ಭೂಮಿ ಖರೀದಿ ಮಾಡಿದವರಿಗೆ ವಕ್ಫ್ ಭಯ!

| Published : Nov 01 2024, 12:14 AM IST

ಸಾರಾಂಶ

ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ವಕ್ಫ್ ಆಸ್ತಿ ವಿವಾದ ಬಯಲಿಗೆ ಬರುತ್ತಿದ್ದು, ಪ್ರಮುಖ ಕೇಂದ್ರವಾದ ನವಲಿ ಹೋಬಳಿಯಲ್ಲಿ 50 ರೈತರಿಗೆ ವಕ್ಫ್ ನೋಟಿಸ್ ಬಂದಿದೆ.

ನವಲಿ ಹೋಬಳಿಯಲ್ಲಿ 50 ರೈತರಿಗೆ ವಕ್ಫ್ ನೋಟಿಸ್, ರೈತ ಸಮುದಾಯ ಸಂಕಷ್ಟಕ್ಕೆ

ರಾಮಮೂರ್ತಿ ನವಲಿ

ಕನ್ನಡಪ್ರಭ ವಾರ್ತೆ ಗಂಗಾವತಿ

ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೂ ವಕ್ಫ್ ಆಸ್ತಿ ವಿವಾದ ಬಯಲಿಗೆ ಬರುತ್ತಿದ್ದು, ಪ್ರಮುಖ ಕೇಂದ್ರವಾದ ನವಲಿ ಹೋಬಳಿಯಲ್ಲಿ 50 ರೈತರಿಗೆ ವಕ್ಫ್ ನೋಟಿಸ್ ಬಂದಿದೆ.

1974ರಿಂದ 50 ರೈತರು ನೂರಾರು ಎಕರೆ ಪ್ರದೇಶದಲ್ಲಿ ಕೃಷಿ ಉಳಿಮೆ ಮಾಡುತ್ತಾ ಬಂದಿದ್ದಾರೆ. ಆದರೆ ಈಚೆಗೆ ಕಂದಾಯ ಇಲಾಖೆ ದೀಢಿರ್‌ನೆ ರೈತರ ಪಹಣಿಯಲ್ಲಿ ಕಾಲಂ 11ರಲ್ಲಿ ವಕ್ಫ್ ಹೆಸರು ನಮೂದಿಸಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ರೈತರಿಗೆ ಕಳೆದ ಐದು ತಿಂಗಳ ಹಿಂದೆ ನೋಟಿಸ್ ಜಾರಿಯಾಗಿದ್ದರೆ, ಇನ್ನು ಕೆಲವು ರೈತರಿಗೆ ಅ.10, 2024ಕ್ಕೆ ನೋಟಿಸ್ ಜಾರಿಯಾಗಿದೆ. ಕೆಲವರು ವಕ್ಫ್ ನೋಟಿಸ್ ತಿರಸ್ಕರಿಸಿದ್ದಾರೆ.

ವಕ್ಫ್ ಭಯ:

ನವಲಿ ಗ್ರಾಮದ ಬಳಿ ಸಮಾನಾಂತರ ಜಲಾಶಯ ಮತ್ತು ರೈಸ್ ಪಾರ್ಕ್ ನಿರ್ಮಾಣದ ಹಿನ್ನೆಲೆ ಹೊರಗಿನ ಜಿಲ್ಲೆಯವರು ನೂರಾರು ಎಕರೆ ಪ್ರದೇಶ ಭೂಮಿ ಖರೀದಿಸಿದ್ದಾರೆ. ಬಳ್ಳಾರಿ, ಹೊಸಪೇಟೆ, ಹೇರೂರು, ಕೊಪ್ಪಳ ಸೇರಿದಂತೆ ವಿವಿಧ ನಗರಗಳಿಂದ ಭೂಮಿ ಖರೀದಿಸಿದ್ದಾರೆ. ಖರೀದಿಸುವಾಗ ಪಹಣಿಯಲ್ಲಿ ಭೂಮಿ ಮಾಲೀಕರ ಹೆಸರು ನಮೂದಾಗಿತ್ತು. ಕಡಿಮೆ ದರದಲ್ಲಿ ಖರೀದಿ ಮಾಡಿದವರು ಈಗ ಪಹಣಿಯಲ್ಲಿ ಕಾಲಂ 11ರಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ಈಗಾಗಲೇ ರೈತರಿಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್ ಜಾರಿಯಾಗಿದ್ದರೆ, ಇನ್ನು ಕೆಲವರು ಖರೀದಿಸಿದ ಭೂಮಿ ರೈತರಿಂದ ವಕ್ಫ್ ಬೋರ್ಡಿಗೆ ವರ್ಗಾವಣೆ ಆಗಿದೆ.