ಸಾರಾಂಶ
ಶ್ರೀಶೈಲ ಮಠದ
ಬೆಳಗಾವಿ : ರಾಜ್ಯದ ಏಕಮಾತ್ರ ಸರ್ಕಾರಿ ತಾಂತ್ರಿಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (ವಿಟಿಯು) ರಾಜ್ಯದ ಇತರೆ ಸಾರ್ವಜನಿಕ ವಿವಿಗಳಿಗೆ ಸರ್ಕಾರ ನೀಡುವಂತೆ ವೇತನಾನುದಾನವನ್ನೂ ನೀಡುತ್ತಿಲ್ಲ. ಇದರಿಂದ ಆಂತರಿಕ ಆದಾಯದಿಂದಲೇ ಈ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುವ ಪರಿಸ್ಥಿತಿ ಉದ್ಭವವಾಗಿದೆ.
ಇನ್ನೂರಕ್ಕೂ ಹೆಚ್ಚು ಸಂಯೋಜಿತ ಕಾಲೇಜುಗಳನ್ನು ಹೊಂದಿರುವ ವಿಟಿಯು ಕಾಯಂ ಬೋಧಕರು, ಅಧಿಕಾರಿ , ಸಿಬ್ಬಂದಿ ಕೊರತೆಯನ್ನು ಕೂಡ ಎದುರಿಸುತ್ತಿದೆ.
ಭಾರತ ರತ್ನ ಡಾ.ಸರ್ ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ವನ್ನು 1998ರಲ್ಲಿ ಸ್ಥಾಪಿಸಲಾಯಿತು. ವಿವಿಯು ಇಡೀ ರಾಜ್ಯದ ವ್ಯಾಪ್ತಿಯನ್ನು ಹೊಂದಿದೆ. ಬೆಳಗಾವಿಯಲ್ಲಿ ಜ್ಞಾನ ಸಂಗಮ ಹೆಸರಿನಲ್ಲಿ ಮುಖ್ಯ ಕ್ಯಾಂಪಸ್, ಪ್ರಧಾನ ಕಚೇರಿ ಹೊಂದಿದೆ. ಅದರ ಆಡಳಿತಾತ್ಮಕ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಬೆಂಗಳೂರು (ಮುದ್ದೇನಹಳ್ಳಿ), ಮೈಸೂರು, ಕಲಬುರಗಿ ಮತ್ತು ಬೆಳಗಾವಿಯಲ್ಲಿ ನಾಲ್ಕು ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಲಾಗಿದೆ. ಜತೆಗೆ ಮಂಗಳೂರಿನಲ್ಲಿ ವಿಸ್ತರಣಾ ಕೇಂದ್ರ ಕೂಡ ಕಾರ್ಯನಿರ್ವಹಿಸುತ್ತಿದೆ.
ವಿಟಿಯು ರಾಜ್ಯದಲ್ಲಿ ಒಟ್ಟು 212 ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ(ಆರ್ಕಿಟೆಕ್ಚರ್) ಕಾಲೇಜುಗಳನ್ನು ಒಳಗೊಂಡಿದೆ. ಅವುಗಳಲ್ಲಿ 41 ಸ್ವಾಯತ್ತ ಕಾಲೇಜುಗಳು, ಎರಡು ಘಟಕ ಕಾಲೇಜುಗಳು ಸೇರಿ 18 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು, 26 ವಾಸ್ತುಶಿಲ್ಪ ಕಾಲೇಜುಗಳು ಸೇರಿವೆ.
ಇದು ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಪ್ಲಾನಿಂಗ್, ಬಿ ವೋಕ್ ಹಾಗೂ ಬಿ.ಎಸ್ಸಿ. ಹಾನರ್ಸ್ ಸೇರಿ 51ಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಪದವಿ ಮತ್ತು 98 ಸ್ನಾತಕೋತ್ತರ ಕಾರ್ಯಕ್ರಮಗಳ ಅಡಿ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುತ್ತಿದೆ. ವಿವಿಧ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸುಮಾರು 923 ವಿಭಾಗಗಳನ್ನು ವಿಟಿಯು ಅಡಿ ಸಂಶೋಧನಾ ಕೇಂದ್ರಗಳಾಗಿ ಗುರುತಿಸಲಾಗಿದೆ. ಜತೆಗೆ 9000ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಈ ಕೇಂದ್ರಗಳಲ್ಲಿ ಸಂಶೋಧನಾ ಕಾರ್ಯಕ್ರಮಗಳ ಮೂಲಕ ಡಾಕ್ಟರೇಟ್ ಮತ್ತು ಎಂ.ಎಸ್ಸಿ (ಇಂಗ್ಲಿಷ್) ಪದವಿಗಳನ್ನು ಪಡೆಯುತ್ತಿದ್ದಾರೆ. ಪದವಿ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಂದ ಬರುವ ನೋಂದಣಿ ಶುಲ್ಕ ಮಾತ್ರ ವಿಟಿಯುಗೆ ಆದಾಯದ ಮೂಲ. ಬಹುತೇಕ ಆದಾಯ ಸಿಬ್ಬಂದಿ ವೇತನಕ್ಕೆ ಹೋಗುತ್ತದೆ. ಇನ್ನುಳಿದ ಕಾರ್ಯಚಟುವಟಿಕೆಗೆ ಸರ್ಕಾರವನ್ನೇ ವಿಟಿಯು ಅವಲಂಬಿಸಿದೆ.
ವಿಟಿಯು ಆವರಣದಲ್ಲೇ ಬಿ.ಟೆಕ್ ಕೋರ್ಸ್ ಆರಂಭ:
ಪ್ರತಿಭಾನ್ವಿತ ಮತ್ತು ಬಡ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸಲು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ತನ್ನ ಎಲ್ಲಾ ಪ್ರಾದೇಶಿಕ ಕೇಂದ್ರ ಕ್ಯಾಂಪಸ್‌ಗಳಲ್ಲಿ ಬಿ.ಟೆಕ್ ಕಾರ್ಯಕ್ರಮ ಪ್ರಾರಂಭಿಸಿದೆ. ಇಲ್ಲಿಯವರೆಗೂ ಕೇವಲ ಸ್ನಾತಕೋತ್ತರ ಪದವಿಗಳಾದ ಎಂ.ಟೆಕ್, ಎಂಬಿಎ ಹಾಗೂ ಎಂಸಿಎ ಪದವಿಗೆ ಸೀಮಿತವಾಗಿದ್ದ ವಿಟಿಯು ಅಧ್ಯಯನ ಕೇಂದ್ರಗಳಲ್ಲಿ ಪ್ರಸ್ತುತ ಅವಶ್ಯ ಇರುವ ತಾಂತ್ರಿಕ ವಿಷಯಗಳಲ್ಲಿ ವಸತಿ ಸಹಿತ ಬಿ.ಟೆಕ್ ಕೋರ್ಸ್‌ಗಳನ್ನು ವಿಟಿಯು ತನ್ನ ಎಲ್ಲ ಕೇಂದ್ರಗಳಲ್ಲಿ ಆರಂಭ ಮಾಡಿದೆ.
ಔದ್ಯೋಗಿಕ ರಂಗದ ಕ್ಷಿಪ್ರ ಬೆಳವಣಿಗೆಗೆ ತಕ್ಕಂತೆ ಅವಶ್ಯಕ ಕೌಶಲ್ಯದೊಂದಿಗೆ ಎಂಜಿನಿಯರಿಂಗ್ ಪ್ರತಿಭೆಗಳನ್ನು ಸಮಾಜಕ್ಕೆ ನೀಡುವ ಮಹತ್ವಾಕಾಂಕ್ಷೆಯೊಂದಿಗೆ ಹಾಗೂ ಗ್ರಾಮೀಣ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸರ್ಕಾರಿ ಶುಲ್ಕದಲ್ಲಿ ಎಲ್ಲ ಸೌಕರ್ಯವುಳ್ಳ ಇಂಜಿನಿಯರಿಂಗ್ ಶಿಕ್ಷಣವನ್ನು 4 ವರ್ಷದ ವಸತಿ ಸಹಿತ ಇನ್ ಕ್ಯಾಂಪಸ್ ಬಿ. ಟೆಕ್ ಕೋರ್ಸ್‌ಗಳನ್ನು ಪ್ರಸ್ತುತ ಅವಶ್ಯವಿರುವ ತಾಂತ್ರಿಕ ವಿಷಯಗಳಾದ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಬಿಸಿನೆಸ್ ಸಿಸ್ಟಂ, ಕಂಪ್ಯೂಟರ್ ಸೈನ್ಸ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ರೊಬೊಟಿಕ್ಸ್ ಆ್ಯಂಡ್ ಆಟೋಮೇಷನ್ ಹಾಗೂ ಮೆಕ್ಯಾನಿಕಲ್ ಆ್ಯಂಡ್ ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಂಪ್ಯೂಟರ್ ಇಂಜಿನಿಯರಿಂಗ್, ವಿಎಲ್‌ಎಸ್‌ಐ ಡಿಸೈನ್ ಹೀಗೆ ಹಲವು ವಿಷಯಗಳಲ್ಲಿ ಬಿ.ಟೆಕ್ ಕೋರ್ಸ್ ಆರಂಭ ಮಾಡಿದೆ.
ಸಿಬ್ಬಂದಿ ಕೊರತೆ: ಇಲ್ಲಿ ಹಿಂದಿನ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸೀಮಿತಗೊಳಿಸಿ ಮಂಜೂರಾದ ಬೋಧಕ ಹುದ್ದೆಗಳಾದ 228 ರಲ್ಲಿ ಪ್ರಸ್ತುತ 136 ಕಾಯಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು 92 ಹುದ್ದೆಗಳು ಖಾಲಿ ಇವೆ. ಇಂದಿನ ಅವಶ್ಯಕತೆಗೆ ತಕ್ಕಂತೆ 141 ಪ್ರಾಧ್ಯಾಪಕರನ್ನು ತಾತ್ಕಾಲಿಕ ಆಡ್ -ಹಾಕ್ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಬೋಧಕೇತರ ವಿಭಾಗದಲ್ಲಿ 425 ಹುದ್ದೆಗಳು ಮಂಜೂರಾಗಿದ್ದು ಅದರಲ್ಲಿ 297 ಜನ ಕಾಯಂ ಆಗಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಆಂತರಿಕ ಆದಾಯದಿಂದಲೇ ಬೋಧಕ, ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಲಾಗುತ್ತಿದೆ. ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಿಗೆ ಶುಲ್ಕ ಹೆಚ್ಚು ಬರುತ್ತದೆ ಎಂದು ಸರ್ಕಾರ ಅನುದಾನವನ್ನೇ ನೀಡುತ್ತಿಲ್ಲ. ಆರ್ಥಿಕ ಮುಗ್ಗಟ್ಟು ಎದುರಾಗಿರುವುದರಿಂದ ಸಂಶೋಧನೆ, ಕೌಶಲ್ಯ ಅಭಿವೃದ್ಧಿ ಹಾಗೂ ಅನ್ವೇಷಣಾ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ. ₹44 ಕೋಟಿ ವೇತನ ಅನುದಾನಕ್ಕೆ ವಿಟಿಯು ಮನವಿ ಸಲ್ಲಿಸಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ.
ವರ್ಷದಲ್ಲಿ ಎರಡು ಬಾರಿ ಘಟಿಕೋತ್ಸವ:
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ವರ್ಷದಲ್ಲಿ ಎರಡು ಬಾರಿ ಘಟಿಕೋತ್ಸವ ಹಮ್ಮಿಕೊಳ್ಳುತ್ತ ಬಂದಿದೆ. ಅಲ್ಲದೇ, ಪರೀಕ್ಷೆ ನಡೆದ ಮೂರು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿದ ಕೀರ್ತಿಗೂ ವಿಟಿಯು ಭಾಜನಗೊಂಡಿದೆ.ಅನುದಾನವಿಲ್ಲದೆ ಅಭಿವೃದ್ಧಿಗೆ ಹಿನ್ನಡೆ
ವಿಟಿಯು ಆಂತರಿಕ ಆದಾಯದಿಂದಲೇ ಇದುವರೆಗೂ ಕಾರ್ಯನಿರ್ವಹಿಸಿದೆ. ಈಗಲೂ ಅದೇ ಸ್ಥಿತಿ ಇದೆ. ವಿಟಿಯನಲ್ಲಿ ಕಾರ್ಯನಿರ್ವಹಿಸುತ್ತಿರುವ (ಎಲ್ಲ ಪ್ರಾದೇಶಿಕ ಕೇಂದ್ರಗಳನ್ನು ಒಳಗೊಂಡಂತೆ) ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಪ್ರತಿ ವರ್ಷ ₹108 ಕೋಟಿ ವೇತನಕ್ಕೆ ವೆಚ್ಚವಾಗುತ್ತಿದೆ. ವಿದ್ಯಾರ್ಥಿಗಳ ಶುಲ್ಕದಿಂದ ವಾರ್ಷಿಕವಾಗಿ ₹70ರಿಂದ ₹75 ಕೋಟಿ ಸಂಗ್ರಹವಾಗುತ್ತಿದೆ. ಇದಲ್ಲದೆ, ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕವನ್ನೂ ಕೂಡ ಸಂಗ್ರಹಿಸಲಾಗುತ್ತಿದೆ. ಇದನ್ನೂ ಸೇರಿಸಿದರೆ ವಿಟಿಯು ವಾರ್ಷಿಕವಾಗಿ ₹2ರಿಂದ ₹3 ಕೋಟಿ ಹಣ ಇನ್ನೂ ಕಡಿಮೆಯಾಗುತ್ತದೆ. ಇನ್ನುಳಿದಂತೆ ವಾರ್ಷಿಕವಾಗಿ ಅಭಿವೃದ್ಧಿ ಕಾರ್ಯಗಳು, ನಾನಾ ಕಾರ್ಯಕ್ರಮಗಳನ್ನು ಜರುಗಿಸಲು ಸರ್ಕಾರ ಯಾವುದೇ ಅನುದಾನವನ್ನು ಕೂಡ ನೀಡುತ್ತಿಲ್ಲ. ಇದರಿಂದಾಗಿ ವಿಟಿಯು ಅಭಿವೃದ್ಧಿಗೆ ಹಿನ್ನಡೆಯಾಗಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆಗೊಂಡು 26 ವರ್ಷಗಳಾಗಿವೆ. ತನ್ನ ಆರ್ಥಿಕ ಮೂಲವನ್ನು ವಿಟಿಯು ತಾನೇ ಸೃಷ್ಟಿಸಿಕೊಳ್ಳಬೇಕೆಂಬ ನಿಯಮ ಯುಜಿಸಿಯಲ್ಲೂ ಇಲ್ಲ. ಆದರೆ, ಸರ್ಕಾರ ವೇತನ ಅನುದಾನ ನೀಡುತ್ತಿಲ್ಲ. ತನ್ನ ಆಂತರಿಕ ಆದಾಯದ ಮೂಲದಿಂದಲೇ ವಿಟಿಯು ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಹಾಗೂ ಕೌಶಲ್ಯಭರಿತ ನಾಗರಿಕರನ್ನಾಗಿ ಮಾಡಿ ವಿಕಸಿತ ಭಾರತಕ್ಕೆ ಒಂದು ದೊಡ್ಡ ಕೊಡುಗೆಯನ್ನು ನೀಡಬೇಕು ಎನ್ನುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಅನುಷ್ಠಾನ ಮಾಡಿದೆ.
- ಪ್ರೊ.ಎಸ್.ವಿದ್ಯಾಶಂಕರ, ಕುಲಪತಿ, ವಿಟಿಯು