ಸಾರಾಂಶ
ಚಿತ್ರದುರ್ಗ: ಲೋಕಸಭಾ ಚುನಾವಣೆಯ ಮತದಾನದ ದಿನದಂದು ಮತಗಟ್ಟೆಗೆ ಬಂದು ಮತ ಚಲಾಯಿಸಲು ಸಾಧ್ಯವಾಗದ 85 ವರ್ಷ ಮೇಲ್ಟಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಮನೆ ಮನೆಗೆ ಹೋಗಿ ಮತ ಚಲಾವಣೆ ಮಾಡಿಸುವ ಕಾರ್ಯ ಇದೇ ಏ.13ರಿಂದ 16ರವರೆಗೆ ನಡೆಯಲಿದ್ದು, ಮನೆಯಿಂದಲೇ ಮತ ಚಲಾಯಿಸಲು 4248 ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.
85 ವರ್ಷ ಮೇಲ್ಟಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ 95 ತಂಡ ರಚನೆ ಮಾಡಲಾಗಿದೆ. ಮನೆಯಿಂದಲೇ ಮತ ಚಲಾಯಿಸಲು 2722 ಮಂದಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, 1526 ಮಂದಿ ಅಂಗವಿಕಲ ಮತದಾರರು ನೋಂದಣಿ ಮಾಡಿಕೊಂಡಿದ್ದು, ಅವರ ಮನೆಗೆ ತಂಡಗಳು ಹೋಗಲು ಮಾರ್ಗ ಸಿದ್ಧಪಡಿಸಲಾಗಿದೆ. ಈಗಾಗಲೇ ಮತದಾರರಿಗೆ ನೋಟಿಸ್ ನೀಡಿ ದಿನಾಂಕವನ್ನೂ ತಿಳಿಸಲಾಗಿದೆ.ಮನೆ ಮತದಾನ ಕಾರ್ಯವು ಚಿತ್ರದುರ್ಗ, ಮೊಳಕಾಲ್ಮೂರು, ಸಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ರಿಯಲ್ಲಿ ಏಪ್ರಿಲ್ 13 ರಿಂದ 15ರ ವರೆಗೆ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ರಿಯಲ್ಲಿ ಏಪ್ರಿಲ್ 13 ರಿಂದ 14ರ ವರೆಗೆ, ಚಳ್ಳಕೆರೆ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರ ವ್ಯಾಪ್ರಿಯಲ್ಲಿ ಏ.13ರಿಂದ 16ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 220 ಮಂದಿ ಹಿರಿಯ ನಾಗರಿಕರು ಹಾಗೂ 279 ಅಂಗವಿಕಲ ಮತದಾರರು ನೊಂದಣಿ ಮಾಡಿಕೊಂಡಿದ್ದು, ಮನೆ ಮತದಾನ ಕಾರ್ಯಕ್ಕಾಗಿ 15 ತಂಡ ರಚಿಸಲಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 138 ಮಂದಿ ಹಿರಿಯ ನಾಗರಿಕರು ಹಾಗೂ 56 ಅಂಗವಿಕಲ ಮತದಾರರು ನೊಂದಣಿ ಮಾಡಿಕೊಂಡಿದ್ದು, ಮನೆ ಮತದಾನ ಕಾರ್ಯಕ್ಕಾಗಿ 9 ತಂಡ ರಚಿಸಲಾಗಿದೆ. ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 87 ಮಂದಿ ಹಿರಿಯ ನಾಗರಿಕರು ಹಾಗೂ 81 ಅಂಗವಿಕಲ ಮತದಾರರು ನೊಂದಣಿ ಮಾಡಿಕೊಂಡಿದ್ದು, 13 ತಂಡ ರಚಿಸಲಾಗಿದೆ.ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 192 ಮಂದಿ ಹಿರಿಯ ನಾಗರಿಕರು ಹಾಗೂ 55 ಅಂಗವಿಕಲ ಮತದಾರರು ನೊಂದಣಿ ಮಾಡಿಕೊಂಡಿದ್ದು, ಮನೆ ಮತದಾನ ಕಾರ್ಯಕ್ಕಾಗಿ 10 ತಂಡ ರಚಿಸಲಾಗಿದೆ. ಹೊಸದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 284 ಮಂದಿ ಹಿರಿಯ ನಾಗರಿಕರು ಹಾಗೂ 121 ಅಂಗವಿಕಲ ಮತದಾರರು ನೊಂದಣಿ ಮಾಡಿಕೊಂಡಿದ್ದು, 11 ತಂಡ ರಚಿಸಲಾಗಿದೆ. ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 203 ಮಂದಿ ಹಿರಿಯ ನಾಗರಿಕರು ಹಾಗೂ 123 ಅಂಗವಿಕಲ ಮತದಾರರು ನೊಂದಣಿ ಮಾಡಿಕೊಂಡಿದ್ದು, ಮತದಾನ ಕಾರ್ಯಕ್ಕಾಗಿ 8 ತಂಡ ರಚಿಸಲಾಗಿದೆ.
ಪಾವಗಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 499 ಮಂದಿ ಹಿರಿಯ ನಾಗರಿಕರು ಹಾಗೂ 208 ಅಂಗವಿಕಲ ಮತದಾರರು ನೊಂದಣಿ ಮಾಡಿಕೊಂಡಿದ್ದು, ಮನೆ ಮತದಾನ ಕಾರ್ಯಕ್ಕಾಗಿ 7 ತಂಡ ರಚಿಸಲಾಗಿದೆ.ಸಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 1099 ಮಂದಿ ಹಿರಿಯ ನಾಗರಿಕರು ಹಾಗೂ 603 ಅಂಗವಿಕಲ ಮತದಾರರು ನೊಂದಣಿ ಮಾಡಿಕೊಂಡಿದ್ದು, ಮತದಾನ ಕಾರ್ಯಕ್ಕಾಗಿ 22 ತಂಡ ರಚಿಸಲಾಗಿದೆ.
ಮನೆ ಮತದಾನ ಕಾರ್ಯಕ್ಕಾಗಿ ಮತದಾರರ ಮನೆಗೆ ತೆರಳುವ ತಂಡದಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಪೊಲೀಸ್, ವಿಡಿಯೊಗ್ರಾಫರ್ ಹಾಗೂ ಸೂಕ್ಷ್ಮ ವೀಕ್ಷಕರು ಇರಲಿದ್ದಾರೆ. ತಂಡಗಳು ಯಾವ ಸಮಯದಲ್ಲಿ ಎಲ್ಲಿಂದ ಎಲ್ಲಿಗೆ ಹೋಗುತ್ತವೆ ಎಂಬ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೂ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ವೆಂಕಟೇಶ್ ತಿಳಿಸಿದ್ದಾರೆ.ಅಧಿಕಾರಿಗಳಿಗೆ ತರಬೇತಿ: ಚಿತ್ರದುರ್ಗ ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ಮನೆಯಿಂದ ಮತದಾನಕ್ಕೆ ತೆರಳುವ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು. ತರಬೇತಿಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಸೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಸೇರಿದಂತೆ ಮತ್ತಿತರರು ಇದ್ದರು.