ಕುರುಗೋಡು: ತಾಲೂಕಿನ ಗೆಣಿಕೆಹಾಳು ಮತ್ತು ಕುರುಗೋಡಿನ ಕೃಷಿ ಪರಿಕರ ಮಾರಾಟಗಾರರ ಅಂಗಡಿಗಳಿಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಜಿಲ್ಲಾ ಉಪ ಕೃಷಿ ನಿರ್ದೇಶಕ ಮಂಜುನಾಥ ರಸಗೊಬ್ಬರ, ಬೀಜ ಮತ್ತು ಕ್ರಿಮಿನಾಶಕಗಳ ದಾಸ್ತಾನು ಪರಿಶೀಲಿಸಿದರು.

ಮುಂಗಾರು ಆರಂಭಗೊಂಡಿದ್ದು, ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕಗಳ ಅಗತ್ಯವಿದೆ. ರೈತರಿಗೆ ಬೇಕಾಗುವ ಕೃಷಿ ಪರಿಕರಗಳನ್ನು ನಿಗದಿತ ಬೆಲೆಯಲ್ಲಿ ಮಾರಾಟ ಮಾಡಬೇಕು. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವ ರಸಗೊಬ್ಬರ, ಬೀಜ ಮತ್ತು ಕ್ರಿಮಿನಾಶಕ ಕೃತಕ ಮುಗ್ಗಟ್ಟು ಸೃಷ್ಟಿಸಿದರೆ ಮಾರಾಟ ಪರವಾನಗಿ ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬೇಡಿಕೆ ಹೆಚ್ಚಿರುವ ಯೂರಿಯಾ, ಡಿಎಪಿ ಖರೀದಿಗೆ ಬರುವ ರೈತರಿಗೆ ಕ್ರಿಮಿನಾಶಕ ಲಿಂಕ್ ಮಾಡಿ ಮಾರಾಟ ಮಾಡುವುದು ಮತ್ತು ಮುಖಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಮತ್ತು ಕೃತಕ ಮುಗ್ಗಟ್ಟು ಸೃಷ್ಟಿ ಮಾಡುವುದು ಕಂಡುಬಂದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಹಾಯಕ ಕೃಷಿ ನಿರ್ದೇಶಕ ಕೆ.ಗರ್ಜೆಪ್ಪ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತಾಲೂಕಿನ ರೈತರು ಮೆಣಸಿನಕಾಯಿ ಬದಲು ಮೆಕ್ಕೆಜೋಳ ಬೆಳೆಯತ್ತ ವಾಲಿರುವುದು ಕಂಡುಬರುತ್ತಿದೆ. ಯೂರಿಯಾ ರಸಗೊಬ್ಬರಕ್ಕೆ ಹೆಚ್ಚು ಬೇಡಿಕೆ ಬರುವ ಲಕ್ಷಣಗಳು ಕಂಡುಬರುತ್ತಿದೆ. ಯೂರಿಯಾ ರಸಗೊಬ್ಬರದ ಸಣ್ಣ ಮತ್ತು ದಪ್ಪನೆಯ ಹರಳಿನಲ್ಲಿ ಯಾವುದೇ ಸಾರಜನಕ ಅಂಶದ ವ್ಯತ್ಯಾಸ ಇರುವುದಿಲ್ಲ. ಎರಡರಲ್ಲಿಯೂ ಶೇ.೪೬ರಷ್ಟು ಪ್ರಮಾಣದಲ್ಲಿ ಸಾರಜನಕವಿರುತ್ತದೆ. ರೈತರು ಗೊಂಡಲಕ್ಕೀಡಾಗುವುದು ಬೇಡ. ಸದ್ಯ ತಾಲೂಕಿನಲ್ಲಿ ಯೂರಿಯಾ ರಸಗೊಬ್ಬರ ಅಭಾವವಿಲ್ಲ ಎಂದು ಸಲಹೆ ನೀಡಿದರು.

ಕ್ರಿಮಿನಾಶಕ ಮತ್ತು ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ದಾಸ್ತಾನು ಮಾಹಿತಿಯನ್ನು ಎಲ್ಲರಿಗೆ ಕಾಣುವಂತೆ ಫಲಕದಲ್ಲಿ ನಮೂಡಿಸಬೇಕು. ರಸಗೊಬ್ಬರ ಖರೀದಿಸುವ ಪ್ರತಿ ರೈತರಿಗೆ ಜಿಎಸ್‌ಟಿ ಬಿಲ್ ನೀಡಬೇಕು. ಹೆಚ್ಚು ಬೇಡಿಕೆ ಇರುವ ಯೂರಿಯಾ, ಡಿಎಪಿ ರಸಗೊಬ್ಬರ ವಿತರಿಸುವಾಗ ಕಡ್ಡಾಯವಾಗಿ ಕೆ.ಕಿಸಾನ್ ಪೋರ್ಟ್ಲ್ ಹಾಗೂ ಒಪಿಎಸ್ ಯಂತ್ರದ ಮೂಲಕ ಹಬ್ಬೆಟ್ಟಿನ ಗುರುತು ಪಡೆದು ವಿತರಿಸುವುದು ಕಡ್ಡಾಯ ಎಂದು ಎಚ್ಚರಿಸಿದರು.


ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ದೇವರಾಜ ಇದ್ದರು.