ಹರಕೆ ಕುರಿ ಯಾರೆಂದು ಮತದಾರರೇ ಉತ್ತರಿಸುವರು

| Published : Mar 16 2024, 01:49 AM IST

ಹರಕೆ ಕುರಿ ಯಾರೆಂದು ಮತದಾರರೇ ಉತ್ತರಿಸುವರು
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಪರವಾಗಿ ಇದ್ದಾರೆ. ಯಾರು ಹರಕೆಯ ಕುರಿ ಎಂಬುದನ್ನು ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗಲಿದೆ. ಕಾಂಗ್ರೆಸ್‌ನವರ ಉಢಾಪೆ ಮಾತುಗಳಿಗೆ ಪ್ರಜ್ಞಾವಂತ ಮತದಾರರೇ ಉತ್ತರ ಕೊಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದರು.

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪ್ರಜ್ಞಾವಂತ ಮತದಾರರು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಪರವಾಗಿ ಇದ್ದಾರೆ. ಯಾರು ಹರಕೆಯ ಕುರಿ ಎಂಬುದನ್ನು ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗಲಿದೆ. ಕಾಂಗ್ರೆಸ್‌ನವರ ಉಢಾಪೆ ಮಾತುಗಳಿಗೆ ಪ್ರಜ್ಞಾವಂತ ಮತದಾರರೇ ಉತ್ತರ ಕೊಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಧರ್ಮ ಯುದ್ಧ. ದೇಶ ವಿಭಜನೆ ಮಾಡಲು ಹೊರಟಿರುವ ಡಿ.ಕೆ.ಸುರೇಶ್ ಅವರ ದರ್ಪ ದೌರ್ಜನ್ಯ, ದುರಂಹಕಾರಕ್ಕೆಲ್ಲ ಚುನಾವಣೆಯಲ್ಲಿ ಅವರನ್ನು ಮಣಿಸಲು ಕ್ಷೇತ್ರದ ಜನರು ಸಿದ್ಧರಾಗಿದ್ದಾರೆ. ನೂರಕ್ಕೆ ನೂರು ಭಾಗ ಡಿ.ಕೆ.ಸುರೇಶ್ ಸೋಲುತ್ತಾರೆ ಎಂದರು.

ಎನ್ ಡಿಎ ಅಭ್ಯರ್ಥಿ ಮಂಜುನಾಥ್ ಅವರು ಎಲ್ಲರಿಗೂ ಚಿರಪರಿಚಿತರು. ಅವರ ಒಳ್ಳೆಯತನವೇ ನಮಗೆ ವರವಾಗಿದೆ. ರಾಜಕೀಯ ಅವರಿಗೆ ಬೇಕಿತ್ತೊ ಬೇಡವೊ ಎಂಬ ವಿಚಾರ ಮುಖ್ಯವಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡಿರುವರು ರಾಜಕೀಯಕ್ಕೆ ಬರಬಾರದು ಅಂತ ಇಲ್ಲವಲ್ಲ. ಮಂಜುನಾಥ್ ಕೇವಲ ಸಂಸದ ಆಗಬೇಕು ಎಂಬುದಷ್ಟೇ ಅಲ್ಲ. ಮುಂದೆ ನರೇಂದ್ರ ಮೋದಿಯವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಬೇಕು ಎಂಬುದು ಈ ಜಿಲ್ಲೆಯ ಜನರ ಆಸೆಯಾಗಿದೆ. ಅವರ ಸೇವೆ ಕೇವಲ ರಾಜ್ಯಕ್ಕಲ್ಲ, ದೇಶಕ್ಕೆ ಬೇಕಿದೆ ಎಂದು ಹೇಳಿದರು.

ಇಕ್ಬಾಲ್ ಎಂಪಿ ಕೈಗೊಂಬೆ:

ಶಾಸಕ ಇಕ್ಬಾಲ್ ಹುಸೇನ್ ಗಂಡಸ್ತನದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಪೂರ್ವದಲ್ಲಿ ಇಕ್ಬಾಲ್ ಹುಸೇನ್ ಹೀಗೆ ಮಾತನಾಡುತ್ತಿರಲಿಲ್ಲ. ನಮ್ಮ ತಪ್ಪಿನಿಂದಾಗಿ ಈ ಬಾರಿ ಎಂಎಲ್‌ಎ ಆಗಿದ್ದಾರೆ. ಹಾಗಾಗಿ ಅವರು ಮಾತನಾಡಲೇಬೇಕು. ಅವರು ಸಂಸದರ ಕೈಗೊಂಬೆ. ಜನವಿರೋಧಿ ಹೇಳಿಕೆಗೆ ಮುಂದಿನ ದಿನದಲ್ಲಿ ಪಶ್ಚಾತಾಪ ಅನುಭವಿಸಲಿದ್ದಾರೆ. ರಾಮನಗರ ಕ್ಷೇತ್ರದ ಜನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದರು.

ಸಂಸದ ಡಿ.ಕೆ.ಸುರೇಶ್ ಹತಾಶರಾಗಿ ಮನೆಮನೆಗೆ ಹೋಗಿ ಕಾರ್ಯಕರ್ತರಿಗೆ ಶಾಲು ಹಾಕುತ್ತಿದ್ದಾರೆ. ಅದೇ ಕಾರ್ಯಕರ್ತರು ಬಲವಂತವಾಗಿ ಶಾಲು ಹೊದಿಸುತ್ತಿದ್ದಾರೆಂದು ನನಗೆ ಹೇಳಿದ್ದಾರೆ. ನಾವು ಯಾವುದೇ ರಿವರ್ಸ್ ಆಪರೇಷನ್ ಮಾಡಲ್ಲ ನಮಗೆ ಜೆಡಿಎಸ್ - ಬಿಜೆಪಿ ಪಡೆಯೇ ಸಾಕು ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಡೆಪಾಸಿಟ್ ಕೂಡ ಸಿಕ್ಕಿಲ್ಲ. ಹಾಗಾಗಿ ಬಹಳ ಸರ್ಕಸ್ ಮಾಡುತ್ತಿದ್ದಾರೆ. ಜನಾಭಿಪ್ರಾಯ ಮಂಜುನಾಥ್ ಪರವಾಗಿದೆ. ಇವಾಗ ಹೋಗಿರೋ ಕಾರ್ಯಕರ್ತರು ನಮ್ಮ ಮುಖಂಡರು, ಶಿಷ್ಯಂದಿರ ನಾಡಿಮಿಡಿತ ನನಗೆ ಗೊತ್ತಿದೆ. ಚುನಾವಣೆ ಒಳಗೆ ವಾಪಾಸ್ ನಮ್ಮ ಬಳಿ ಬರುತ್ತಾರೆ ಎಂದರು.

ರಾಜಕೀಯ ತಂತ್ರಗಾರಿಕೆ ಬಗ್ಗೆ ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲ. ಆದರೆ, ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ. ಅಭ್ಯರ್ಥಿ ಮಂಜುನಾಥ್ ರವರ ಗೆಲುವಿಗಾಗಿ ಏನೆಲ್ಲ ಮಾಡಬೇಕೊ ಮಾಡುತ್ತೇವೆ ಎಂದು ಯೋಗೇಶ್ವರ್ ತಿಳಿಸಿದರು.

(ಮಿಡಲ್‌)

ಹುದ್ದೆಯನ್ನು ತ್ಯಜಿಸಿ ಮಧ್ಯೆ ಬಂದವನಲ್ಲ: ಮಂಜುನಾಥ್‌

ರಾಮನಗರ:

ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ತಂದ ಕ್ರಾಂತಿಕಾರಿ ಬದಲಾವಣೆಯನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸಲು ವೇದಿಕೆ ಬೇಕಾಗಿತ್ತು. ಆ ಕಾರಣದಿಂದಾಗಿ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಪ್ರತಿಕ್ರಿಯಿಸಿದರು.

ನಗರದಲ್ಲಿ ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ದೇಶ ಮತ್ತು ರಾಜ್ಯಗಳಲ್ಲಿರುವ ಸ್ನೇಹಿತರು, ಪರಿಣಿತರು ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿನ ಬದಲಾವಣೆಯನ್ನು ರಾಷ್ಟ್ರಮಟ್ಟಕ್ಕೆ ವಿಸ್ತರಿಸುವ ಸಲಹೆಗಳನ್ನು ನೀಡಿದ್ದರು. ಅದಕ್ಕಾಗಿ ಸೂಕ್ತ ವೇದಿಕೆಯೂ ಬೇಕಾಗಿತ್ತು. ಹೀಗಾಗಿ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನ ಮಾಡಿದೆ ಎಂದರು.

ಹೃದ್ರೋಗ ಸಂಸ್ಥೆಯಲ್ಲಿ 40 ವರ್ಷ ಧೀರ್ಘಕಾಲ ಸೇವೆ ಸಲ್ಲಿಸಿದ ಬಳಿಕ ನಾನು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದೇನೆ. ಹುದ್ದೆಯನ್ನು ತ್ಯಜಿಸಿ ಮಧ್ಯೆ ಬಂದವನಲ್ಲ. ನಾನು ರಾಜಕೀಯಕ್ಕೆ ಬಂದಿರುವುದು ರಾಜಕೀಯ ಮಾಡಲು ಅಲ್ಲ ಎಂದು ಹೇಳಿದರು.

ರಾಮನಗರ ಜಿಲ್ಲೆಯಲ್ಲಿ ತಾತಾ, ತಂದೆ, ಸೊಸೆ, ಮೊಮ್ಮಗನ ನಂತರ ಅಳಿಯನನ್ನು ಕರೆತಂದಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಮಂಜುನಾಥ್ ರವರು ನೋ ಕಾಮೆಂಟ್ ಎಂದಷ್ಟೇ ಉತ್ತರಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಹೃದಯಗಳು ಒಟ್ಟಾಗಿವೆ. ಯಾರಲ್ಲೂ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಖುಷಿಯಾಗಿ ಕೆಲಸ ಮಾಡುತ್ತಿದ್ದಾರೆ. ಉಭಯ ಪಕ್ಷಗಳ ಕಾರ್ಯಕರ್ತರನ್ನು ಭೇಟಿ ಮಾಡುತ್ತೇನೆ. ಈಗಾಗಲೇ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

15ಕೆಆರ್ ಎಂಎನ್ 3,4.ಜೆಪಿಜಿ

3.ಸಿ.ಪಿ.ಯೋಗೇಶ್ವರ್

4.ಡಾ.ಸಿ.ಎನ್ .ಮಂಜುನಾಥ್