆಯೂರು ಗ್ರಾಮದಲ್ಲಿ ಮತಗಟ್ಟೆ ಇದ್ದ ಸಂದರ್ಭದಲ್ಲಿ ಅಲ್ಲಿಗೆ ಕಾಲ್ನಡಿಗೆಯಲ್ಲಿ ತೆರಳಿ ಮತದಾನ ಮಾಡಿದ್ದೇವೆ. ಆದರೆ ಇಲ್ಲಿನ ಜನತೆ ಏನು ತಿಳಿಯದವರಾಗಿದ್ದು, ಅವಿದ್ಯಾವಂತರು ಆಗಿರುವುದರಿಂದ ಇಲ್ಲಿ ಹೆಚ್ಚಾಗಿ ಆಕಾಶದ ಮಳೆ ಭೂಮಿಯ ಬೆಳೆ ನಂಬಿ ಬದುಕುತ್ತಿದ್ದಾರೆ. ಸೌಲಭ್ಯ ಕಲ್ಪಿಸದ ಕಾರಣ ಮತ ಬಹಿಷ್ಕಾರ ತೀರ್ಮಾನ ತೆಗೆದುಕೊಂಡಿದ್ದರು. ಇದಕ್ಕೆ ಭಂಗ ತಂದಿದ್ದರಿಂದ ಗಲಭೆಗೆ ಕಾರಣವಾಯಿತು. ಕಹಿ ಘಟನೆ ಮುಂದೆ ನಡೆಯದಂತೆ ಜಾಗೃತಿ ಮೂಡಿಸುವ ಜೊತೆಗೆ ಸೌಲಭ್ಯ ಕಲ್ಪಿಸಬೇಕು. ಅಮಾಯಕರಿಗೆ ತೊಂದರೆಯಾಗಬಾರದು

-ಶಿವಮೂರ್ತಿ, ಗ್ರಾಮಸ್ಥ

ಮನೆಗಳಿಗೆ ಬೀಗ: ಏ.26ರಂದು ನಡೆದ ಮತಗಟ್ಟೆ ದ್ವಂಸ ಪ್ರಕರಣದಿಂದ ಗ್ರಾಮದ 250ರಿಂದ 300ರ ಜನರ ಮೇಲೆ ಮೂರು ಪ್ರಕರಣಗಳು ದಾಖಲಾಗಿರುವುದರಿಂದ ಗ್ರಾಮದಲ್ಲಿ ಎಲ್ಲಿ ನೋಡಿದರೂ ಪೊಲೀಸರೇ ಇರುವುದರಿಂದ ಎಲ್ಲಿ ಬಂಧಿಸುತ್ತಾರೋ ಎಂಬ ಭೀತಿಯಿಂದ ತಮ್ಮ ಹೆಂಡತಿ ಮಕ್ಕಳ ಜೊತೆ ಕೆಲವರು ಗ್ರಾಮವನ್ನೇ ತೊರೆದಿದ್ದಾರೆ. ಕೆಲವರು ಅರಣ್ಯ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ತಲೆಮರಿಸಿಕೊಂಡಿದ್ದಾರೆ. ಘಟನೆಗೆ ಕಾರಣರಾದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸದೆ, ಗ್ರಾಮದ ಮನೆಗಳಿಗೆ ತೆರಳಿ ಸಿಕ್ಕವರನ್ನು ಬಂಧಿಸಿರುವುದರಿಂದ ಜನತೆಯಲ್ಲಿ ಭಯದ ವಾತಾವರಣದದ್ದು, ಹೆಂಗಸರು ಮಕ್ಕಳ ಗೋಳು ಕೇಳುವವರು ಇಲ್ಲದಂತಾಗಿದೆ.ಭದ್ರತೆ ವೈಫಲ್ಯ ಘಟನೆಗೆ ಕಾರಣ: ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ತುಳಸಿಕೆರೆ, ಇಂಡಿಗನತ್ತ, ಮೆಂದರೆ, ಪಡಸಲನತ್ತ, ನಾಗಮಲೆ ಇನ್ನಿತರ ಗ್ರಾಮಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ ದಿನದಿಂದಲೂ ಸಹ ನಿರಂತರವಾಗಿ ಈ ಭಾಗದ ಜನತೆ ಪ್ರತಿಭಟನೆ ಜೊತೆಗೆ ಮತದಾನ ಬಹಿಷ್ಕರಿಸುವುದಾಗಿ ತಿಳಿಸಿದ್ದರು. ಏ.26ರಂದು ನಡೆದ ಮತದಾನ ಕೇಂದ್ರ ಧ್ವಂಸ ಪ್ರಕರಣ, ಅಧಿಕಾರಿಗಳ ಮೇಲೆ ಹಲ್ಲೆ ಘಟನೆಗೆ ಭದ್ರತೆ ವೈಫಲ್ಯವೇ ಕಾರಣ ಎನ್ನಲಾಗಿದೆ. ಕೂಡಲೇ ಇಂತಹ ಗಂಭೀರ ಪ್ರಕರಣವನ್ನು ಉನ್ನತ ಮಟ್ಟದ ಅಧಿಕಾರಿಗಳ ನೇಮಕ ಮಾಡಿ ಸತ್ಯಾ-ಸತ್ಯದ ಬಗ್ಗೆ ವರದಿ ಪಡೆದ ನಂತರ ಘಟನೆಗೆ ಕಾರಣ ತಿಳಿದು ಬರುತ್ತದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.