ಸಾರಾಂಶ
ಬ್ಯಾಡಗಿ: ಪರಿಸರ ನಾಶದಿಂದ ಜೀವ ಸಂಕುಲ ನಾಶದ ಎಚ್ಚರಿಕೆ ಗಂಟೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರಗಳು ಪರಿಸರ ರಕ್ಷಣೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ಒಳ್ಳೆಯ ಉದ್ದೇಶದಿಂದ ಕಳೆದ 1986ರಲ್ಲಿ ಪರಿಸರ (ಸಂರಕ್ಷಣೆ) ಕಾಯಿದೆ ಜಾರಿಗೊಳಿಸಲಾಯಿತು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಅಮೋಲ್ ಹಿರಿಕುಡೆ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ಅರಣ್ಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಮಾನವ ಪರಿಸರ ಕುರಿತು 1972 ಜೂನ್‌ನಲ್ಲಿ ವಿಶ್ವಸಂಸ್ಥೆಯು ಸ್ಟಾಕ್‌ಹೋಮ್‌ನಲ್ಲಿ ನಡೆಸಿದ ಸಮ್ಮೇಳನದಲ್ಲಿ ಭಾಗವಹಿಸಿದ್ದ ಭಾರತ ಘನ, ದ್ರವ, ಅನಿಲ ಸೇರಿದಂತೆ ಪರಿಸರದಲ್ಲಿನ ಇನ್ನಿತರ ವಸ್ತುಗಳು ಮಾಲಿನ್ಯ ಆಗಬಾರದು ಎಂಬ ಉದ್ದೇಶದಿಂದ ಮಾನವ ಪರಿಸರ ರಕ್ಷಣೆ ಮತ್ತು ಸುಧಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಯಿತು ಹೀಗಿದ್ದರೂ ಸಹ ಪ್ರಕೃತಿಯಡೆಗೆ ಮನುಷ್ಯನ ದಬ್ಬಾಳಿಕೆ ಮುಂದುವರೆದಿದ್ದು ಶೀಘ್ರದಲ್ಲೇ ಇದಕ್ಕೆ ತಕ್ಕಶಾಸ್ತಿ ಕಾದಿದೆ ಎಂದರು.
ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಆಧುನಿಕತೆ ಭರಾಟೆ ಜೋರಾಗಿದ್ದು ಪ್ರಕೃತಿ ಉಳಿವಿಗಿಂತ ಅಳಿವಿಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿದೆ, ಪ್ರಕೃತಿಯೊಂದಿಗೆ ಬೆರೆತು ಬದುಕುವ ಕಲೆಯನ್ನು ಮನುಷ್ಯ ಕಲಿಯಬೇಕಾಗಿದೆ ಆದ್ದರಿಂದ ನಾವೆಲ್ಲರೂ ಎಲ್ಲೆಡೆ ಹಸಿರಿನೊಂದಿಗೆ ಸಮೃದ್ಧವಾದ ಪರಿಸರ ನಿರ್ಮಿಸುವುದರ ಕಡೆಗೆ ಹೆಚ್ಚು ಒತ್ತು ಕೊಡಬೇಕಿದೆ ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್. ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ, ರಾಜಣ್ಣ ನ್ಯಾಮತಿ, ಕೆ.ಆರ್. ಲಮಾಣಿ, ವಲಯ ಅರಣ್ಯಾಧಿಕಾರಿ ಬಿ. ಅಣ್ಣಪ್ಪ ನ್ಯಾಯವಾದಿಗಳಾದ ಬಿ.ಜಿ. ಹಿರೇಮಠ, ಎಂ.ಪಿ. ಹಂಜಗಿ, ಎನ್.ವಿ. ಬಳಿಗಾರ, ಯಶೋಧರ ಅರ್ಕಾಚಾರಿ, ಸುರೇಶ ಕಾಟೇನಹಳ್ಳಿ, ಶ್ರೀನಿವಾಸ್ ಕೊಣ್ಣೂರ ಸೇರಿದಂತೆ ಪ್ಯಾನಲ್ ವಕೀಲರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.