ಸ್ಮಾರ್ಟ್‌ಸಿಟಿ ಕಾಮಗಾರಿಗಳ ರಕ್ಷಣೆಗೆ ವಾಚ್‌ಮನ್‌!

| Published : Apr 28 2025, 12:50 AM IST

ಸಾರಾಂಶ

ಸ್ಮಾರ್ಟ್‌ಸಿಟಿ ಕಾಮಗಾರಿಗಳ ರಕ್ಷಣೆಗೆ ವಾಚ್‌ಮನ್‌ಗಳ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. 64 ವಾಚ್‌ಮನ್‌ಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. ಎಲ್ಲರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿರುವ ಪಾಲಿಕೆಯು ಪ್ರತಿಯೊಬ್ಬ ವಾಚ್‌ಮನ್‌ಗೂ ತಿಂಗಳಿಗೆ ₹22991.8 ವೇತನ ನೀಡಲಿದೆ.

ಶಿವಾನಂದ ಗೊಂಬಿ ಹುಬ್ಬಳ್ಳಿ

ಹುಬ್ಬಳ್ಳಿ- ಧಾರವಾಡದಲ್ಲಿ ಇತ್ತೀಚಿಗಷ್ಟೇ ಸ್ಥಗಿತಗೊಂಡಿರುವ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳ ರಕ್ಷಣೆಗೆ ಪಾಲಿಕೆಯೇ ಇದೀಗ ವಾಚ್‌ಮನ್‌ ನೇಮಕ ಮಾಡಿಕೊಳ್ಳಲು ಮುಂದಾಗಿದೆ.

2018ರಲ್ಲಿ ಪ್ರಾರಂಭವಾಗಿದ್ದ ಸ್ಮಾರ್ಟ್‌ಸಿಟಿ ಯೋಜನೆಯು ಮಾರ್ಚ್‌ 31ರ ವರೆಗೆ ಇತ್ತು. ರಾಜ್ಯದಲ್ಲಿ ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನೆಲ್ಲ ಸಂಬಂಧಿಸಿದ ಇಲಾಖೆಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸುವಂತೆ ಸೂಚಿಸಿತ್ತು. ಕೇಂದ್ರ ಸರ್ಕಾರವೂ ಏ. 7ರಂದು ಸಭೆ ನಡೆಸಿತ್ತು. ಅದರಲ್ಲಿ ರಾಜ್ಯ ಸರ್ಕಾರ ಬಯಸಿದರೆ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳನ್ನು ಮುಂದುವರಿಸಬಹುದು. ಇಲ್ಲವೇ ಆಯಾ ಇಲಾಖೆಗಳಿಗೆ ಹಸ್ತಾಂತರಿಸಬಹುದು ಎಂದು ತಿಳಿಸಿತ್ತು. ಹೀಗಾಗಿ ಇನ್ಮುಂದೆ ಕೇಂದ್ರದಿಂದ ದುಡ್ಡು ಬರಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಇದೀಗ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ಈಗಾಗಲೇ ಪಾಲಿಕೆಗೆ ಹಸ್ತಾಂತರಿಸಿಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ 63 ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಅದರಲ್ಲಿ 61 ಕಾಮಗಾರಿಗಳು ಪೂರ್ಣಗೊಂಡಿದ್ದು, ಸ್ಪೋರ್ಟ್ಸ್‌ ಕ್ಲಬ್‌ ಹಾಗೂ ಮಲ್ಟಿ ಕಾರ್‌ ಪಾರ್ಕಿಂಗ್‌ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಅವುಗಳನ್ನು ಹಸ್ತಾಂತರಿಸುವ ಬಗ್ಗೆ ಇನ್ನು ಚರ್ಚೆ ನಡೆದಿದೆ. ಆದರೆ, ಉಳಿದ 61 ಕಾಮಗಾರಿಗಳನ್ನು ಹಸ್ತಾಂತರಿಸಲಾಗಿದೆ. ಜತೆಗೆ ತಾನು ಕೈಗೊಂಡು ಪಾಲಿಕೆಗೆ ಹಸ್ತಾಂತರಿಸಿದ ಕಾಮಗಾರಿಗಳ ನಿರ್ವಹಣೆಗೆ ₹41.19 ಕೋಟಿಯನ್ನು ಪಾಲಿಕೆಗೆ ಜಮೆ ಮಾಡಿದೆ. ಈ ಹಣದಲ್ಲಿ ಇದೀಗ ಪಾಲಿಕೆಯು ತಾನು ಹಸ್ತಾಂತರಿಸಿಕೊಂಡಿರುವ ಎಸ್‌ಡಬ್ಲುಎಂ ಕಾಂಪ್ಯಾಕ್ಟರ್‌ ಸ್ಟೇಷನ್‌, ಉದ್ಯಾನವನ, ಸ್ಮಶಾನ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಿರ್ವಹಿಸುವ ಜತೆ ಜತೆಗೆ ಇದೀಗ ಅವುಗಳ ರಕ್ಷಣೆಯ ಹೊಣೆಯೂ ಪಾಲಿಕೆ ಹೆಗಲೇರಿದೆ.

ವಾಚ್‌ಮನ್‌ ನೇಮಕ: ಈ ಕಾಮಗಾರಿಗಳ ರಕ್ಷಣೆಗೆ ವಾಚ್‌ಮನ್‌ಗಳ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. 64 ವಾಚ್‌ಮನ್‌ಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. ಎಲ್ಲರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿರುವ ಪಾಲಿಕೆಯು ಪ್ರತಿಯೊಬ್ಬ ವಾಚ್‌ಮನ್‌ಗೂ ತಿಂಗಳಿಗೆ ₹22991.8 ವೇತನ ನೀಡಲಿದೆ. ಇದಕ್ಕಾಗಿ ಪಾಲಿಕೆಯಿಂದ ₹14,71,475 ತಿಂಗಳಿಗೆ ಖರ್ಚಾಗಲಿದ್ದರೆ, ವರ್ಷಕ್ಕೆ ₹1.72 ಕೋಟಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಸಭೆಯಲ್ಲಿ ಅಂತಿಮ ನಿರ್ಧಾರ: ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಕುರಿತಂತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಜತೆಗೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡ ಕೆಲ ಉದ್ಯಾನವನ, ಈಜುಕೊಳ ಸೇರಿದಂತೆ ವಿವಿಧವುಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲು ಕೂಡ ಚಿಂತನೆಯನ್ನು ಪಾಲಿಕೆ ಮಾಡುತ್ತಿದೆ. ಸದ್ಯಕ್ಕೆ ವಾಚ್‌ಮನ್‌ಗಳನ್ನು ನೇಮಿಸಿಕೊಂಡು ಆಸ್ತಿಗಳನ್ನು ರಕ್ಷಿಸುವ ಉದ್ದೇಶವನ್ನು ಪಾಲಿಕೆ ಹೊಂದಿರುವುದಂತೂ ಸತ್ಯ.

ಏನೇ ಆಗಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಬಗ್ಗೆ ಅಪಸ್ವರವಂತೂ ಇದ್ದೇ ಇದೆ. ಯಾವೊಂದು ಕಾಮಗಾರಿಯೂ ಹೇಳಿಕೊಳ್ಳುವಂತೆ ಆಗಿಲ್ಲ ಎಂಬುದು ಅಷ್ಟೇ ಸ್ಪಷ್ಟ. ಇದೀಗ ಅವುಗಳ ರಕ್ಷಣೆಗೆ ವಾಚ್‌ಮನ್‌ ನೇಮಿಸಲು ಹೊರಟಿರುವುದು ಒಳ್ಳೆಯದೇ. ಜತೆ ಜತೆಗೆ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳನ್ನು ಇನ್ನಾದರೂ ಸಮರ್ಪಕವಾಗಿ ಕೈಗೊಂಡು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲಿನ ಆಗ್ರಹ.