ಉಡುಪಿ ನಗರಸಭೆಯ ಕೊಡವೂರು ವಾರ್ಡಿನ ವಿಪ್ರ ಭವನದ ಬಳಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 4 ಕೋಟಿ ರು. ವೆಚ್ಚದಲ್ಲಿ ನಡೆಯುವ ಇಂದ್ರಾಣಿ ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.
ಉಡುಪಿ: ಉಡುಪಿ ನಗರಸಭೆಯ ಕೊಡವೂರು ವಾರ್ಡಿನ ವಿಪ್ರ ಭವನದ ಬಳಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 4 ಕೋಟಿ ರು. ವೆಚ್ಚದಲ್ಲಿ ನಡೆಯುವ ಇಂದ್ರಾಣಿ ನದಿದಂಡೆ ಸಂರಕ್ಷಣಾ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಅವರು, ಕೊಡವೂರು ಭಾಗದ ಜನತೆಯ ಬಹುದಿನದ ಬೇಡಿಕೆಯಾಗಿರುವ ನದಿದಂಡೆ ಸಂರಕ್ಷಣಾ ಕಾಮಗಾರಿಗೆ ವಿಶೇಷ ಆದ್ಯತೆ ನೀಡಿ ಸಣ್ಣ ನೀರಾವರಿ ಇಲಾಖೆಯ ಮೂಲಕ 4 ಕೋಟಿ ರು. ಅನುದಾನ ಒದಗಿಸಿ ಕಾಮಗಾರಿ ಆರಂಭಗೊಂಡಿದೆ. ಇಂದ್ರಾಣಿ ನದಿ ತ್ಯಾಜ್ಯ ನೀರಿನಿಂದ ಮಲಿನಗೊಂಡು ಸ್ಥಳೀಯ ಜನರು ಗಂಭೀರ ಸಮಸ್ಯೆ ಎದುರಿಸುತ್ತಿದ್ದು ಈಗಾಗಲೇ 30 ಕೋಟಿ ರು. ವೆಚ್ಚದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಉನ್ನತೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಈ ಸಮಸ್ಯೆ ಪರಿಹಾರವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.ನಿಕಟಪೂರ್ವ ನಗರಸಭಾ ಸದಸ್ಯ ವಿಜಯ ಕೊಡವೂರು ಮಾತನಾಡಿ ಶಾಸಕ ಯಶ್ ಪಾಲ್ ಸುವರ್ಣ ಕೊಡವೂರು ವಾರ್ಡಿನ 3 ಕೆರೆಗಳ ಅಭಿವೃದ್ಧಿಗೆ ಸುಮಾರು 2.25 ಕೋಟಿ ರು. ಅನುದಾನ ಒದಗಿಸಿದ್ದು, ಹಲವು ರಸ್ತೆಗಳ ಅಭಿವೃದ್ಧಿ, ದಾರಿ ದೀಪ ವ್ಯವಸ್ಥೆ, ನಮ್ಮ ಕ್ಲಿನಿಕ್ ಸಹಿತ ವಿವಿಧ ಯೋಜನೆಗಳಿಗೆ ವಿಶೇಷ ಸಹಕಾರ ನೀಡಿದ್ದಾರೆ, ಇಂದ್ರಾಣಿ ನದಿದಂಡೆ ಸಂರಕ್ಷಣಾ ಕಾಮಗಾರಿಗೆ 4 ಕೋಟಿ ರು. ಅನುದಾನ ಮಂಜೂರು ಮಾಡಿರುವ ಶಾಸಕರಿಗೆ ವಾರ್ಡಿನ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.ನಗರಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ಸ್ಥಳೀಯ ಮುಖಂಡರಾದ ರವಿರಾಜ್ ಹೆಗ್ಡೆ, ಕಾಳು ಸೇರಿಗಾರ, ರಾಘವೇಂದ್ರ ರಾವ್, ಹರೀಶ್ ಕೆ. ಕೋಟ್ಯಾನ್, ನಾರಾಯಣ ಬಲ್ಲಾಳ್, ವಿನಯ ಪಡುಕರೆ, ಹರೀಶ್ ಪಾಳೆಕಟ್ಟೆ, ಅಮಿತ್ ಗರ್ಡೆ, ವಿನಯ ಗರ್ಡೆ ಉಪಸ್ಥಿತರಿದ್ದರು. ಪ್ರಭಾತ್ ಕೊಡವೂರು ಸ್ವಾಗತಿಸಿ, ರವಿ ಸಾಲ್ಯಾನ್ ಪಾಳೆಕಟ್ಟೆ ವಂದಿಸಿದರು.