ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಇಂದು ಮತದಾನ

| Published : Apr 26 2024, 12:54 AM IST

ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಇಂದು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಅಗತ್ಯ ಎಲ್ಲಾ ಸಿದ್ಧತೆಯೊಂದಿಗೆ ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ತಾಲೂಕು ಕೇಂದ್ರಗಳಿಂದ ಮತಗಟ್ಟೆಗಳಿಗೆ ಮಧ್ಯಾಹ್ನ ತೆರಳಿದರು.

- ಉಭಯ ಜಿಲ್ಲೆಗಳಲ್ಲಿ 15,85,162 ಮತದಾರರು । 1842 ಮತಗಟ್ಟೆಗಳು । ಮತದಾನ ಕೇಂದ್ರಕ್ಕೆ ತೆರಳಿದ ಸಿಬ್ಬಂದಿ, ಕಣದಲ್ಲಿ 10 ಅಭ್ಯರ್ಥಿಗಳು

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಅಗತ್ಯ ಎಲ್ಲಾ ಸಿದ್ಧತೆಯೊಂದಿಗೆ ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ತಾಲೂಕು ಕೇಂದ್ರಗಳಿಂದ ಮತಗಟ್ಟೆಗಳಿಗೆ ಮಧ್ಯಾಹ್ನ ತೆರಳಿದರು.

ಈ ಕ್ಷೇತ್ರದ ಕಣದಲ್ಲಿ ಉಭಯ ಜಿಲ್ಲೆಗಳಿಂದ ಒಟ್ಟು 10 ಮಂದಿ ಸ್ಪರ್ಧಿಗಳಿದ್ದಾರೆ. ಒಟ್ಟಾರೆ 15,85,162 ಮತದಾರರು ಇದ್ದು, ಈ ಪೈಕಿ 7,68,215 ಪುರುಷರು ಇದ್ದರೆ, 8,16,910 ಮಹಿಳಾ ಮತದಾರರು ಇದ್ದು, 1842 ಮತಗಟ್ಟೆಗಳನ್ನು ತೆರೆಯಲಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.

ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ತರೀಕೆರೆ, ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಶೃಂಗೇರಿ, ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಕುಂದಾಪುರ, ಉಡುಪಿ, ಕಾಪು ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಈ ಕ್ಷೇತ್ರಗಳಲ್ಲಿ ಅಧ್ಯಾಕ್ಷಧಿಕಾರಿ, ಸಹಾಯಕ ಅಧ್ಯಾಕ್ಷಧಿಕಾರಿ, ಮತಗಟ್ಟೆ ಅಧಿಕಾರಿ, ಮತಗಟ್ಟೆ ಸಹಾಯಕರು ಸೇರಿ ದಂತೆ 8024 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹಾಸನ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಕಡೂರು ಕ್ಷೇತ್ರದಲ್ಲಿ 253 ಅಧ್ಯಾಕ್ಷಧಿಕಾರಿ, 253 ಸಹಾಯಕ ಅಧ್ಯಕ್ಷಧಿಕಾರಿ, 506 ಮತಗಟ್ಟೆ ಅಧಿಕಾರಿ ಸೇರಿದಂತೆ 1012 ಮಂದಿ ನೇಮಕ ಮಾಡಲಾಗಿದೆ. ಈ ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳಿವೆ.

ಎಲ್ಲಾ ಮತದಾನ ಕೇಂದ್ರಗಳಲ್ಲಿ ವಿದ್ಯುತ್‌ ದೀಪ, ಕುಡಿಯುವ ನೀರು ಸೇರಿದಂತೆ ಇತರೆ ಮೂಲಭೂತ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಮತಗಟ್ಟೆಗೆ ತೆರಳುವ ಮಾಸ್ಟ್ರೀಂಗ್‌ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ. ಗೋಪಾಲಕೃಷ್ಣ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಂತಿಯುತವಾಗಿ ಮತದಾನ ನಡೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ ಸೂಕ್ತವಾದ ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಬಂದೋಬಸ್ತಿಗಾಗಿ ಕೇಂದ್ರ ಮೀಸಲು ಪಡೆಯ 2 ತಂಡ, ಕೇಂದ್ರ ಮಹಿಳಾ ಮೀಸಲು ಪಡೆಯ ಒಂದು ತಂಡ, 8 ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ಡಿಎಆರ್‌, ಸಿವಿಲ್‌ ಪೋಲೀಸ್‌, ಗೃಹ ರಕ್ಷಕದಳ ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ.ರಾಜಕೀಯ ಪಕ್ಷಗಳಿಗೆ ಸೂಚನೆ:

ಮತಗಟ್ಟೆ ಕರ್ತವ್ಯದ ಮೇಲಿರುವ ಅಧಿಕಾರಿಗಳೊಂದಿಗೆ ಸಭ್ಯವಾಗಿ ವರ್ತಿಸಬೇಕು. ಮತಗಟ್ಟೆಯ ವ್ಯಾಪ್ತಿಯಿಂದ 200 ಮೀ. ದೂರದಲ್ಲಿರುವ ರಾಜಕೀಯ ಪಕ್ಷಗಳ ಟೆಂಟುಗಳು ಕೇವಲ ಇಬ್ಬರು ಕಾರ್ಯಕರ್ತರಿಗೆ ಸಾಕಾಗುವಷ್ಟು ಗಾತ್ರದ ಟಾರ್ಪಾಲಿನ್ ಅಥವಾ ಛತ್ರಿವುಳ್ಳ ಮೇಲ್ಛಾವಣಿ, ಎರಡು ಕುರ್ಚಿ, ಒಂದು ಮೇಜು ಹೊಂದಿರತಕ್ಕದ್ದು. ಈ ಟೆಂಟುಗಳು ಕೇವಲ ಮತದಾರರಿಗೆ ಐಡೆಂಟಿ ಸ್ಲಿಪ್‌ನೀಡುವ ಉದ್ದೇಶಕ್ಕಾಗಿ ಮಾತ್ರ. ಈ ಟೆಂಟುಗಳು ಸ್ಥಾಪಿಸುವ ಪೂರ್ವದಲ್ಲಿ ಸಹಾಯಕ ಚುನಾವಣಾಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಬೇಕು. ಅಭ್ಯರ್ಥಿಯ ಹೆಸರು, ಪಕ್ಷ ಮತ್ತು ಚುನಾವಣೆ ಚಿಹ್ನೆವುಳ್ಳ ಒಂದು ಬ್ಯಾನರ್ ಅಳವಡಿಸಲು ಅವಕಾಶವಿರುತ್ತದೆ.ಈ ಟೆಂಟುಗಳಲ್ಲಿ ಜನಸಂದಣಿ ಅಥವಾ ಮತದಾನ ಮಾಡಿದ ಮತದಾರರು ಜಮಾಯಿಸತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.ಪೋಟೋ ಫೈಲ್‌ ನೇಮ್‌ 25 ಕೆಸಿಕೆಎಂ 1ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನ ಮಸ್ಟ್ರೀಂಗ್‌ ಕೇಂದ್ರದಿಂದ ಮತಗಟ್ಟೆ ಕೇಂದ್ರಕ್ಕೆ ಗುರುವಾರ ತೆರಳಿದ ಚುನಾವಣಾ ಸಿಬ್ಬಂದಿ.