ಸಾರಾಂಶ
ಧಾರವಾಡ ಜಿಲ್ಲೆಯ ಮುಸ್ಲಿಂ ಸಮುದಾಯದ ಅನೇಕ ಸಣ್ಣ ರೈತರ ಜಮೀನಿನ ಪಹಣಿಗಳಿಗೂ ಈ ವಕ್ಫ್ ಹೆಸರು ಸೇರ್ಪಡೆಯಾಗಿದ್ದು ಅವರಲ್ಲೂ ಆತಂಕ ಸೃಷ್ಟಿಯಾಗಿದೆ. ಆ ಮೂಲಕ ಮುಸ್ಲಿಂ ಸಮಾಜ ಸಹ ತಮ್ಮದೇ ವಕ್ಫ್ ಮಂಡಳಿ ವಿರುದ್ಧ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಧಾರವಾಡ: ಪ್ರಸ್ತುತ ರಾಜ್ಯದಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ಗೊಂದಲ ಸೃಷ್ಟಿಸಿದೆ. ಈವರೆಗೂ ಜಿಲ್ಲೆಯಲ್ಲಿ ಕೇವಲ ಹಿಂದೂಗಳ ಜಮೀನಿಗೆ ಮಾತ್ರ ಈ ಸಮಸ್ಯೆ ಅಂಟಿಕೊಂಡಿದೆ ಅಂದುಕೊಳ್ಳಲಾಗಿತ್ತು. ಇದೀಗ ವಕ್ಫ್ ಬೋರ್ಡ್ ಹೆಸರು ಮುಸ್ಲಿಮರ ಆಸ್ತಿಗಳಲ್ಲೂ ಅಚ್ಚು ಒತ್ತಿದೆ.
ಜಿಲ್ಲೆಯ ಮುಸ್ಲಿಂ ಸಮುದಾಯದ ಅನೇಕ ಸಣ್ಣ ರೈತರ ಜಮೀನಿನ ಪಹಣಿಗಳಿಗೂ ಈ ವಕ್ಫ್ ಹೆಸರು ಸೇರ್ಪಡೆಯಾಗಿದ್ದು ಅವರಲ್ಲೂ ಆತಂಕ ಸೃಷ್ಟಿಯಾಗಿದೆ. ಆ ಮೂಲಕ ಮುಸ್ಲಿಂ ಸಮಾಜ ಸಹ ತಮ್ಮದೇ ವಕ್ಫ್ ಮಂಡಳಿ ವಿರುದ್ಧ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ನವಲಗುಂದ ಪಟ್ಟಣದ ಮುಸ್ಲಿಂ ಸಮುದಾಯದ 20ಕ್ಕೂ ಹೆಚ್ಚು ರೈತರ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ದಾಖಲಾಗಿದೆ.
ಜಿಲ್ಲೆಯಲ್ಲಿ ಮೊದಲು ಉಪ್ಪಿನ ಬೆಟಗೇರಿ ಹಾಗೂ ಗರಗ ಗ್ರಾಮಗಳಲ್ಲಿನ ರೈತರ ಜಮೀನುಗಳಲ್ಲಿನ ಪಹಣಿ ಪತ್ರದಲ್ಲಿ ವಕ್ಫ್ ಬೋರ್ಡ್ ಹೆಸರು ದಾಖಲಾಗಿದ್ದು ಬಯಲಿಗೆ ಬಂದಿತ್ತು. ಈ ಸಂಬಂಧ ರೈತರು ಪ್ರತಿಭಟನೆ ಮಾಡಿದ ಪರಿಣಾಮ ನವೆಂಬರ್ 5ರಂದು ಧಾರವಾಡ ತಹಸೀಲ್ದಾರ್ ವಕ್ಫ್ ಅಧಿಕಾರಿಗಳ ಮತ್ತು ರೈತರ ಮಧ್ಯೆ ಸಭೆ ನಡೆಸಲು ಮುಂದಾಗಿದ್ದಾರೆ. ಹೀಗೆ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವ ರೈತರೆಲ್ಲ ಹಿಂದೂಗಳು ಆಗಿರುವ ಕಾರಣಕ್ಕೆ ಇದು ಹಿಂದೂ ರೈತರ ಜಮೀನು ಕಸಿದುಕೊಳ್ಳುವ ಹುನ್ನಾರ ಎನ್ನಲಾಗಿತ್ತು. ಆದರೆ, ಈ ಮಧ್ಯೆ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಮುಸ್ಲಿಂ ಸಮುದಾಯದ ಸಣ್ಣಪುಟ್ಟ ರೈತರ ಜಮೀನುಗಳ ಮೇಲೆಯೂ ವಕ್ಫ್ ಪ್ರಹಾರ ಮಾಡಿದೆ.
ನವಲಗುಂದ ತಾಲೂಕಿನ ಬೆಣ್ಣೆಹಳ್ಳದ ಪಕ್ಕದಲ್ಲಿರುವ ಸರ್ವೆ ನಂಬರ್ 3ರ ಹಿಸ್ಸಾ ನಂಬರ್ 3ರಲ್ಲಿರುವ ಅನೇಕ ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ದಾಖಲಾಗಿದೆ. ಮುಸ್ಲಿಂ ಸಮುದಾಯದ ಹುನಗುಂದ ಎಂಬ ಕುಟುಂಬವು 1961ರಲ್ಲಿಯೇ ಈ ಜಮೀನು ಖರೀದಿ ಮಾಡಿದ್ದು, ಸಹೋದರರ ಮಧ್ಯೆ ಇತ್ತೀಚೆಗೆ ವ್ಯಾಜ್ಯ ಉಂಟಾಗಿತ್ತು. ಹೀಗಾಗಿ ಇದು ಕೋರ್ಟ್‌ಗೆ ಹೋಗಿ, ಅಲ್ಲಿ ವಿಚಾರಣೆ ನಡೆದಿತ್ತು.
ಅಚ್ಚರಿಯ ಸಂಗತಿಯೆಂದರೆ ವ್ಯಾಜ್ಯ ಕೋರ್ಟ್‌ನಲ್ಲಿದ್ದಾಗಲೇ 2018ರಲ್ಲಿ ವಕ್ಫ್ ಆಸ್ತಿ ಎಂದು ದಾಖಲು ಮಾಡಲಾಗಿದೆ. ವ್ಯಾಜ್ಯದ ವಿಚಾರಣೆ ನ್ಯಾಯಾಲಯದಲ್ಲಿರುವಾಗ ಪಹಣಿಯಲ್ಲಿ ಯಾವುದೇ ಬದಲಾವಣೆ, ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಆದರೂ ಅಧಿಕಾರಿಗಳು ಈ ಪಹಣಿಯಲ್ಲಿನ 11ನೇ ಕಲಂನಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿದ್ದಾರೆ.
ಇತ್ತೀಚಿಗಷ್ಟೇ ಈ ಹೊಲದ ವಿಚಾರಣೆ ಮುಗಿದಿತ್ತು. ಈ ವೇಳೆ ತಮ್ಮ ಹೊಲದ ಪಹಣಿಯನ್ನು ತೆಗೆದುಕೊಂಡಾಗಲೇ ಅದರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಮಾಲೀಕರಿಗೆ ತಿಳಿದು ಬಂದಿದೆ. ಇದರಿಂದಾಗಿ ಆಘಾತಗೊಂಡಿರುವ ಮಾಲೀಕರು ಜಿಲ್ಲಾಧಿಕಾರಿ ಮೊರೆ ಹೋಗಿದ್ದಾರೆ. ವಕ್ಫ್ ಆಸ್ತಿಯು ಕಬಳಿಕೆ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಬರೀ ವಕ್ಫ್ ಮಾತ್ರವಲ್ಲದೇ ಮುಜರಾಯಿ ಇಲಾಖೆ ಜಾಗ ಕಬಳಿಕೆ ಆಗಿದೆ ಎಂಬ ಮಾಹಿತಿ ಇದೆ. ಇದಲ್ಲದೇ, ಕಂದಾಯ ಇಲಾಖೆ ಹಾಗೂ ಬಿಡಿಎ ನಿವೇಶನಗಳು ಕಬಳಿಕೆ ಆಗಿವೆ. ಹೀಗಾಗಿ ನೋಟಿಸ್ ಕೊಡಲಾಗಿದೆ. ಇದಕ್ಕಾಗಿಯೇ ನ್ಯಾಯಾಧಿಕರಣ ಇದ್ದು, ಅದು ಪರಿಹಾರ ಒದಗಿಸಲಿದೆ. ಅಲ್ಲಿಯ ವರೆಗೂ ರೈತರು ಸಮಾಧಾನದಿಂದ ವರ್ತಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.