ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ನಾಯಕನಹಟ್ಟಿನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಘನತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಸಮಸ್ಯೆಗಳು ಎದುರಾಗಿವೆ. ತಾಯಿ-ಮಕ್ಕಳ ಆಸ್ಪತ್ರೆ ಸನಿಹದಲ್ಲೇ ತ್ಯಾಜ್ಯ ಸುರಿಯುತ್ತಿರುವುದರಿಂದ ನವಜಾತ ಶಿಶು, ಬಾಣಂತಿಯರ ಅನಾರೋಗ್ಯ ಉಲ್ಬಣಕ್ಕೆ ಕಾರಣವಾಗುತ್ತಿದೆ.
ಪಟ್ಟಣದಲ್ಲಿ 14 ವಾರ್ಡುಗಳಲ್ಲಿ ನಿತ್ಯ ಸಂಗ್ರಹವಾಗುತ್ತಿರುವ ಘನತ್ಯಾಜ್ಯವನ್ನು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ, ತಾಯಿ-ಮಕ್ಕಳ ಆಸ್ಪತ್ರೆ ಪಕ್ಕದ ಪ್ರವಾಸಿ ಮಂದಿರಕ್ಕೆ ಹೊಂದಿಕೊಂಡಂತೆ ಇರುವ ಜಾಗದಲ್ಲಿ ಸುರಿಯುತ್ತಾ ಬಂದಿದೆ. ಒಣಕಸ, ಹಸಿಕಸ ಬೇರ್ಪಡಿಸಿ ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂಬುದಾಗಿ ಸರ್ಕಾರ ಸ್ಪಷ್ಟವಾಗಿ ಸುತ್ತೋಲೆಯಲ್ಲಿ ತಿಳಿಸಿದ್ದರೂ, ಪಟ್ಟಣ ಪಂಚಾಯಿತಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತೆ ಕಾಣಿಸುತ್ತಿದೆ.ಉತ್ತರಕ್ಕೆ ಪ್ರವಾಸಿ ಕೇಂದ್ರ, ತಾಯಿ ಮಕ್ಕಳ ಆಸ್ಪತ್ರೆ ಕೇವಲ 50 ಮೀಟರ್ ಸಮೀಪದಲ್ಲಿವೆ. ಪೂರ್ವಕ್ಕೆ ನೀರು ಸಂಸ್ಕರಣಾ ಘಟಕ ಇದೆ. ಅದರ ಪಕ್ಕದಲ್ಲೇ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸಂಬಂಧಿಸಿದ ಹತ್ತಾರು ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ನೆಟ್ಟು ಬೆಳೆಸಿರುವ ಸುಂದರ ಉದ್ಯಾನ ಇದೆ. ಚಿಕ್ಕಕೆರೆ ಏರಿ ಮೇಲೆಯೇ ಈ ಕಸದ ರಾಶಿಯನ್ನು ಹಾಕುತ್ತಿರುವುದರಿಂದ ಉತ್ತರ- ಪೂರ್ವಕ್ಕೆ ಗಾಳಿ ಬೀಸಿದಾಗಲೆಲ್ಲಾ ಪ್ಲಾಸ್ಟಿಕ್ ತ್ಯಾಜ್ಯ ಹಾರಿ ಆಸ್ಪತ್ರೆ, ನೀರು ಸಂಸ್ಕರಣ ಘಟಕ ಸೇರುತ್ತಿದೆ ಎಂಬುದಾಗಿ ಪಟ್ಟಣದ ನಿವಾಸಿ ತಿಪ್ಪೇರುದ್ರಪ್ಪ ದೂರುತ್ತಾರೆ.
ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ನೈರ್ಮಲ್ಯ, ಶುಚಿತ್ವ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಸ್ವಚ್ಛತೆ ಕುರಿತು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ. ಈಚೆಗೆ ಅಕ್ಟೋಬರ್ 2 ವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮ ಕೂಡ ಜಾರಿಗೊಳಿಸಿದೆ. ದುರಂತ ಅಂದರೆ ನಾಗರಿಕರಿಗೆ ನಿತ್ಯ ಕಿರಿಕಿರಿ ಉಂಟುಮಾಡುವಂತೆ ತ್ಯಾಜ್ಯ ರಾಶಿ ಹಾಕುತ್ತಾ ಬಂದಿರುವ ಪಟ್ಟಣ ಪಂಚಾಯಿತಿ ಹೊರಮಠದಲ್ಲಿ ಕಾಂಗ್ರೆಸ್ ಗಿಡ ಕೀಳುವ ಮೂಲಕ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿರುವುದು ವ್ಯವಸ್ಥೆಯ ದುರಂತಕ್ಕೆ ಸಾಕ್ಷಿಯಾಗಿದೆ.ಘನತ್ಯಾಜ್ಯ ನಿರ್ವಹಣೆಗಾಗಿಯೇ ಪಟ್ಟಣ ಪಂಚಾಯಿತಿ ಪಟ್ಟಣದಿಂದ 15 ಕಿಮಿ ದೂರದ ಮುಷ್ಟಲಗುಮ್ಮಿ ಗ್ರಾಮದ ಬಳಿ ಸ್ಥಳ ಗುರುತಿಸಿ ಹಲವು ವರ್ಷಗಳೇ ಗತಿಸಿವೆ. ಆದರೆ, ತ್ಯಾಜ್ಯ ಅಲ್ಲಿ ಸಂಗ್ರಹಿಸಿ ವೈಜ್ಞಾನಿಕವಾಗಿ ನಿರ್ವಹಣೆ ಆರಂಭಿಸಿಲ್ಲ. ಸ್ವಚ್ಛತೆ ಪಟ್ಟಣದ ಬಹುದೊಡ್ಡ ಸಮಸ್ಯೆ ಆಗಿ ಪರಿಣಮಿಸಿದೆ. ಕಸ ನಿರ್ವಹಿಸುವ ಟ್ರ್ಯಾಕ್ಟರ್ ಚಾಲಕರಿಗೂ ಕಳೆದ ಆರು ತಿಂಗಳಿಂದ ವೇತನ ಪಾವತಿಸಿಲ್ಲ ಎಂದು ಆರೋಪಿಸಲಾಗಿದೆ. ದೇಗುಲದ ಸ್ಥಳದಲ್ಲಿ ಅರಣ್ಯ ಇಲಾಖೆ ಗಿಡನೆಟ್ಟು ಸುಂದರ ತಾಣ ಮಾಡಿದೆ. ಇಡೀ ಪಟ್ಟಣದಲ್ಲಿ ಈ ಒಂದು ಸ್ಥಳ ಬಿಟ್ಟರೆ ವಿಹಾರ ತಾಣ ಮತ್ತೊಂದಿಲ್ಲ. ಇಂಥ ತಾಣದಲ್ಲಿ ಘನತ್ಯಾಜ್ಯ ಸುರಿಯುತ್ತಿರುವುದರಿಂದ ನಾಗರಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ ಎನ್ನುತ್ತಾರೆ ನಾಯಕನಹಟ್ಟಿ ನಿವಾಸಿ ತಿಪ್ಪೇರುದ್ರಪ್ಪ.* ಸ್ವಚ್ಛತೆಗೊಳಿಸಲು ಹೇಳಿದ್ದೇನೆ...
ಕಸದ ರಾಶಿಯಿಂದ ಉಂಟಾಗುತ್ತಿರುವ ಅನಾರೋಗ್ಯಕಾರಿ ವಾತಾವರಣ ಕುರಿತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ತಿಳಿಸಿದ್ದೇನೆ. ಕೂಡಲೇ ಸ್ವಚ್ಛಗೊಳಿಸುವಂತೆ ಮನವಿ ಕೂಡ ಮಾಡಿದ್ದೇನೆ. ಆದರೆ, ನಿರ್ಲಕ್ಷಿಸಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕಾಶಿ ಹೇಳಿದರು.ಇನ್ನು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಓ.ಶ್ರೀನಿವಾಸ, ಪಟ್ಟಣ ಪಂಚಾಯಿತಿ ನಿರ್ವಹಣೆಗೆ ಅನುದಾನದ ಕೊರತೆ ಎದುರಿಸುತ್ತಿದೆ. ಕರ ವಸೂಲಿ ಸಾಲುತ್ತಿಲ್ಲ. ಆಸ್ಪತ್ರೆಯ ಹತ್ತಿರ ಹಲ ವರ್ಷಗಳಿಂದ ಕಸ ಹಾಕುವುದು ರೂಢಿ ಆಗಿದೆ. ಅಧಿಕಾರ ಸ್ವೀಕರಿಸಿ ತಿಂಗಳಾಗಿದೆ. ಆಸ್ಪತ್ರೆ ಸನಿಹ ತ್ಯಾಜ್ಯ ಹಾಕುವುದನ್ನು ತಕ್ಷಣ ನಿಲ್ಲಿಸಿ, ಸ್ವಚ್ಛಗೊಳಿಸಲಾಗುವುದು ಎಂದರು.