ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ:ರಾಜ್ಯಾದ್ಯಂತ "ವಕ್ಫ್ ಆಸ್ತಿ " ವಿವಾದ ಭಾರೀ ಸದ್ದು ಮಾಡುತ್ತಿದೆ. ಇದರ ನಡುವೆಯೇ ಧಾರವಾಡ ಜಿಲ್ಲೆಯ ರೈತರೊಬ್ಬರು ತಮ್ಮ ಆಸ್ತಿ ಉಳಿಸಿಕೊಳ್ಳಲು 2022ರಲ್ಲೇ ಹೈಕೋರ್ಟ್ ಮೆಟ್ಟಿಲೇರಿದ್ದು ಬೆಳಕಿಗೆ ಬಂದಿದೆ. ವಕ್ಫ್ ಬೋರ್ಡ್‌ಗೂ ಹೈಕೋರ್ಟ್‌ನಿಂದ ನೋಟಿಸ್ ಹೋಗಿದೆ ಎಂದು ಮೂಲಗಳು ತಿಳಿಸಿವೆ.
ನವಲಗುಂದದ ಬೆಣ್ಣಿಹಳ್ಳಕ್ಕೆ ಹತ್ತಿಕೊಂಡೇ ಇರುವ ಆನೆಗುಂದಿ ಕುಟುಂಬದ 13 ಎಕರೆ ಜಮೀನು 2018-19ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದೆ. 1932ರಿಂದಲೇ ಇವರೇ ಮಾಲೀಕರಿದ್ದರೂ ಅದ್ಹೇಗೆ ವಕ್ಫ್ ಆಸ್ತಿ ಎಂದು ನಮೂದಾಗಿದೆ ಎಂದು ಪ್ರಶ್ನಿಸಿ ದಾಖಲೆ ಸಮೇತ ಈ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿದೆ.ಆನೆಗುಂದಿ ಕುಟುಂಬದ ಹಿರಿಕರು, ದೇಸಾಯಿ ಅವರಿಂದ 1932ರಲ್ಲಿ 13 ಎಕರೆ ಜಮೀನನ್ನು ಖರೀದಿಸಿದ್ದರು. ಅದು ಮುತ್ತಜ್ಜ, ಅಜ್ಜ, ತಂದೆ, ಇದೀಗ ಮಗ ಉಲ್ಲಾಸ ಮಾಧವರಾವ್ ಆನೆಗುಂದಿ ಅವರ ಹೆಸರಲ್ಲಿದೆ. 2018-19ರಲ್ಲಿ ವಕ್ಫ್ ಬೋರ್ಡ್ ನೋಟಿಫಿಕೇಶನ್ ಹೊರಡಿಸಿದ್ದರಲ್ಲಿ ಇವರ ಆಸ್ತಿ ಹೆಸರು ಕೂಡ ಇತ್ತು. ಅದು ಇವರಿಗೆ 2020ರಲ್ಲಿ ಪಹಣಿ ತೆಗೆದಾಗಲೇ ಗೊತ್ತಾಯಿತು. ಆ ಬಳಿಕ ಈ ಸಂಬಂಧ ಜಿಲ್ಲಾಧಿಕಾರಿ, ತಹಸೀಲ್ದಾರ್, ಜನಪ್ರತಿನಿಧಿಗಳ ಎಲ್ಲರ ಬಳಿ ಎಡತಾಕಿದ್ದಾರೆ. ಆದರೆ ಯಾರಿಂದಲೂ ಸಮರ್ಪಕ ಸ್ಪಂದನೆ ಸಿಕ್ಕಿಲ್ಲ. ತಹಸೀಲ್ದಾರ್ ಕಚೇರಿಯಲ್ಲಂತೂ ನೋಟಿಫಿಕೇಶನ್ ಹೊರಡಿಸಿದ್ದರ ಪರಿಣಾಮ ಹೆಸರು ನಮೂದಾಗಿದೆ. ಈ ಸಂಬಂಧ ಏನೇ ಇದ್ದರೂ ವಕ್ಫ್ ಬೋರ್ಡ್‌ಗೆ ಹೋಗಿ ಎಂದು ಅಧಿಕಾರಿ ವರ್ಗ ಸಾಗ ಹಾಕಿದೆ. ಜಿಲ್ಲಾಧಿಕಾರಿ, ಶಾಸಕರು, ಜನಪ್ರತಿನಿಧಿಗಳ ಬಳಿ ಅಲೆದರೂ ಸ್ಪಂದನೆ ಸಿಕ್ಕಿಲ್ಲ. ಕೊನೆಗೆ ಹೀಗಾದರೆ ಆಸ್ತಿ ಉಳಿಸಿಕೊಳ್ಳುವುದು ಕಷ್ಟ ಎಂದುಕೊಂಡು ಹೈಕೋರ್ಟ್ ಮೊರೆ ಹೋಗಿದ್ದಾರೆ ಆನೆಗುಂದಿ ಅವರು.
2022ರಲ್ಲೇ ಕೇಸ್:2022ರಲ್ಲೇ ಧಾರವಾಡ ಹೈಕೋರ್ಟ್‌ನಲ್ಲಿ ಈ ಬಗ್ಗೆ ಪ್ರಶ್ನಿಸಿ ಕೇಸ್ ದಾಖಲಿಸಲಾಗಿದೆ. ಹೈಕೋರ್ಟ್ ಕೂಡ ಒಂದು ಬಾರಿ ವಿಚಾರಣೆಯನ್ನೂ ಮಾಡಿದೆಯಂತೆ. ಈ ಸಂಬಂಧ ವಕ್ಫ್ ಬೋರ್ಡ್‌ಗೂ ನೋಟಿಸ್ ಹೋಗಿದೆಯಂತೆ. ಪ್ರಕರಣ ಇನ್ನು ವಿಚಾರಣಾ ಹಂತದಲ್ಲಿದೆ ಎಂದು ಉಲ್ಲಾಸ ಆನೆಗುಂದಿ ತಿಳಿಸುತ್ತಾರೆ.
ಇನ್ನೊಂದು ವಿಚಿತ್ರವೆಂದರೆ ಇವರ ಅಕ್ಕಪಕ್ಕದವರ ಹೊಲಗಳ ಪಹಣಿಯಲ್ಲೇ ವಕ್ಫ್ ಆಸ್ತಿ ಎಂದು ನಮೂದಾಗಿಲ್ಲ. ಆದರೆ ಈ 13 ಎಕರೆ ಹೊಲದ ಪಹಣಿಯಲ್ಲಿ ಮಾತ್ರ ಆ ರೀತಿ ನಮೂದಾಗಿದೆ. ತಮ್ಮ ಹೊಲವನ್ನೇ ಅದ್ಹೇಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಇವರನ್ನು ಕಾಡುತ್ತಿದೆ.ಇದು ಈ ರೈತರೊಬ್ಬರ ಕಥೆಯಲ್ಲ. ನವಲಗುಂದ ತಾಲೂಕಿನ ಕನ್ನೂರ, ಮೊರಬ, ಕೊಮರಗೊಪ್ಪ, ಅಣ್ಣಿಗೇರಿ ಸೇರಿದಂತೆ ಹಲವು ಗ್ರಾಮಗಳ ರೈತರ ಹೊಲಗಳೂ ವಕ್ಫ್ ಆಸ್ತಿ ಎಂದು ನಮೂದಾಗಿವೆ. ಈ ಬಗ್ಗೆ ಅಧಿಕಾರಿ ವರ್ಗ ಪರಿಶೀಲಿಸಬೇಕು ಎಂಬ ಆಗ್ರಹ ಇವರದ್ದು.
ಒಟ್ಟಿನಲ್ಲಿ ಈಗ ಗದ್ದಲ ಎದ್ದಿರುವ ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ 2022ರಲ್ಲೇ ಹೈಕೋರ್ಟ್ ಮೊರೆ ಹೋಗಿದ್ದು, ಆಗ ಎಷ್ಟೇ ಬೇಡಿಕೊಂಡರೂ ಕ್ಯಾರೆ ಎನ್ನದ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಇದೀಗ ವಕ್ಫ್ ಆಸ್ತಿ ವಿವಾದದ ಕುರಿತು ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಇದೀಗ ಭಾರೀ ಚರ್ಚೆಗೆ ಗ್ರಾಸವನ್ನುಂಟು ಮಾಡಿರುವುದಂತೂ ಸತ್ಯ.ನಮ್ಮ ಕುಟುಂಬದ ಹಿರಿಯರು 1932ರಲ್ಲೇ ಖರೀದಿ ಮಾಡಿರುವ ಆಸ್ತಿ ಇದೆ. ಆದರೆ 2020ರಲ್ಲಿ ಪರಿಶೀಲನೆ ನಡೆಸಿದಾಗ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಆಗ 2 ವರ್ಷ ಜನಪ್ರತಿನಿಧಿಗಳು, ಅಧಿಕಾರಿಗಳನ್ನೆಲ್ಲ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಹೈಕೋರ್ಟ್ ಮೊರೆ ಹೋಗಿದ್ದೇನೆ. ಪ್ರಕರಣ ವಿಚಾರಣಾ ಹಂತದಲ್ಲಿದೆ. ವಕ್ಫ್ ಬೋರ್ಡ್‌ಗೂ ನೋಟಿಸ್ ಹೋಗಿದೆ ಎಂದು ಉಲ್ಲಾಸ ಮಾಧವರಾವ ಆನೆಗುಂದಿ ಹೇಳಿದರು.