ಕುಡಿಯುವ ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ

| Published : Mar 23 2024, 01:08 AM IST

ಕುಡಿಯುವ ನೀರು ಕೊಡದಿದ್ದರೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಭರಮಗಿರಿ ಗ್ರಾಮಸ್ಥರು ವಿವಿ ಸಾಗರದಿಂದ ಕೆರೆಗೆ ಮತ್ತು ಕುಡಿಯಲು ನೀರು ಪೂರೈಸಲು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಬಳಿಕ ಗ್ರಾಮಸ್ಥರಿಂದ ಸಚಿವ ಡಿ.ಸುಧಾಕರ್‌ಗೆ ಚುನಾವಣೆ ಬಹಿಷ್ಕಾರದ ಸಂದೇಶ ರವಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ವಾಣಿ ವಿಲಾಸ ಜಲಾಶಯದಿಂದ ಭರಮಗಿರಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಕೊಡದಿದ್ದರೆ ಲೋಕಸಭಾ ಚುನಾವಣೆ ಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಭರಮಗಿರಿ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಸಂದೇಶ ರವಾನಿಸಿದ್ದಾರೆ.

ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಗ್ರಾಮಸ್ಥರು ವಾಣಿವಿಲಾಸ ಜಲಾಶಯದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ನಮ್ಮ ಗ್ರಾಮಕ್ಕೆ ಕುಡಿ ಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮದಲ್ಲಿ ಕೆರೆ ಇದ್ದು ಇದೀಗ ನೀರಿಲ್ಲದೆ ಕೆರೆ ಬತ್ತಿ ಹೋಗಿದೆ. ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಸಾವಿರಾರು ಅಡಿಗಳಷ್ಟು ಕೊಳವೆ ಬಾವಿ ಕೊರೆಸಿದರು ಸಹ ನೀರು ಸಿಗುತ್ತಿಲ್ಲ. ರೈತರು ತೋಟವನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಆತ್ಮಹತ್ಯೆ ದಾರಿ ಹಿಡಿಯುವಂತಹ ಸ್ಥಿತಿ ನಿರ್ಮಾಣವಾಗಿದೆ.

ವಾಣಿವಿಲಾಸಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಭರಮಗಿರಿ, ಬಳಘಟ್ಟ, ತಳವಾರಟ್ಟಿ, ಅಗಳೇರಹಟ್ಟಿ, ಕಕ್ಕಯ್ಯನಹಟ್ಟಿ , ಕುಂಟಪ್ಪನಹಟ್ಟಿ ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತುಂಬಾ ಸಮಸ್ಯೆ ಉಂಟಾಗಿದೆ. ಭರಮಗಿರಿಯಿಂದ ಮೂರು ಕಿಲೋಮೀಟರ್ ಸಮೀಪದಲ್ಲಿರುವ ವಾಣಿ ವಿಲಾಸ ಜಲಾಶಯದಿಂದ ಭರಮಗಿರಿ ಕೆರೆಗೆ ನೀರು ಹರಿಸಬೇಕು. ನೂರಾರು ಕಿಲೋಮೀಟರ್ ದೂರದವರೆಗೆ ನೀರು ಕೊಡಲು ಆಗುತ್ತದೆ. ಆದರೆ ಡ್ಯಾಂನ ಪಕ್ಕದಲ್ಲೇ ಇರುವ ಹಳ್ಳಿಗಳಿಗೆ ನೀರು ಕೊಡಲಾಗುತ್ತಿಲ್ಲ. ಹಾಗಾಗಿ ಸಚಿವರಿಗೆ ಮನವಿ ಮಾಡುತ್ತಿದ್ದೇವೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಬರಲಿರುವ ಚುನಾವಣೆ ಬಹಿಷ್ಕರಿಸಲು ಸಭೆಯಲ್ಲಿ ಗ್ರಾಮಸ್ಥರು ತೀರ್ಮಾನಿಸಿದರು.