ಸಾರಾಂಶ
ಮತದಾರರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿಕನ್ನಡಪ್ರಭ ವಾರ್ತೆ ಕೊಪ್ಪಳ
ಮತದಾನ ಎನ್ನುವುದು ಪವಿತ್ರ ಕಾರ್ಯ. ಪ್ರಜಾಪ್ರಭುತ್ವದಲ್ಲಿ ಮತ ಚಲಾವಣೆ ಸಂವಿಧಾನವು ನಮಗೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ರಾಹುಲ್ ರತ್ನಂ ಪಾಂಡೆ ಹೇಳಿದರು.ತಾಲೂಕಿನ ಬಂಡಿಹರ್ಲಾಪುರ ಗ್ರಾಮ ಪಂಚಾಯಿತಿಯ ಬಿ ಹೊಸಳ್ಳಿ ಗ್ರಾಮದ ಕೆರೆ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾರರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೇ 7ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶ ನಿರ್ಮಿಸೋಣ. ಮತದಾನ ದಿನದಂದು ನಾವು ಸಮಯ ವ್ಯರ್ಥ ಮಾಡದೇ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲಾತಿ ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು. ಸ್ವೀಪ್ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದ್ದು, ನರೇಗಾ ಕೂಲಿಕಾರರು ಮತದಾನ ಮಾಡಿ ಇತರರಿಗೆ ಮಾದರಿಯಾಗಬೇಕೆಂದು ಕರೆ ನೀಡಿದರು.ಕಳೆದ ಬಾರಿಗಿಂತ ಈ ಬಾರಿ ವಿನೂತನವಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಜಿಲ್ಲೆಯ ಮತದಾನ ಪ್ರಮಾಣವನ್ನು ಹೆಚ್ಚಿಸಲು ನಾವೆಲ್ಲರೂ ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸೋಣ. ಎಲ್ಲ ನರೇಗಾ ಕೂಲಿಕಾರರು ನಿಮ್ಮ ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರೊಂದಿಗೆ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದರು.
ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ಮತ ಚಲಾವಣೆ ತುಂಬಾ ಜವಾಬ್ದಾರಿಯುತವಾದ ಕಾರ್ಯ. ಆ ಮೂಲಕ ನಾವುಗಳು ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೇ ನಿರ್ಭಯವಾಗಿ ಮತ ಚಲಾಯಿಸಬೇಕೆಂದು ಕರೆ ನೀಡಿದರು. ನಂತರ ಮತದಾರರ ಪ್ರತಿಜ್ಞಾ ವಿಧಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಬೋಧಿಸಿದರು.ಸ್ವೀಪ್ ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ನಿರ್ದೇಶಕ ಯಂಕಪ್ಪ, ಹಿರಿಯ ಮಹಿಳಾ ಮತದಾರ ಹಂಪಮ್ಮ ಉಪ್ಪಾರ, ತಾಲೂಕು ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹನುಮಂತಪ್ಪ, ತಾಲೂಕು ಯೋಜನಾಧಿಕಾರಿ ರಾಜೇಸಾಬ ನದಾಫ್, ತಾಲೂಕು ಸ್ವೀಪ್ ಸಮಿತಿ ಸದಸ್ಯರಾದ ಬಸವರಾಜ ಬಳಿಗಾರ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರಾವ್‌ಸಾಹೇಬ ಬಿರಾದಾರ, ಗುರುದೇವಮ್ಮ, ರುದ್ರಯ್ಯ ಹಿರೇಮಠ, ತಾಂತ್ರಿಕ ಸಂಯೋಜಕ ಯಮನೂರಪ್ಪ, ತಾಂತ್ರಿಕ ಸಹಾಯಕರಾದ ರಮೇಶ್ ಕುಮಾರ, ಶಿವಪ್ರಸಾದ, ಗುರುರಾಜ, ಕಾಯಕ ಬಂಧುಗಳು, 1525 ನರೇಗಾ ಕೂಲಿಕಾರರು ಭಾಗವಹಿಸಿದ್ದರು.