ಸಾರಾಂಶ
ಚಿತ್ರದುರ್ಗ: ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರ ವರ್ಗಾವಣೆ ಮಾಡಲು ರಾಜ್ಯ ಸರ್ಕಾರಕ್ಕೆ ಅಷ್ಟೊಂದು ತುರ್ತು ಇತ್ತಾ? ಅವರ ಮೇಲೆ ಏನಾದರೂ ಭ್ರಷ್ಚಾಚಾರದ ಆರೋಪಗಳಿದ್ದವಾ? ರಾತ್ರೋ ರಾತ್ರಿ ವರ್ಗಾವಣೆ ಮಾಡಿ ಮರುದಿನ ಬೆಳಗ್ಗೆ ಮತ್ತೊಬ್ಬರು ಅಧಿಕಾರ ಸ್ವೀಕರಿಸಿದ್ದರ ಹಿಂದಿನ ಜರೂರತ್ತು ಏನು? ಎಸಿಯಾಗಿ ಹಿಂದೊಮ್ಮೆ ಇಲ್ಲಿಯೇ ಕೆಲಸ ಮಾಡಿದವರಿಗೆ ಮತ್ತೆ ಮರಳಿ ಡಿಸಿಯಾಗಿ ನಿಯೋಜಿಸುವ ಅಗತ್ಯವಾದರೂ ಏನಿತ್ತು.
ಜಿಲ್ಲಾಧಿಕಾರಿ ದಿವ್ಯಾಪ್ರಭು ವರ್ಗಾವಣೆಗೆ ಸಂಬಂಧಿಸಿದಂತೆ ಚಿತ್ರದುರ್ಗದ ಜನರಲ್ಲಿ ಮೂಡಿರುವ ಪ್ರಶ್ನೆಗಳಿವು. ಅಧಿಕಾರಿಗಳಿಗೆ ವರ್ಗಾವಣೆ ಸಹಜ. ಸರ್ಕಾರದ ತೀರ್ಮಾನಕ್ಕೆ ಅಧಿಕಾರಿಗಳು ಬದ್ಧವಾಗಿರಬೇಕು ಎಂಬುದು ನಿಜವಾದರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದವರ ಕೇವಲ 14 ತಿಂಗಳಿಗೆ ವರ್ಗಾವಣೆ ಮಾಡಿದ ಸರ್ಕಾರದ ಕ್ರಮ ಹಲವರಲ್ಲಿ ಅಸಮಾಧಾನ ತಂದಿದೆ. ರಾಜ್ಯ ಸರ್ಕಾರ ದಿವ್ಯಾಪ್ರಭು ವರ್ಗಾವಣೆಯಲ್ಲಿ ಅದೆಷ್ಟು ಅವಸರ ಮಾಡಿಕೊಂಡಿದೆಯೆಂದರೆ ಅವರಿಗೆ ಜಾಗವನ್ನೇ ತೋರಿಸಿಲ್ಲ. ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡುವಾಗ ಸಣ್ಣದೊಂದು ಪಟ್ಟಿ ಇರುತ್ತದೆ. ಆದರೆ ದಿವ್ಯಾಪ್ರಭು ವಿಷಯದಲ್ಲಿ ಒಬ್ಬರದೇ ವರ್ಗಾವಣೆ ಆದೇಶ ಹೊರಡಿಸಲಾಗಿದೆ.ಹಾಗೆ ನೋಡಿದರೆ ಎರಡು ತಿಂಗಳ ಹಿಂದೆ ದಿವ್ಯಾಪ್ರಭು ಅವರ ವರ್ಗಾವಣೆಗೆ ಪ್ರಯತ್ನಗಳು ನಡೆದಿದ್ದವು. ಈ ಸೂಕ್ಷ್ಮವನ್ನು ಕನ್ನಡಪ್ರಭ ಮೊದಲೇ ವರದಿ ಮಾಡಿತ್ತು. ಅಕ್ರಮ ಗಣಿಗಾರಿಕೆಗೆ ಅವಕಾಶಗಳ ಕೊಡುತ್ತಿಲ್ಲವೆಂಬ ಕೀರಲು ದನಿಗಳು ಡಿಸಿ ಮೇಲೆ ಕೇಳಿ ಬಂದಿದ್ದವು. ನಂತರ ಒಂದಿಬ್ಬರು ಶಾಸಕರು ಮುಖ್ಯಮಂತ್ರಿ ಮೇಲೆ ಒತ್ತಡ ತಂದು ವರ್ಗಾವಣೆಯಲ್ಲಿ ಯಶ ಕಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಹೊತ್ತಿರುವ ಹಿರಿಯ ಐಎಎಸ್ ಅಧಿಕಾರಿಯೊರ್ವರು ದನಿಗೂಡಿಸಿದ್ದಾರೆಂದು ಅಧಿಕಾರಿ ವಲಯದಲ್ಲಿ ಚರ್ಚೆಯಾಗುತ್ತಿದೆ.
ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಕೈಗೊಂಡಿದ್ದಕ್ಕಾಗಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರನ್ನು ಭಾರತ ಚುನಾವಣಾ ಆಯೋಗ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಗುರುವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಿವ್ಯಾಪ್ರಭು ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.ಪ್ರಶಸ್ತಿ ಪಡೆಯುವ ಸಂಬಂಧ ದಿವ್ಯಾಪ್ರಭು ದೆಹಲಿಗೆ ವಿಮಾನ ಏರುತ್ತಿದ್ದಂತೆ ಇತ್ತ ಅವರನ್ನು ವರ್ಗಾವಣೆ ಮಾಡಲಾಗಿದೆ. ಪ್ರಶಸ್ತಿ ಕೈಲಿಡಿದು ವಾಪಾಸ್ ಬರುವಷ್ಟರದಲ್ಲಿ ದಿವ್ಯಾಪ್ರಭು ಅವರ ವಿಳಾಸ ಬದಲಾಗಿದೆ. ಅಷ್ಟೊಂದು ಅವಸರದಲ್ಲಿ ವರ್ಗಾವಣೆ ಪ್ರಕ್ರಿಯೆ ಮುಗಿದು ಹೋಗಿದೆ.