ಮದ್ಯ, ಮಾದಕ ವ್ಯಸನಿಗಳಾಗುವ ಮೊದಲೇ ಎಚ್ಚೆತ್ತುಕೊಳ್ಳಿ: ಎಂ.ಕೆ. ಸವಿತಾ

| Published : Mar 07 2025, 11:45 PM IST

ಮದ್ಯ, ಮಾದಕ ವ್ಯಸನಿಗಳಾಗುವ ಮೊದಲೇ ಎಚ್ಚೆತ್ತುಕೊಳ್ಳಿ: ಎಂ.ಕೆ. ಸವಿತಾ
Share this Article
  • FB
  • TW
  • Linkdin
  • Email

ಸಾರಾಂಶ

ಮದ್ಯ ಮತ್ತು ಮಾದಕ ವ್ಯಸನಿಗಳಾಗುವ ಮೊದಲೇ ಎಚ್ಚೆತ್ತುಕೊಳ್ಳಿ. ಒಂದು ಸಾರಿ ಈ ಚಟಕ್ಕೆ ಒಳಗಾದರೆ ಇದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಇಡೀ ನಿಮ್ಮ ಬದುಕನ್ನೇ ನಾಶದ ಅಂಚಿಗೆ ಕರೆದುಕೊಂಡು ಹೋಗುತ್ತದೆ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಮದ್ಯ ಮತ್ತು ಮಾದಕ ವ್ಯಸನಿಗಳಾಗುವ ಮೊದಲೇ ಎಚ್ಚೆತ್ತುಕೊಳ್ಳಿ. ಒಂದು ಸಾರಿ ಈ ಚಟಕ್ಕೆ ಒಳಗಾದರೆ ಇದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಇಡೀ ನಿಮ್ಮ ಬದುಕನ್ನೇ ನಾಶದ ಅಂಚಿಗೆ ಕರೆದುಕೊಂಡು ಹೋಗುತ್ತದೆ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಎಚ್ಚರಿಸಿದರು.

ನಗರದ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದಷ್ಪರಿಣಾಮ ಕುರಿತ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಹದಿಹರಿಯದ ವಯಸ್ಸನ್ನು ದಾಟಿ ನೀವು ಮುಂದೆ ಹೋಗುತ್ತಿರುವುದರಿಂದ ಇದನ್ನು ಮಾಡಬೇಡಿ, ಅದನ್ನು ಮಾಡಬೇಡಿ ಎಂದು ಹೇಳಿಸಿಕೊಳ್ಳಬೇಕಾದ ವಯಸ್ಸಲ್ಲ. ಅದರಿಂದ ನಿಮಗೆ ನೀವೇ ಮನವರಿಕೆಯಾಗಿ ಪ್ರೇರೇಪಿತರಾಗಬೇಕು. ನಾವು ಯಾವ ಯಾವ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು, ಕಲಿಯಬೇಕು ಎಂಬುದನ್ನು ನೀವೇ ಮನಗಾಣುತ್ತಾ ಹೋಗುವಂತಹ ವಯಸ್ಸು ಇದು ಎಂದರು.

ವಿದ್ಯಾರ್ಥಿಗಳ ಮೇಲೆ ಮದ್ಯ ಹಾಗೂ ಮಾದಕ ವಸ್ತುಗಳು ಬೀರುವ ಪರಿಣಾಮದಿಂದ ಡ್ರಿಂಕ್ಸ್, ಡ್ರಗ್ಸ್, ಅದನೆಲ್ಲಾ ಮೀರಿದ ಮೊಬೈಲ್ ಅಡಿಕ್ಷನ್ ಎಂಬುದು ಪ್ರಾರಂಭವಾಗಿದೆ. ಮೊಬೈಲ್ ಬಳಕೆ ಎಂಬುದು ಒಂದು ವ್ಯಸನ ಎಂದರೆ ತಪ್ಪಾಗುವುದಿಲ್ಲ. ಯಾರಾದರೂ ಮದ್ಯ ವ್ಯಸನಿ ಡ್ರಗ್ಸ್ ವ್ಯಸನಿ ಆಗುತ್ತಿದ್ದಾರೆ ಎಂದರೆ ಸಾಕಷ್ಟು ಕಾರಣಗಳು ಇರುತ್ತದೆ. ನಾವು ಮಾಡುವಂತಹ ಸಂಗಗಳು ಹವ್ಯಾಸಗಳು, ನಮ್ಮಲ್ಲಿ ಬಹಳ ಪ್ರೇರೇಪಣೆಯಾಗಿರುತ್ತದೆ. ಯಾವುದನ್ನು ಕಣ್ಣಿನಲ್ಲಿ ನೋಡುತ್ತೀರಿ ಅದರಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳುವುದಿಲ್ಲ, ಕೆಟ್ಟದ್ದನ್ನೇ ಮೊದಲು ಆರಿಸುವಲ್ಲಿ ಮುಂದಾಗುತ್ತಿರ. ಅದು ನಿಮ್ಮ ಮನಸ್ಸಿಗೆ ಬೇಗ ಅಂಟಿಕೊಳ್ಳುತ್ತಿದೆ ಎಂದು ಹೇಳಿದರು.

ನಾವು ಒಂದು ಒಳ್ಳೆಯ ಪರಿಸರ, ವಾತಾವರಣ ಬೆಳೆದಿದ್ದರೆ ಇಂತಹ ಕೆಟ್ಟ ಅಭ್ಯಾಸಗಳು, ವ್ಯಸನಗಳು ನಮ್ಮ ಹತ್ತಿರ ಬರುವುದಿಲ್ಲ. ನಾವು ಎಲ್ಲೆ ಇದ್ದರೂ ಮಾದರಿಯಾಗಿ ತೆಗೆದುಕೊಳ್ಳಬೇಕು, ಒಳ್ಳೆಯದನ್ನು ಅನುಸರಿಸಬೇಕು, ಒಳ್ಳೆಯ ದಾರಿಯಲ್ಲಿ ಹೋಗುತ್ತಿರುವವರನ್ನು ಅನುಸರಿಸಬೇಕು ಎಂದು ತಿಳಿಸಿದರು.

ನಗರ ಸಂಚಾರ ಉಪ ವಿಭಾಗದ ಎಸಿಪಿ ಶಿವಶಂಕರ್ ಮಾತನಾಡಿ, ಮಾದಕ ವಸ್ತುಗಳಿಗೆ ಯಾಕೆ ವಿದ್ಯಾರ್ಥಿಗಳು ವ್ಯಸನ ಆಗುತ್ತಿದ್ದಾರೆ ಎಂದರೆ ನಮ್ಮ ಜಿಲ್ಲೆಗಳಿಗೆ ಓದುವುದಕ್ಕೆ ಬಂದಂತಹ ವಿದ್ಯಾರ್ಥಿಗಳಿಗೆ ಅವರ ಬಳಿ ಹೆಚ್ಚು ಹೆಚ್ಚು ಹಣ ಸಿಗುತ್ತದೆ ಹಾಗೂ ಅವರ ಬಳಿಯಲ್ಲಿ ಪೋಷಕರು ಇರುವುದಿಲ್ಲ. ಆದ ಕಾರಣ ಮಾದಕಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ವ್ಯಸನಿಗಳು ಜೊತೆಯಲ್ಲಿ ಇರುವಂತಹ ಸ್ನೇಹಿತರನ್ನು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕುಮಾರಸ್ವಾಮಿ ಮಾತನಾಡಿ, ಮಾನಸಿಕವಾಗಿ, ದೈಹಿಕವಾಗಿ, ಆಧ್ಯಾತ್ಮಿಕವಾಗಿ ಆರೋಗ್ಯವಾಗಿ ಇರಬೇಕು. ಮಾದಕ ವ್ಯಸನಗಳಿಗೆ ಒಳಗಾದ ಸಂದರ್ಭದಲ್ಲಿ ನಾವು ಮುಖ್ಯವಾಗಿ ಒಳ್ಳೆಯ ವಿಚಾರಗಳನ್ನು ಮನನ ಮಾಡಿಕೊಳ್ಳಬೇಕು. ನಾವು ಯಾರ ಜೊತೆ ಸಂಗವನ್ನು ಬೆಳೆಸಿಕೊಳ್ಳುತ್ತೇವೆ. ಸ್ನೇಹಿತರ ವಲಯ ಹೇಗಿರುತ್ತದೆ. ಅದರ ಮೇಲೆ ನಮ್ಮ ಮುಂದಿನ ಅಭ್ಯಾಸಗಳು ಹಾಗೂ ನಾವು ಮಾಡುವ ಸಾಧನೆಗಳ ರೂಪುರೇಷೆಗಳು ಗುರುತಾಗುತ್ತವೆ ಎಂದು ಹೇಳಿದರು.

ಕೆ.ಆರ್. ಆಸ್ಪತ್ರೆ ಮನೋರೋಗ ತಜ್ಞ ಡಾ.ಬಿ.ಎನ್. ರವೀಶ್, ಪತ್ರಕರ್ತ ಎಸ್.ಟಿ. ರವಿಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್, ಯುವರಾಜ ಕಾಲೇಜಿನ ಆಡಳಿತಾಧಿಕಾರಿ ಡಾ. ಅಜಯ್ ಕುಮಾರ್ ಮೊದಲಾದವರು ಇದ್ದರು.

ಡ್ರಗ್ಸ್ ನಮ್ಮ ಮೆದುಳಿನ ಮೇಲೆ ದುಷ್ಪರಿಣಾಮ ಬೀರುವಂತಹದ್ದು, ಇದು ವ್ಯಸನವಾಗುವಂತಹದ್ದು, ಅಂದರೆ ನಮ್ಮ ದೇಹ ಮತ್ತು ಮೆದುಳಿಗೆ ದುಷ್ಪರಿಣಾಮ ಬೀರುವಂತಹ ಯಾವುದೇ ವಸ್ತುವನ್ನು ಮಾದಕ ವಸ್ತು ಎಂದು ಕರೆಯುತ್ತೇವೆ. ಯುವ ಜನರಲ್ಲಿ ಕುತೂಹಲ ಜಾಸ್ತಿ. ಏನು ಮಾಡಬೇಡ ಎನ್ನುತಾರೋ, ಅದನ್ನು ಮಾಡುವಂತಹ ಕುತೂಹಲ ಹೆಚ್ಚಾಗಿದೆ. ಹೀಗಾಗಿ, ಯುವಜನತೆ ಒಳ್ಳೆಯ ಅಬ್ಯಾಸಗಳನ್ನು ರೂಪಿಸಿಕೊಳ್ಳಬೇಕು.

- ಡಾ.ಬಿ.ಎನ್. ರವೀಶ್, ಮನೋರೋಗತಜ್ಞ, ಕೆ.ಆರ್. ಆಸ್ಪತ್ರೆ