ಬೆಳಗಾವಿ ಜಿಲ್ಲೆಗೂ ವ್ಯಾಪಿಸಿದ ವಕ್ಫ್ ಆಸ್ತಿ ವಿವಾದ

| Published : Oct 31 2024, 12:50 AM IST

ಬೆಳಗಾವಿ ಜಿಲ್ಲೆಗೂ ವ್ಯಾಪಿಸಿದ ವಕ್ಫ್ ಆಸ್ತಿ ವಿವಾದ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ವಕ್ಫ್ ಆಸ್ತಿ ವಿವಾದ ಈಗ ಬೆಳಗಾವಿ ಜಿಲ್ಲೆಗೆ ವ್ಯಾಪಿಸಿದೆ. ಕಾಗವಾಡ ತಾಲೂಕಿನ ಉಗಾರ ಹಾಗೂ ಶೇಡಬಾಳ ಗ್ರಾಮಗಳ 10 ರೈತರ ಸುಮಾರು 17 ಎಕರೆ 37 ಗುಂಟೆ ಜಮೀನಿನ ಪಹಣಿಯ ಕಾಲಂ ನಂಬರ್‌ 11ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಕಾಗವಾಡ

ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ವಕ್ಫ್ ಆಸ್ತಿ ವಿವಾದ ಈಗ ಬೆಳಗಾವಿ ಜಿಲ್ಲೆಗೆ ವ್ಯಾಪಿಸಿದೆ. ಕಾಗವಾಡ ತಾಲೂಕಿನ ಉಗಾರ ಹಾಗೂ ಶೇಡಬಾಳ ಗ್ರಾಮಗಳ 10 ರೈತರ ಸುಮಾರು 17 ಎಕರೆ 37 ಗುಂಟೆ ಜಮೀನಿನ ಪಹಣಿಯ ಕಾಲಂ ನಂಬರ್‌ 11ರಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಬೆಳಕಿಗೆ ಬಂದಿದೆ.

ಉಗಾರ ಬಿಕೆ ಗ್ರಾಮದ ವಿವಿಧೋದ್ದೇಶ ಕೃಷಿ ಸಹಕಾರಿ ಪತ್ತಿನ ಸಂಘದ ಪತ್‌ ಬರೆಯಲು ರೈತರ ಉತಾರ ಪರಿಶೀಲಿಸುವಾಗ ಕೆಲ ರೈತರ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದೆ. ಮತ್ತಷ್ಟು ರೈತರ ಜಮೀನುಗಳ ಪಹಣಿ ತೆಗೆಸಿ ನೋಡಿದಾಗ ಒಟ್ಟು 10 ರೈತರ 17.37 ಎಕರೆ ವಕ್ಫ್‌ ಆಸ್ತಿ ಆಗಿರುವುದು ಬೆಳಕಿಗೆ ಬಂದಿದೆ. ಈ ಎರಡೂ ಗ್ರಾಮಗಳ ಎಲ್ಲ ರೈತರ ಉತಾರ ಪರಿಶೀಲನೆ ಮಾಡಿದರೆ ಮತ್ತಷ್ಟು ರೈತರ ಜಮೀನು ವಕ್ಫ್‌ ಹೆಸರಿಗೆ ಆಗಿರುವ ಸಂದೇಹ ಮೂಡುತ್ತಿದೆ ಎಂದು ಉಗಾರ ಬಿಕೆ ಗ್ರಾಮದ ಸಹಕಾರಿ ಸಂಘದ ಅಧ್ಯಕ್ಷ ಶೀತಲಗೌಡ ಪಾಟೀಲ ಆತಂಕ ವ್ಯಕ್ತಪಡಿಸಿದ್ದಾರೆ.ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ರೈತರ ಜಮೀನು ಪಹಣಿಯಲ್ಲಿರುವ ವಕ್ಫ್‌ ಆಸ್ತಿ ಎಂಬುದನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು, ಮುಂದೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮ್ಮದಖಾನ್ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಬಡವರನ್ನು ಉದ್ಧಾರ ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಹೇಳಿ ನಮ್ಮನ್ನು ನಂಬಿಸಿ ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಬಡ ರೈತರ ಜಮೀನುಗಳ ಮೇಲೆ ವಕ್ಫ್ ಎಂದು ಹೆಸರು ಸೇರ್ಪಡೆಯಾಗಿರುವುದನ್ನು ಖಂಡಿಸಿ, ಇದೇನಾ ನಿಮ್ಮ ಸರ್ಕಾರದ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ನಮ್ಮ ಉತಾರಗಳ ಮೇಲೆ ನಮೂದಾಗಿರುವ ವಕ್ಫ್ ಹೆಸರನ್ನು ಕಡಿಮೆ ಮಾಡಬೇಕು. ಇಲ್ಲದಿದ್ದರೆ ದೀಪಾವಳಿಯ ನಂತರ ಕಾಗವಾಡ ತಹಸೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ಮಾಡುತ್ತೇವೆ. ಒಂದು ವೇಳೆ ಸರ್ಕಾರ ಮನ್ನಣೆ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.