ಸ್ವೀಪ್ ಸಮಿತಿಯಿಂದ ಹಾಸನದಲ್ಲಿ ಮತದಾನ ಜಾಗೃತಿ

| Published : Mar 24 2024, 01:32 AM IST

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಪ್ರೇರೇಪಿಸುವ ನಿಟ್ಟಿನಲ್ಲಿ ಹಾಸನ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯಾದ್ಯಂತ ವಿವಿಧ ಚಟುವಟಿಕೆಗಳು ನಡೆಯುತ್ತಿವೆ.

ಲೋಕಸಭೆ ಚುನಾವಣೆ ಹಿನ್ನೆಲೆ ಮತದಾರರ ಹೆಚ್ಚಿಸಲು ಜಿಲ್ಲಾಡಳಿತ ಕ್ರಮ । ವಿವಿಧ ಕಾರ್ಯಕ್ರಮಗಳುಕನ್ನಡಪ್ರಭ ವಾರ್ತೆ ಹಾಸನ

ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಪ್ರೇರೇಪಿಸುವ ನಿಟ್ಟಿನಲ್ಲಿ ಹಾಸನ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯಾದ್ಯಂತ ವಿವಿಧ ಚಟುವಟಿಕೆಗಳು ನಡೆಯುತ್ತಿವೆ.

ಚುನಾವಣಾ ಆಯೋಗವು ಮತದಾರರಲ್ಲಿ ಚುನಾವಣೆಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸಿ, ಮತದಾನ ಮಾಡಲು ಪ್ರೇರೇಪಿಸಲು ‘ಸ್ವೀಪ್’ ಚಟುವಟಿಕೆಗಳ ಮೂಲಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಅವರ ನೇತೃತ್ವದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‌ಗಳ ಮೂಲಕ ‘ಚುನಾವಣಾ ಪರ್ವ-ದೇಶದ ಗರ್ವ’ ಎಂಬ ಘೋಷಣೆಯಡಿ ಮತದಾನದ ಮಹತ್ವವನ್ನು ತಿಳಿಸಲು ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಲೋಕಸಭಾ ಚುನಾವಣೆ ಘೋಷಣೆಯಾದ ನಂತರ ಸ್ವೀಪ್ ಕಾರ್ಯಕ್ರಮಗಳನ್ನು ತೀವ್ರಗೊಳಿಸಲಾಗಿದೆ.

ಪ್ರಮುಖವಾಗಿ ಗ್ರಾಮಾಂತರ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿ ಕಂಡು ಬಂದಿರುವ ಹಿನ್ನೆಲೆ ನಗರ ವ್ಯಾಪ್ತಿಯ ಮತದಾರರ ಮನೆಮನೆಗೆ ತೆರಳಿ ಮತದಾನದ ಜಾಗೃತಿ ಮೂಡಿಸುವ ಪ್ರಯತ್ನಗಳಾಗುತ್ತಿವೆ. ಗ್ರಾಮ ಪಂಚಾಯತ್‌ಗಳಲ್ಲಿ ತಂಡವನ್ನು ರಚಿಸಿ, ಗ್ರಾಮದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಮತದಾನದ ಮಹತ್ವವನ್ನು ತಿಳಿಸಲಾಗುತ್ತಿದೆ.

ಈ ಜಾಗೃತಿ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಮತದಾನ ದಿನಾಂಕ, ಮತದಾರರಿಗೆ ಮತದಾನದ ಕೇಂದ್ರದಲ್ಲಿರುವ ಸೌಲಭ್ಯಗಳು, ಹಿರಿಯ ನಾಗರೀಕರಿಗೆ ಮತ್ತು ವಿಕಲಚೇತನರಿಗೆ ವಿಶೇಷ ಮತದಾನದ ವ್ಯವಸ್ಥೆ, ಮೊಬೈಲ್‌ನಲ್ಲಿಯೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಂಡು ಹಿಡಿಯುವ ವಿಧಾನ ಮತ್ತಿತರ ವಿಷಯಗಳ ಬಗ್ಗೆ ಈ ಅಭಿಯಾನದಲ್ಲಿ ಜಾಗೃತಿ ತಂಡದ ಸದಸ್ಯರು ಸಾರ್ವಜನಿಕರಿಗೆ ಪರಿಣಾಮಕಾರಿಯಾದ ಅರಿವು ಮೂಡಿಸುತ್ತಿದ್ದಾರೆ. ಏ.೨೬ರಂದು ಹಾಸನ ಜಿಲ್ಲೆಯಲ್ಲಿ ಮತದಾನ ನಡೆಯುತ್ತಿರುವ ಬಗ್ಗೆ ಒತ್ತು ನೀಡಿ, ಮತದಾನಕ್ಕೆ ಸಿದ್ಧರಾಗಿರಲು ತಿಳಿಸಲಾಗುತ್ತಿದೆ.

ಜಿಲ್ಲೆಯ ವಿವಿಧ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮತದಾನ ಪ್ರಮಾಣವಚನ ಸ್ವೀಕರಿಸುವುದು ಸೇರಿದಂತೆ ಅರಿವು ಮೂಡಿಸುವ ಹಲವು ಕಾರ್ಯಕ್ರಮಗಳು ನಡೆಯುತ್ತಿವೆ. ಮಹಿಳಾ ಸ್ವಸಹಾಯ ಸಂಘಟನೆಗಳು, ಸಂಜೀವಿ ಒಕ್ಕೂಟಗಳ ಸಭೆಗಳಲ್ಲಿಯೂ ಮತದಾನದ ಬಗ್ಗೆ ಮಾಹಿತಿ ನೀಡಿ, ಪ್ರಮಾಣ ಸ್ವೀಕಾರ ನಡೆಸಲಾಗುತ್ತಿದೆ.

ಹಾಸನ ನಗರ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ, ವೃತ್ತಗಳಲ್ಲಿ ಮತದಾನದ ಜಾಗೃತಿ ಮೂಡಿಸುವ ಸಂದೇಶವನ್ನೊಳಗೊಂಡ ಬ್ಯಾನರ್‌ಗಳನ್ನು, ಫಲಕಗಳನ್ನು ಹಾಕಲಾಗಿದೆ. ಹಾಸನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್.ಎಸ್.ಎಸ್) ವಿದ್ಯಾರ್ಥಿಗಳು ನಗರದ ವಿವಿಧ ಬಡಾವಣೆಗಳ ಮನೆ ಮನೆಗೆ ತೆರಳಿ ಮತದಾನದ ಮಹತ್ವ ತಿಳಿಸುತ್ತಿದ್ದಾರೆ.

ದಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ, ವಾರದ ಸಂತೆ ನಡೆಯುವ ಸ್ಥಳಗಳಲ್ಲಿ ಸ್ವೀಪ್ ತಂಡದವರು ಜಾಗೃತಿ ಸಂದೇಶ ನೀಡುತ್ತಿದ್ದಾರೆ. ಬೇಲೂರು ತಾಲೂಕು ನಾರ್ವೆ ಸಂತೆ ಹಾಗೂ ಚೀಕನಹಳ್ಳಿ ಸಂತೆಯಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಇತ್ತೀಚೆಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗಿದೆ. ಹಾಸನ ನಗರದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.