ಕಾರ್ಮಿಕರನ್ನು ಅಲೆದಾಡಿಸುವುದು ಸಲ್ಲದು

| Published : Oct 02 2024, 01:04 AM IST

ಕಾರ್ಮಿಕರನ್ನು ಅಲೆದಾಡಿಸುವುದು ಸಲ್ಲದು
Share this Article
  • FB
  • TW
  • Linkdin
  • Email

ಸಾರಾಂಶ

ನರೇಗಾ ಅಡಿಯಲ್ಲಿ ಸರ್ಕಾರ ಅನೇಕ ಯೋಜನೆಗಳ ಮೂಲಕ ಉದ್ಯೋಗವನ್ನು ಕಾರ್ಮಿಕರಿಗೆ ನೀಡಲಾಗುತ್ತಿದೆ.

ಹರಪನಹಳ್ಳಿ: ಇಡಿ ವಿಶ್ವವೇ ನಿಂತಿರುವುದು ಕಾರ್ಮಿಕರಿಂದ. ಸರ್ಕಾರಿ ಅಧಿಕಾರಿಗಳು ಸಹ ಕಾರ್ಮಿಕರಾಗಿದ್ದು, ಸರ್ಕಾರದ ನೀತಿ, ನಿಯಮಗಳಿಗೆ ಅನುಗುಣವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲಿ ಎಂದು ತಾಪಂ ಇಒ ವೈ.ಚಂದ್ರಶೇಖರ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ರಾಜೀವಗಾಂಧಿ ಸಭಾಂಗಣದಲ್ಲಿ ಹರಪನಹಳ್ಳಿ ತಾಲೂಕು ಉದ್ಯೋಗದಾತರಿಗೆ, ಹೊರಗುತ್ತಿಗೆ ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ಕಾನೂನುಗಳ, ಯೋಜನೆಗಳ ಕುರಿತು ತಾಲೂಕು ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ನರೇಗಾ ಅಡಿಯಲ್ಲಿ ಸರ್ಕಾರ ಅನೇಕ ಯೋಜನೆಗಳ ಮೂಲಕ ಉದ್ಯೋಗವನ್ನು ಕಾರ್ಮಿಕರಿಗೆ ನೀಡಲಾಗುತ್ತಿದೆ. ಯಾರು ಅರ್ಹ ಕಾರ್ಮಿಕರು ಇರುತ್ತಾರೆ. ಅವರಿಗೆ ಸೌಲಭ್ಯ ದೊರಕುವಂತೆ ಮಾಡುತ್ತೇವೆ ಎಂದು ಹೇಳಿದರು.

ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಹಂತ ಹಂತವಾಗಿ ಈಡೇರಿಸಲಿದೆ, ಕಾರ್ಮಿಕರಿಗೆ ಪಿಎಫ್ ವ್ಯವಸ್ಥೆಯನ್ನು ಕಲ್ಪಿಸಿದೆ ಎಂದ ಅವರು ಯಾವುದೇ ಇಲಾಖೆಯಿಂದ ಕಾರ್ಮಿಕರನ್ನು ಅಲೆದಾಡಿಸದೇ ಅವರ ಕೆಲಸಗಳಿಗೆ ಸ್ಪಂದಿಸಿ ಎಂದರು.

ಜಿಲ್ಲಾ ಕಾರ್ಮಿಕ ನೀರಿಕ್ಷಕ ಸೂರಪ್ಪ ಡೊಂಬರ್‌ ಮತ್ತೂರು ಮಾತನಾಡಿ, ಕಾರ್ಮಿಕ ಇಲಾಖೆಯಿಂದ ವಿವಿಧ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕರು ಕಡ್ಡಾಯವಾಗಿ ನೋಂದಾಯಿತ ಕಾರ್ಡ್ ಹೊಂದಿರತಕ್ಕದ್ದು. ಕಾರ್ಮಿಕರು ಹೆಚ್ಚಿನ ರೀತಿಯಲ್ಲಿ ಇ-ಶ್ರಮ ಕಾರ್ಡ್‌ಗಳನ್ನು ಪಡೆದುಕೊಂಡಿಲ್ಲ. ಕಟ್ಟಡ ಕಾರ್ಮಿಕರು ಹೊರತುಪಡಿಸಿ ಉಳಿದ 23 ವಲಯದ ಕಾರ್ಮಿಕರು ಇ-ಶ್ರಮ ಕಾರ್ಡ್‌ಗಳನ್ನು ನೋಂದಣಿ ಮಾಡಿಸಿಕೊಳ್ಳಬೇಕು. ಇದರಿಂದ ಅಪಘಾತ ವಿಮೆ, ಮರಣ ಪರಿಹಾರ ದೊರೆಯಲಿದೆ ಎಂದರು.

ಈಗಾಗಲೇ ರಾಜ್ಯದಲ್ಲಿ 50 ಲಕ್ಷ ಹೆಚ್ಚು ಕಾರ್ಮಿಕರು ನೋಂದಣಿ ಮಾಡಿಸಿದ್ದು, ಇದರಲ್ಲಿ 20 ಸಾವಿರ ಅನರ್ಹ ನೋಂದಾಯಿತ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಅನರ್ಹರು ಕಾರ್ಮಿಕ ಕಾರ್ಡ್‌ ನೋಂದಣಿ ಮಾಡಿಸಿದಲ್ಲಿ ಅಂತವರ ಮೇಲೆ ಸೂಕ್ತ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.

ನೋಂದಾಯಿತ ಕಾರ್ಮಿಕರಿಗೆ ಇಲಾಖೆಯಿಂದ ಸಹಜ ಸಾವು ಸಂಭವಿಸಿದರೆ ₹10 ಸಾವಿರ ನೀಡಲಾಗುವುದು. ಇಲಾಖೆಯಿಂದ ಶ್ರಮ ಸಮ್ಮಾನ ಯೋಜನೆ ಅಡಿಯಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಕಾರ್ಮಿಕ ನೀರಿಕ್ಷಕರಾದ ಶಿವಶಂಕರ.ಬಿ.ತಳವಾರ, ಗೋಪಾಲ ಬ ಧೂಪದ, ಎಂ.ಅಶೋಕ, ಮಂಜುಳಾ ಮಾತನಾಡಿದರು.

ಕಾರ್ಮಿಕ ಇಲಾಖೆಯ ಸಿಬ್ಬಂದಿ ಡಿ.ಒ. ಅಶ್ವಿನಿ ವೈ.ಟಿ, ಮಂಜುನಾಥ ಎಚ್. ಕಾರ್ಮಿಕ ಸಂಘಟನೆಯ ಮುಖಂಡರಾದ ಗುಡಿಹಳ್ಳಿ ಹಾಲೇಶ್, ವೆಂಕಟೇಶ್, ಲಕ್ಷಣ ಕೊಟ್ರೇಶ್ ಬಳಿಗನೂರು ಸೇರಿದಂತೆ ಕಾರ್ಮಿಕರು, ಇತರರು ಇದ್ದರು.

ಹರಪನಹಳ್ಳಿ ಪಟ್ಟಣದ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಕಾರ್ಮಿಕರಿಗೆ ತಾಲೂಕು ಮಟ್ಟದ ಕಾರ್ಯಾಗಾರವನ್ನು ತಾಪಂ ಇಒ ವೈ.ಚಂದ್ರಶೇಖರ ಉದ್ಘಾಟಿಸಿದರು.