ಸಾರಾಂಶ
ಮುಸ್ಲಿಮರು ಎಲ್ಲೆಂದರಲ್ಲಿ ಭೂಮಿಯನ್ನು ದಾನ ಮಾಡುತ್ತಾರೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳುವುದು, ಗುರುತಿಸುವುದು ಮಸೀದಿಗೆ ಮತ್ತು ವಕ್ಫ್ ಮಂಡಳಿಗೆ ಕಷ್ಟಕರವಾಗಿರುತ್ತದೆ. ಆದ್ದರಿಂದ ನಿಜವಾಗಿ ದಾನ ಮಾಡಲಾದ ಭೂಮಿಗಿಂತಲೂ ಎಷ್ಟೋ ಪಾಲು ಕಡಿಮೆ ಭೂಮಿ ವಕ್ಫ್‌ನಲ್ಲಿ ನೊಂದಾಯಿಸಲ್ಪಟ್ಟಿದೆ ಎಂದು ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯ ವಕ್ತಾರ ಮುಷ್ತಾಕ್ ಹೆನ್ನಾಬೈಲ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ವಕ್ಫ್‌ನಲ್ಲಿ ನೋಂದಾಯಿಸಲ್ಪಟ್ಟಿರುವ ಭೂಮಿಯಲ್ಲಿ ವಕ್ಫ್ ಅಲ್ಲದ ಭೂಮಿ ಕೂಡ ಸೇರಿರುವ ಸಾಧ್ಯತೆ ಇದೆ, ಆದರೆ ಇದು ಹೀಗೆ ನೋಂದಾಯಿಸಿದ ಕಂದಾಯ ಇಲಾಖೆಯ ಸಮಸ್ಯೆಯೇ ಹೊರತು, ಅದು ವಕ್ಫ್ ಮಂಡಳಿಯ ಸಮಸ್ಯೆಯಲ್ಲ ಎಂದು ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆಯ ವಕ್ತಾರ ಮುಷ್ತಾಕ್ ಹೆನ್ನಾಬೈಲ್ ಹೇಳಿದರು.ಅವರು ಮಂಗಳವಾರ ಉಡುಪಿ ಜಾಮೀಯಾ ಮಸೀದಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಹಿಂದುಗಳು ದೇವಾಲಯದ ಸುತ್ತಮುತ್ತವೇ ಭೂಮಿಯನ್ನು ದಾನ ಬಿಡುತ್ತಾರೆ, ಅದರ ಉಸ್ತುವಾರಿ ದೇವಾಲಯಕ್ಕೆ ಸುಲಭವಾಗುತ್ತದೆ. ಆದರೆ ಮುಸ್ಲಿಮರು ಎಲ್ಲೆಂದರಲ್ಲಿ ಭೂಮಿಯನ್ನು ದಾನ ಮಾಡುತ್ತಾರೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳುವುದು, ಗುರುತಿಸುವುದು ಮಸೀದಿಗೆ ಮತ್ತು ವಕ್ಫ್ ಮಂಡಳಿಗೆ ಕಷ್ಟಕರವಾಗಿರುತ್ತದೆ. ಆದ್ದರಿಂದ ನಿಜವಾಗಿ ದಾನ ಮಾಡಲಾದ ಭೂಮಿಗಿಂತಲೂ ಎಷ್ಟೋ ಪಾಲು ಕಡಿಮೆ ಭೂಮಿ ವಕ್ಫ್‌ನಲ್ಲಿ ನೊಂದಾಯಿಸಲ್ಪಟ್ಟಿದೆ ಎಂದವರು ಹೇಳಿದರು.* ಆಸ್ತಿ ನುಂಗಿದ್ದು ಮುಸ್ಲಿಮರು
ದೇಶದಲ್ಲಿ ಅಧಿಕೃತ ದಾಖಲೆ ಇರುವ ಸುಮಾರು 9 ಲಕ್ಷ ಎಕ್ರೆಯಷ್ಟು ವಕ್ಫ್ ಭೂಮಿ ಇದೆ. ಇದು ನಿಜವಾದ ವಕ್ಫ್ ಭೂಮಿಗಿಂತ ಬಹಳ ಕಡಿಮೆಯಾಗಿದ್ದು, ಉಳಿದ ಭೂಮಿಯನ್ನು ನುಂಗಿದ್ದು ಮುಸ್ಲಿಮರೇ ಹೊರತು, ಹಿಂದುಗಳಲ್ಲ. ಈ ವಕ್ಫ್ ಆಸ್ತಿಯ ಕಬಳಿಕೆ, ಕಳಪೆ ನಿರ್ವಹಣೆಗೆ ಮುಸ್ಲಿಂ ಸಮುದಾಯವೇ ಹೊಣೆ ಎಂದವರು ಹೇಳಿದರು.* ಚುನಾವಣೆಗಾಗಿ ಅಪಪ್ರಚಾರ
ಪ್ರಚಾರ ನಡೆಸಲಾಗುತ್ತಿರುವಷ್ಟು ವ್ಯಾಪಕವಾಗಿ ವಕ್ಫ್ ಆಸ್ತಿಯು ಅಕ್ರಮ ನೋಂದಣಿಯಾಗಿಲ್ಲ. ಕೇವಲ ಉಪ ಚುನಾವಣಾ ರಾಜಕೀಯಕ್ಕಾಗಿ ಈ ರೀತಿ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ. ವಕ್ಫ್‌ಗೆ ಕೇವಲ ಮುಸ್ಲಿಮರು ಮಾತ್ರವಲ್ಲದೇ ಹಿಂದುಗಳೂ, ರಾಜರೂ ಭೂಮಿ ದಾನ ನೀಡಿದ್ದಾರೆ. ಈ ರೀತಿ ನೀಡಲಾದ ದಾನಗಳನ್ನು ಈಗ ಕಾನೂನು ರೂಪಿಸಿ ಹಿಂಪಡೆಯುವುದು ಕಾನೂನಾತ್ಮಕ ದರೋಡೆಯಾಗುತ್ತದೆ, ಹೊರತು ನ್ಯಾಯವಾಗುವುದಿಲ್ಲ ಎಂದವರು ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆ ತಿದ್ದುಪಡಿಯನ್ನು ಆಕ್ಷೇಪಿಸಿದರು.ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಸೊಹೈಲ್ ಅಹ್ಮದ್ ಮರೂರ್, ಗೌರವಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಕಾರ್ಯದರ್ಶಿ ಡಾ.ಹಕೀಮ್ ತೀರ್ಥಹಳ್ಳಿ, ಉಡುಪಿ ಜಾಮೀಯ ಮಸೀದಿಯ ಅಧ್ಯಕ್ಷ ರಿಯಾಝ್ ಅಹ್ಮದ್ ಮತ್ತಿತತರು ಉಪಸ್ಥಿತರಿದ್ದರು.
----------------ಹಿಂದೂ ನ್ಯಾಯಾಧೀಶರೇ ಹೆಚ್ಚುವೇದಿಕೆಯ ಮಾಜಿ ಅಧ್ಯಕ್ಷ, ನ್ಯಾಯವಾದಿ ಅನೀಸ್ ಪಾಶಾ ಮಾತನಾಡಿ, ದೇಶದಲ್ಲಿ ಫೋಕ್ಸೋ, ದೌರ್ಜನ್ಯ ಇತ್ಯಾದಿಗಳಿಗೆ ಪ್ರತ್ಯೇಕ ನ್ಯಾಯಾಲಯಗಳಿರುವಂತೆ ವಕ್ಫ್‌ಗೂ ಪ್ರತ್ಯೇಕ ನ್ಯಾಯಾಲಯ ಇದೆ. ಇದು ದೇಶದ ಸಂವಿಧಾನದಡಿಯಲ್ಲಿಯೇ, ಸರ್ಕಾರ ನೇಮಿಸುವ ಸಿಬ್ಬಂದಿ, ನ್ಯಾಯಾಧೀಶರಿಂದಲೇ ನಡೆಯುತ್ತವೆ. ಇದರಲ್ಲಿ ಹಿಂದೂ ನ್ಯಾಯಾಧೀಶರೇ ಜಾಸ್ತಿ ಇದ್ದಾರೆ. ಆದರೂ ವಕ್ಫ್ ನ್ಯಾಯಾಲಯಗಳ ಬಗ್ಗೆ ಅಪಪ್ರಚಾರ ನಡೆಸಲಾಗುತ್ತದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.