ಕೆರೆ ಜಾಗ ಮಸೀದಿ ಪದಾಧಿಕಾರಿಗಳ ಹೆಸರಿಗೆ

| Published : Nov 17 2024, 01:21 AM IST

ಸಾರಾಂಶ

ಸರ್ಕಾರಿ ಕೆರೆ ಜಾಗವನ್ನು ಅನಧಿಕೃತವಾಗಿ ವಕ್ಫ್ ಬೋರ್ಡ್‌ ಪಟ್ಟಾ ಮಸೀದಿ ಪದಾಧಿಕಾರಿಗಳ ಹೆಸರಿಗೆ ಖಾತೆ ಮಾಡಿರುವುದನ್ನ ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ವಕ್ಫ್‌ ಬೋರ್ಡ್‌ಗೆ ಖಾತೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಧಿಕಾರಿಗಳ ನಡೆಯ ವಿರುದ್ಧ ಪ್ರತಿಭಟನಾ ನಿರತರು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣದ ಹೃದಯಭಾಗದಲ್ಲಿನ ಸರ್ಕಾರಿ ಕೆರೆ ಜಾಗವನ್ನು ಅನಧಿಕೃತವಾಗಿ ವಕ್ಫ್ ಬೋರ್ಡ್‌ ಪಟ್ಟಾ ಮಸೀದಿ ಪದಾಧಿಕಾರಿಗಳ ಹೆಸರಿಗೆ ಖಾತೆ ಮಾಡಿರುವುದನ್ನ ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಹೊಳೆನರಸೀಪುರ-ಅರಕಲಗೂಡು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಸರ್ವೆ ನಂ 120ರಲ್ಲಿ ನಾಲ್ಕು ಎಕರೆ ಹತ್ತು ಗುಂಟೆ ಪ್ರದೇಶವನ್ನು ಅಂದಿನ ಉಪವಿಭಾಗಾಧಿಕಾರಿಯವರು ಏಕಾಏಕಿ ಮಸೀದಿ ಪದಾಧಿಕಾರಿಗಳ ಖಾತೆ ಮಾಡಿರುವುದು ಕಾನೂನು ಬಾಹಿರವಾಗಿದೆ. ಈ ಸ್ಥಳವು ತಲತಲಾಂತರದಿಂದಲೂ ಸರ್ಕಾರಿ ಕೆರೆಯಾಗಿದ್ದು, ಈ ಸ್ಥಳದಲ್ಲಿ ಪ್ರತೀ ವರ್ಷ ಸುತ್ತ ಮುತ್ತಲಿನ ಜನರು ಗೌರಿ ವಿಸರ್ಜನೆ ಮಾಡುತ್ತಾ ಬರುತ್ತಿದ್ದಾರೆ. ಇಂತಹ ಪವಿತ್ರ ಸ್ಥಳವನ್ನ ಈಗ ವಕ್ಫ್‌ ಬೋರ್ಡ್‌ಗೆ ಖಾತೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಧಿಕಾರಿಗಳ ನಡೆಯ ವಿರುದ್ಧ ಪ್ರತಿಭಟನಾ ನಿರತರು ಕಿಡಿಕಾರಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಯೋಗಣ್ಣ, ರಾಜ್ಯ ಸರ್ಕಾರ ಸರ್ಕಾರಿ ಕೆರೆಗಳು ಹಾಗೂ ಅರಣ್ಯ ಭೂಮಿ ರಕ್ಷಣೆಗೆ ಕಾನೂನು ಕ್ರಮ ಕೈಗೊಂಡಿದೆ. ಸರ್ಕಾರಿ ಕೆರೆಯನ್ನು ಮಸೀದಿ ಪದಾಧಿಕಾರಿಗಳಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಲಾಗಿದೆ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಹಿಂದಿನ ದಾಖಲೆಗಳನ್ನು ಪರಿಶೀಲನೆ ನಡೆಸಿ ಸರ್ಕಾರಿ ಕೆರೆಯನ್ನು ಸಾರ್ವಜನಿಕವಾಗಿ ಉಳಿಸಬೇಕಿದೆ ಎಂದು ಒತ್ತಾಯಿಸಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಹೊನ್ನವಳ್ಳಿ ಭುವನೇಶ್ ಮಾತನಾಡಿ, ಅಕ್ರಮವಾಗಿ ಮಾಡಿರುವ ಕೆರೆ ಜಾಗದ ಖಾತೆಯನ್ನು ರದ್ದುಗೊಳಿಸಬೇಕಿದೆ. ಈ ಸಂಬಂಧ ಜಿಲ್ಲಾಧಿಕಾರಿಯವರ ನ್ಯಾಯಾಲದಲ್ಲಿ ಪ್ರಕರಣವಿದ್ದು, ಕೂಡಲೇ ಕಾನೂನು ರೀತಿ ಎಲ್ಲಾ ಸಮಾಜದವರ ಒಳಿತಿಗಾಗಿ ಸರ್ಕಾರಿ ಕೆರೆ ಜಾಗವನ್ನು ಸಾರ್ವಜನಿಕ ಉದ್ದೇಶ, ನೀರು ನಿಲ್ಲುವಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಕಲೇಶಪುರ ಉಪ ವಿಭಾಗಾಧಿಕಾರಿ ಶೃತಿ ಅವರು, ಈ ಹಿಂದೆ ಖಾತೆಯಾಗಿದೆ. ಅಲ್ಲದೆ ಈ ಪ್ರಕರಣ ಜಿಲ್ಲಾಧಿಕಾರಿಯವರ ನ್ಯಾಯಾಲದಲ್ಲಿದೆ. ಈ ಹಂತದಲ್ಲಿ ಯಾವುದೇ ರೀತಿಯ ಕಾನೂನು ಪರಿಮಿತಿಯ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಈ ವಿಷಯ ಕುರಿತು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.ಪ್ರತಿಭಟನಾನಿರತ ರೈತರು ಎಸಿ ಶೃತಿ ಮತ್ತು ತಹಸೀಲ್ದಾರ್‌ ಸೌಮ್ಯ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಜಗದೀಶ್, ಮಂಜೇಗೌಡ, ಹಲಗಣ್ಣ, ಕೃಷ್ಣೇಗೌಡ, ರಮೇಶ್, ಗುಂಡಣ್ಣ, ನಾಗರಾಜು, ರವಿ, ಹೊಂಬೆಗೌಡ, ಲಕ್ಷ್ಮಮ್ಮ, ಸ್ವಾಮಿ ಇತರರು ಇದ್ದರು.

* ಹೇಳಿಕೆ-1

ಸರ್ಕಾರಿ ಕೆರೆಯನ್ನು ಮಸೀದಿ ಪದಾಧಿಕಾರಿಗಳಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಲಾಗಿದೆ. ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಹಿಂದಿನ ದಾಖಲೆಗಳನ್ನು ಪರಿಶೀಲನೆ ನಡೆಸಿ ಸರ್ಕಾರಿ ಕೆರೆಯನ್ನು ಸಾರ್ವಜನಿಕವಾಗಿ ಉಳಿಸಬೇಕಿದೆ.

- ಯೋಗಣ್ಣ, ರೈತ ಸಂಘದ ಅಧ್ಯಕ್ಷ